ಆದಾಯ ಹೆಚ್ಚಳಕ್ಕೆ ಜಾಹೀರಾತುಗಳ ಪ್ರಮಾಣ ಹೆಚ್ಚಿಸಲು ರೈಲ್ವೆ ಚಿಂತನೆ
ಹೊಸದಿಲ್ಲಿ,ಎ.29: ರೈಲ್ವೆಯು ತನ್ನ ಶುಲ್ಕೇತರ ಆದಾಯವನ್ನು ಹೆಚ್ಚಿಸಿಕೊಳ್ಳಲು ನಿಲ್ದಾಣಗಳ ಕಟ್ಟಡಗಳ ಮೇಲೆ ಜಾಹೀರಾತುಗಳಿಗೆ ಅವಕಾಶ,ತನ್ನ ಸಿಬ್ಬಂದಿಗಳ ಸಮವಸ್ತ್ರಗಳಿಗೆ ಪ್ರಾಯೋಜಕತ್ವ,ಹಳಿಗಳ ಪಕ್ಕದ ಖಾಲಿ ಜಾಗಗಳಲ್ಲಿ ವಾಣಿಜ್ಯ ಕೃಷಿಯಂತಹ ವಿನೂತನ ಕ್ರಮಗಳ ಬಗ್ಗೆ ಪರಿಶೀಲಿಸುತ್ತಿದೆ.
ರೈಲ್ವೆ ಸಚಿವ ಸುರೇಶ ಪ್ರಭು ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಶ್ನೆವೇಳೆಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು. ಸರಕು ಸಾಗಾಣಿಕೆಗಾಗಿಯೇ ಪ್ರತ್ಯೇಕ ಮಾರ್ಗವನ್ನು 2019ರೊಳಗೆ ಪೂರ್ಣಗೊಳಿಸಲು ಸರಕಾರವು ಶ್ರಮಿಸುತ್ತಿದೆ ಮತ್ತು ಆ ಬಳಿಕ 2020ರ ವೇಳೆಗೆ ಭಾರತೀಯ ರೈಲುಗಳ ಸರಾಸರಿ ವೇಗವು ಹೆಚ್ಚುವ ನಿರೀಕ್ಷೆಯಿದೆ ಎಂದು ಅವರು ಈ ಸಂದರ್ಭದಲ್ಲಿ ಸದಸ್ಯರಿಗೆ ತಿಳಿಸಿದರು.
ರೈಲುಗಳ ವೇಗವನ್ನು ಹೆಚ್ಚಿಸುವುದನ್ನು ಪರಿಶೀಲಿಸಲು ಹಾಗೂ ಪ್ರಯಾಣ ಮತ್ತು ಸರಕು ಸಾಗಣೆ ಶುಲ್ಕವನ್ನು ಹೊರತುಪಡಿಸಿ ಇನ್ನಿತರ ಆದಾಯ ಮೂಲಗಳನ್ನು ನಿರ್ವಹಿಸಲು ಎರಡು ಪ್ರತ್ಯೇಕ ನಿರ್ದೇಶನಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ನಿಲ್ದಾಣಗಳು,ಹಳಿಗಳ ಪಕ್ಕ ಅಥವಾ ಬೋಗಿಗಳಲ್ಲಿ ಜಾಗೀರಾತು, ಹಳಿಗಳ ಪಕ್ಕದ ಖಾಲಿ ಜಾಗ ಮತ್ತು ನಿಲ್ದಾಣಗಳ ಕಟ್ಟಡಗಳಲ್ಲಿ ಲಭ್ಯವಿರುವ ಖಾಲಿ ಜಾಗಗಳ ವಾಣಿಜ್ಯಿಕ ಬಳಕೆ ಇತ್ಯಾದಿಗಳ ಬಗ್ಗೆ ನಿರ್ದೇಶನಾಲಯವು ಪರಿಶೀಲಿಸುತ್ತಿದೆ. ರೈಲ್ವೆ ಸಿಬ್ಬಂದಿಗಳ ಸಮವಸ್ತ್ರಗಳಿಗೆ ಪ್ರಾಯೋಜಕತ್ವವೂ ಅದರ ರಿಶೀಲನೆಯಲ್ಲಿದೆ.
ನಿಲ್ದಾಣಗಳಲ್ಲಿ ಪ್ರಾಯೋಜಿತ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳು, ನಿಲ್ದಾಣಗಳ ಹೊರಗಿನ ಜಾಗಗಳಲ್ಲಿ ಪಾವತಿ ಶೌಚಾಲಯಗಳು, ರೇಡಿಯೊ,ವೀಡಿಯೊ,ವೈಫೈ,ಮೊಬೈಲ್ ಆ್ಯಪ್‌ಗಳು ಇತ್ಯಾದಿಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.
ಸರಕಾರವು ರೈಲುಗಳ ವೇಗವನ್ನು ಹೆಚ್ಚಿಸಲು ಶ್ರಮಿಸುತ್ತಿದೆ ಮತ್ತು ಯಾವುದೇ ರೀತಿಯಲ್ಲಿ ಸುರಕ್ಷತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಒತ್ತಿ ಹೇಳಿದರು.