ಫೆಡರೇಶನ್ ಕಪ್: ಸುಧಾ ಸಿಂಗ್ ಒಲಿಂಪಿಕ್ಸ್‌ಗೆ
ಹೊಸದಿಲ್ಲಿ, ಎ.29: ಫೆಡರೇಶನ್ ಕಪ್ ನ್ಯಾಶನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಲಲಿತಾ ಬಬರ್ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಜಯಸಿದರೆ, ಬೆಳ್ಳಿ ಪದಕವನ್ನು ಜಯಿಸಿದ ಸುಧಾ ಸಿಂಗ್ ರಿಯೋ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಈಗಾಗಲೇ 3000 ಮೀ. ಸ್ಟೀಪಲ್ ಚೇಸ್ ಹಾಗೂ ಮ್ಯಾರಥಾನ್‌ನಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಮಹಾರಾಷ್ಟ್ರದ ಲಲಿತಾ 9:27.09 ನಿಮಿಷದಲ್ಲಿ ಗುರಿ ತಲುಪಿ ಚಿನ್ನ ಜಯಿಸಿದರು.
ಉತ್ತರ ಪ್ರದೇಶದ ಸುಧಾ ಸಿಂಗ್ 9:31.86 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ರಿಯೋ ಗೇಮ್ಸ್ ಅರ್ಹತಾ ಮಾರ್ಕ್(9.45.00)ನ್ನು ಉತ್ತಮಪಡಿಸಿದರು. ಸುಧಾ ಟೂರ್ನಿಯ ಎರಡನೆ ದಿನವಾದ ಶುಕ್ರವಾರ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು.
ಕೂಟದ ಮೊದಲ ದಿನವಾದ ಗುರುವಾರ ದುತೀ ಚಂದ್ ಹಾಗೂ ಅಮಿಯಾ ಕುಮಾರ್ ಮಲಿಕ್ ನ್ಯಾಶನಲ್ ರೆಕಾರ್ಡ್ ನಿರ್ಮಿಸಿದ್ದರೂ ರಿಯೋಗೆ ಅರ್ಹತೆ ಪಡೆದಿರಲಿಲ್ಲ. ಶುಕ್ರವಾರ ರಾಜೀವ್ ಅರೋಕಿಯಾ ಪುರುಷರ 400 ಮೀ. ಓಟದಲ್ಲಿ 45.47 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಜಯಿಸಿದ್ದಾರೆ.