ಮೋದಿಯ ಎಂಎ, ಬಿಎ ಪದವಿ ವಿವರ ಬಹಿರಂಗಕ್ಕೆ ಆಪ್ ಆಗ್ರಹ
ಹೊಸದಿಲ್ಲಿ, ಎ.30: ಪ್ರಧಾನಿ ನರೇಂದ್ರ ಮೋದಿಯವರ ಬಿಎ ಹಾಗೂ ಎಂಎ ಪದವಿಗಳ ಬಗ್ಗೆ ವಿವರಗಳನ್ನು ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗವು, ಪ್ರಧಾನಿ ಕಾರ್ಯಾಲಯಕ್ಕೆ ಸೂಚನೆ ನೀಡಿದ ಬೆನ್ನಲ್ಲೇ, ಎಎಪಿ ಪಕ್ಷವು ಪ್ರಧಾನಿ ತನ್ನ ಶೈಕ್ಷಣಿಕ ಅರ್ಹತೆ ವಿವರಗಳನ್ನು ತಕ್ಷಣವೇ ಬಹಿರಂಗಪಡಿಸಬೇಕೆಂದು ಆಗ್ರಹಿಸಿದೆ. ಸಣ್ಣಪುಟ್ಟ ವಿಷಯಗಳಿಗೂ ಟ್ವೀಟ್ ಮಾಡುವ ಪ್ರಧಾನಿ, ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆ ವೌನವಹಿಸಿರುವುದರ ಬಗ್ಗೆ ಅದು ಅಶ್ಚರ್ಯ ವ್ಯಕ್ತಪಡಿಸಿದೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಪ್ರಧಾನಿ ತನ್ನ ಅಫಿದಾವಿತ್‌ನಲ್ಲಿ ತಾನು 1978ರಲ್ಲಿ ದಿಲ್ಲಿ ವಿವಿಯ ದೂರಶಿಕ್ಷಣದ ಬಿಎ ಪದವಿ ಹಾಗೂ ಗುಜರಾತ್ ವಿವಿಯಿಂದ 1983ರಲ್ಲಿ ಎಂಎ ಪದವಿ ಪಡೆದಿರುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ, ದಿಲ್ಲಿ ಹಾಗೂ ಗುಜರಾತ್ ವಿವಿಗಳಿಂದ ಆರ್‌ಟಿಐ ಅರ್ಜಿಯಡಿ ಮಾಹಿತಿ ಕೋರಿದಾಗ, ತಾವು ಈ ಬಗ್ಗೆ ವಿವರಗಳನ್ನು ನೀಡಲಾಗದೆಂದು ಉತ್ತರ ದೊರೆತಿತ್ತೆಂದು ಎಎಪಿ ನಾಯಕ ಸಂಜಯ್ ಸಿಂಗ್ ಶನಿವಾರ ತಿಳಿಸಿದ್ದಾರೆ. ಈ ನಡವಳಿಕೆಯು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆಯೆಂದು ಅವರು ಹೇಳಿದ್ದಾರೆ. ಪ್ರಧಾನಿಯ ಪದವಿಗಳು ನಕಲಿಯಾಗಿರುವ ಸಾಧ್ಯತೆಯೂ ಇದೆಯೆಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಆಯೋಗವು ದಿಲ್ಲಿ, ಗುಜರಾತ್‌ವಿವಿಗಳಿಗೆ ಆದೇಶ ನೀಡಿರುವುದರಿಂದ, ಪ್ರಧಾನಿಯ ಸ್ನಾತಕ ಹಾಗೂ ಸ್ನಾತಕೋತರ ಪದವಿಗಳ ವಿವರಗಳನ್ನು ಪ್ರಧಾನಿ ಕಾರ್ಯಾಲಯವು ಬಹಿರಂಗಪಡಿಸುವುದೆಂಬ ಭರವಸೆಯನ್ನು ಸಂಜಯ್‌ಸಿಂಗ್ ವ್ಯಕ್ತಪಡಿಸಿದ್ದಾರೆ. ಸ್ಮತಿ ಇರಾನಿ ಸೇರಿದಂತೆ ಮೋದಿ ಸಂಪುಟದ ಇತರ ಸಚಿವರ ಶೈಕ್ಷಣಿಕ ಪದವಿಗಳ ಸಾಚಾತನದ ಬಗ್ಗೆಯೂ ತಮಗೆ ಸಂದೇಹವಿರುವುದಾಗಿ ಅವರು ತಿಳಿಸಿದ್ದಾರೆ.