ವಾಯುಮಾಲಿನ್ಯ: ಪರಿಹಾರಕ್ಕೆ ಕೇಂದ್ರದ ನಿರಾಸಕ್ತಿ; ಸುಪ್ರೀಂ ತರಾಟೆ
ಹೊಸದಿಲ್ಲಿ, ಎ.30: ವಾಹನಗಳ ಹೊಗೆಯಿಂದಾಗಿ ಉಂಟಾಗುತ್ತಿರುವ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಸೂಕ್ತ ಪರಿಹಾರಗಳನ್ನು ಸೂಚಿಸದೇ ಇದ್ದುದಕ್ಕಾಗಿ ಸುಪ್ರೀಂಕೋರ್ಟ್ ಶನಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನೀವು ಕೇವಲ ಕಾಫಿ ಗುಟುಕರಿಸುತ್ತಾ,ವಾಯುಮಾಲಿನ್ಯ ತಗ್ಗಿಸುವ ಬಗ್ಗೆ ಚರ್ಚಿಸುತ್ತೀರಿ. ಆದರೆ ಆ ನಿಟ್ಟಿನಲ್ಲಿ ಏನೂ ಮಾಡುತ್ತಿಲ್ಲ’’ ಎಂದು ಅದು ಕಟಕಿಯಾಡಿದೆ.
ಸಚಿವಾಲಯದವರು ಏನು ಮಾಡುತ್ತಿದ್ದಾರೆ?. ವಾಯುಮಾಲಿನ್ಯ ಕಡಿಮೆಗೊಳಿಸುವ ಬಗ್ಗೆ ಯಾಕೆ ಸಂಶೋಧನೆಗಳನ್ನು ನಡೆಸಿ, ಪರಿಹಾರ ಹುಡುಕಲು ಯತ್ನಿಸುತ್ತಿಲ್ಲ. ಜಗತ್ತಿನ ಉಳಿದ ಭಾಗಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನೀವು ಯಾಕೆ ಸಂಶೋಧನೆಗಳನ್ನು ನಡೆಸುತ್ತಿಲ್ಲ. ನೀವು ಕೇವಲ ಕಾಫಿ ಕುಡಿಯುತ್ತಾ ಚರ್ಚಿಸುವಿರೇ ಹೊರತು, ಯಾವುದೇ ಕೆಲಸ ಮಾಡುತ್ತಿಲ್ಲ. ಈ ಎಲ್ಲ ವಿಷಯಗಳ ವಿಚಾರಣೆಯನ್ನು ನ್ಯಾಯಾಲಯದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆಯೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಿಸಿತು.
ವಾಯುಮಾಲಿನ್ಯ ನಿಯಂತ್ರಿಸುವಂತೆ ಕೋರಿ ಯಾರಾದರೂ ನ್ಯಾಯಾಲಯದ ಮೆಟ್ಟಲೇರುವುದನ್ನೇ ಸಚಿವಾಲಯ ಕಾಯುತ್ತಿದೆ. ಆನಂತರವಷ್ಟೇ ಈ ವಿಷಯವನ್ನು ನಿಭಾಯಿಸಿದರೆ ಸಾಕು ಎಂಬ ಭಾವನೆಯನ್ನು ಅದು ಹೊಂದಿದೆಯೆಂದು ನ್ಯಾಯಪೀಠ ವ್ಯಂಗ್ಯವಾಡಿತು.
ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವಂತೆ ಕೋರಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ ಮೂವರು ಚಿಣ್ಣರ ಪರವಾದ ವಕೀಲ ಕೆ.ಕೆ.ವೇಣುಗೋಪಾಲ್ ಸಲ್ಲಿಸಿದ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ಹೆಚ್ಚುವರಿ ಸಾಲಿಸಿಟರ್‌ಜನರ್ ಮಹೀಂದರ್ ಸಿಂಗ್ ತಿಳಿಸಿದಾಗ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.