ಉಷ್ಣದಿಂದ ಕುದಿಯುತ್ತಿರುವ ಭಾರತ: 30 ದಿನಗಳಲ್ಲಿ 300 ಸಾವು!
ಹೊಸದಿಲ್ಲಿ, ಮೆ 1: ದೇಶದಾದ್ಯಂತ ಉಷ್ಣಗಾಳಿ ಬಹಳಷ್ಟು ಹಾನಿಯನ್ನು ತಂದೊಡ್ಡಿದೆ ಎಂದು ವರದಿಯಾಗಿದೆ. ಹವಾಮಾನ ವ್ಯತ್ಯಾಸ ಸೃಷ್ಟಿಸಿರುವ ಅತ್ಯಂತ ಕಠಿಣ ಉಷ್ಣದಿಂದಾಗಿ ಒಂದು ತಿಂಗಳಲ್ಲಿಮುನ್ನೂರು ಮಂದಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣದಲ್ಲಿ 137, ಆಂಧ್ರದಲ್ಲಿ 45, ಒಡಿಸ್ಸಾದಲ್ಲಿ 11 ಮಂದಿ ಎಪ್ರಿಲ್‌ನಲ್ಲಿ ಮೃತರಾಗಿದ್ದಾರೆ. ಬಿಹಾರ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳ್ನಾಡು ಮತ್ತು ಕರ್ನಾಟಕಗಳಲ್ಲಿಯೂ ಬಿಸಿಲಿನ ತಾಪಕ್ಕೆ ಸಿಲುಕಿ ಮೃತರಾಗಿರುವುದು ವರದಿಯಾಗಿದೆ.
ದೇಶದಲ್ಲಿ ಈಗಾಗಲೇ ಸುಮಾರು 33 ಕೋಟಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮಳೆ ಬರದಿದ್ದರೆ ದೇಶ ಭಾರೀ ದುರಂತಕ್ಕೊಳಗಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ನಿರಂತರ ಇದು ಎರಡನೆ ವರ್ಷ ದೇಶದಲ್ಲಿ ಭಾರಿ ತಾಪವುಂಟಾಗಿದೆ. ಅಂದರೆ ಐದು ಆರು ಡಿಗ್ರಿ ಸೆಕೆ ಹೆಚ್ಚು ಇದೆ. ಆಂಧ್ರದಲ್ಲಿ ಎರಡು ವಾರಗಳಲ್ಲಿ ಸರಾಸರಿ 44 ಡಿಗ್ರಿಸೆಲ್ಸಿಯಸ್ ಉಷ್ಣತೆ ಇದೆ. ಬೇಸಿಗೆ ತಾಪದ ಕಾಠಿಣ್ಯದಿಂದ ಹಲವು ಕಡೆಯಲ್ಲಿ ಅನಿರೀಕ್ಷಿತವಾಗಿ ಬೆಂಕಿ ಹೊತ್ತಿ ಉರಿಯಲಾರಂಭಿಸಿದೆ. ಬಿಹಾರದಲ್ಲಿ ಇಂತಹ ಬೆಂಕಿಯಿಂದಾಗಿ ಕಳೆದ ತಿಂಗಳು 79 ಮಂದಿ ಮೃತರಾಗಿದ್ದಾರೆ.
ಉಷ್ಣ ಅತಿಯಾದ್ದರಿಂದ ಗಂಗಾ ನದಿ ಬತ್ತಿದೆ. ಅಲಹಾಬಾದ್ ಪ್ರಯಾಗದಲ್ಲಿ ನೀರಿನಮಟ್ಟ ಭಾರಿ ಕುಸಿತ ಆಗಿದೆ. ಲಾತೂರ್‌ನಲ್ಲಿ ಉಷ್ಣತಾ ಕಾರಣದಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಬಾರದೆಂದು ಆಸ್ಪತ್ರೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.