ಬರಕ್ಕೆ ಸ್ಪಂದಿಸದ ಮೋದಿಗೆ ಮಂಗಳಾರತಿ, ಜತೆಗೆ ಒಂದಿಷ್ಟು ಕಾಣಿಕೆ!
ರಾಂಚಿ: ಭೀಕರ ಬರದಿಂದ ತತ್ತರಿಸಿರುವ ಜಾರ್ಖಂಡ್ ರಾಜ್ಯಕ್ಕೆ ಸೂಕ್ತ ಪರಿಹಾರ ಒದಗಿಸುವಲ್ಲಿ ವಿಫಲವಾದ ಕೇಂದ್ರದ ವಿರುದ್ಧ ರಾಜ್ಯದ ಉದ್ಯೋಗ ಖಾತ್ರಿ ಕೂಲಿಗಳು ಕಾರ್ಮಿಕರ ದಿನದಂದು ವಿಶಿಷ್ಟ ಪ್ರತಿಭಟನೆ ನಡೆಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೂಲಿಯಲ್ಲಿ ತಲಾ ಐದು ರೂಪಾಯಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ವಾಪಾಸು ಮಾಡಲು ನಿರ್ಧರಿಸಿದ್ದಾರೆ. ಕೇಂದ್ರಕ್ಕೆ ಹಣದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಈ ಹಣ ನೀಡುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ.
ಭೀಕರ ಬರದಿಂದ ರಾಜ್ಯ ತತ್ತರಿಸಿದ್ದರೂ, ಉದ್ಯೋಗ ಖಾತ್ರಿ ಯೋಜನೆ ಕೂಲಿಯನ್ನು ಕೇವಲ ಐದು ರೂಪಾಯಿ ಹೆಚ್ಚಿಸಿದ್ದರಿಂದ ಜನ ಕೋಪಗೊಂಡಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಕ್ರಮವಾಗಿ 2 ಹಾಗೂ 3 ರೂಪಾಯಿ ಕೂಲಿ ಏರಿಸಲಾಗಿದೆ. ಜಾರ್ಖಂಡ್‌ನಲ್ಲಿ 162 ರೂಪಾಯಿ ಇದ್ದ ಕೂಲಿಯನ್ನು 167ಕ್ಕೆ ಹೆಚ್ಚಿಸಲಾಗಿತ್ತು. "ಈ ಐದು ರೂಪಾಯಿಯ ಅಗತ್ಯತೆ ನಮಗಿಂತ ನಿಮಗೇ ಹೆಚ್ಚಾಗಿದೆ. ಏಕೆಂದರೆ ನಿಮ್ಮ ಸರ್ಕಾರಕ್ಕೆ ಬಹಳಷ್ಟು ಖರ್ಚುಗಳಿವೆ" ಎಂಬ ಒಕ್ಕಣೆ ಪತ್ರವನ್ನು ಮಣಿಕಾ ಪ್ರದೇಶದ ನರೇಗಾ ಕೂಲಿಗಳು ಪ್ರಧಾನಿಗೆ ಕಳುಹಿಸಿದ್ದಾರೆ.
ಈ ವರ್ಷ ನರೇಗಾ ಕೂಲಿ ಹೆಚ್ಚಿಸಿದ್ದರಲ್ಲಿ ನಾವು ಅದೃಷ್ಟಶಾಲಿಗಳು. ಏಕೆಂದರೆ ಇತರ 17 ರಾಜ್ಯಗಳಲ್ಲಿ ಆಗಿರುವ ಏರಿಕೆ ನಮಗಿಂತಲೂ ಕಡಿಮೆ. ಒಡಿಶಾ ರಾಜ್ಯದ ಕೂಲಿಗಳು ಉತ್ತಮ ಸ್ಥಿತಿಯಲ್ಲಿದ್ದಾರೆ ಎನಿಸುತ್ತದೆ. ಏಕೆಂದರೆ ಅವರ ಕೂಲಿಯನ್ನು ಹೆಚ್ಚಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.