ಚೀನಾ-ಭಾರತ ಗಡಿಯ ಗ್ರಾಮಸ್ಥರಿಗೆ ಶಂಕಾಸ್ಪದ ದೂರವಾಣಿ ಕರೆಗಳು
ಲೇಹ್/ಹೊಸದಿಲ್ಲಿ,ಮೇ 15: ಗ್ರಾಮ ಮುಖ್ಯಸ್ಥನೋರ್ವ ಸೇರಿದಂತೆ ಸ್ಥಳೀಯ ನಿವಾಸಿಗಳಿಗೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನೆಯ ನಿಯೋಜನೆ ಕುರಿತು ಪಾಕಿಸ್ತಾನ ಅಥವಾ ಚೀನಾದ ‘ಬೇಹುಗಾರ ’ರಿಂದ ಹಲವಾರು ದೂರವಾಣಿ ಕರೆಗಳು ಬಂದ ನಂತರ ಚೀನಾ-ಭಾರತ ಗಡಿಯಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.
ತನ್ನನ್ನು ಕರ್ನಲ್ ಅಥವಾ ಸ್ಥಳೀಯ ಅಧಿಕಾರಿ ಎಂದು ಹೇಳಿಕೊಂಡ ಕರೆ ಮಾಡಿದ ವ್ಯಕ್ತಿ ಪ್ರದೇಶದಲ್ಲಿ ಭಾರತೀಯ ಸೇನೆಯ ಉಪಸ್ಥಿತಿ ಮತ್ತು ಅದರ ಚಲನವಲನಗಳ ಸಮಯ ಮತ್ತು ರಸ್ತೆಗಳ ಕುರಿತು ವಿಚಾರಿಸಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿದವು.
ಸಮುದ್ರ ಮಟ್ಟದಿಂದ 13,500 ಅಡಿ ಎತ್ತರದಲ್ಲಿ ಚಾಂಗ್ ಲಾ ಮತ್ತು ತ್ಸಾಂಗ್ಟೆ ಗ್ರಾಮಗಳ ನಡುವೆ ಇರುವ ದುರ್ಬಕ್ ಗ್ರಾಮದ ಸರಪಂಚ(ಮುಖ್ಯಸ್ಥ) ಸ್ಟಾಂಝಿನ್‌ಗೆ ಇತ್ತೀಚಿಗೆ ಇಂತಹ ಕರೆಯೊಂದು ಬಂದಿದ್ದು,ಕರೆ ಮಾಡಿದ್ದ ವ್ಯಕ್ತಿ ಮೇಲಿನ ಪ್ರಶ್ನೆಗಳೊಂದಿಗೆ ಸೇನೆಯೊಂದಿಗಿನ ವಿವಾದಗಳು ಬಗೆಹರಿದಿವೆಯೇ ಎಂದೂ ಪ್ರಶ್ನಿಸಿದ್ದ.
ಈ ವೇಳೆ ಸೇನಾ ಶಿಬಿರದಲ್ಲಿಯೇ ಕುಳಿತಿದ್ದ ಸ್ಟಾಂಝಿನ್ ಶಂಕೆಗೊಂಡು ಕರೆ ಮಾಡಿದ್ದ ವ್ಯಕ್ತಿಯ ಗುರುತನ್ನು ಕೇಳಿದ್ದ.
ತಾನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಆ ವ್ಯಕ್ತಿ ಹೇಳಿದನಾದರೂ ಅದಕ್ಕೆ ಸೊಪ್ಪು ಹಾಕದ ಸ್ಟಾಂಝಿನ್ ಸೇನೆಯನ್ನು ಸಂಪರ್ಕಿಸುವಂತೆ ಆತನಿಗೆ ಸೂಚಿಸಿದ್ದ.
ಸ್ಟಾಂಝಿನ್ ಜಿಲ್ಲಾಧಿಕಾರಿಗಳ ಕಚೇರಿಗೆ ಕರೆ ಮಾಡಿ ವಿಚಾರಿಸಿದಾಗ ಅಲ್ಲಿಂದ ಯಾರೂ ಕರೆ ಮಾಡಿರಲಿಲ್ಲ ಎನ್ನುವುದು ಗೊತ್ತಾಗಿದೆ. ಸರಪಂಚನಿಗೆ ಬಂದ ಕರೆ ಕಂಪ್ಯೂಟರ್ ಮೂಲಕ ಬಂದಿದ್ದು ಎನ್ನುವುದನ್ನು ಸೇನೆಯು ಪತ್ತೆ ಹಚ್ಚಿದೆ.
ಚೀನಾ-ಭಾರತ ಗಡಿಯಲ್ಲಿನ ಗ್ರಾಮಗಳಲ್ಲಿನ ಹಲವರಿಗೆ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಇಂತಹ ಕರೆಗಳು ಬಂದಿದ್ದವು ಎನ್ನುವುದು ಬಳಿಕ ಸೇನೆಯ ಗಮನಕ್ಕೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ಮುಗ್ಧ ಗ್ರಾಮಸ್ಥರು ತಮಗೆ ಗೊತ್ತಿದ್ದ ಮಾಹಿತಿಗಳನ್ನು ಹಂಚಿಕೊಂಡಿದ್ದರು.
ಯಾವುದೇ ಅಪರಿಚಿತ ದೂರವಾಣಿ ಕರೆಗೆ ಸ್ಪಂದಿಸದಂತೆ ಮತ್ತು ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಸೇನೆಯು ರಾಜ್ಯದ ಆಡಳಿತದ ನೆರವಿನೊಂದಿಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಿದೆ.