ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಧಾನಿ ಮೋದಿ ಮೇಲೆ ಕಳಂಕ: ನ್ಯಾ.ಸಾಚಾರ್
ಹೊಸದಿಲ್ಲಿ,ಜೂ.2: ಹತ್ಯೆಗಳು ನಡೆಯುತ್ತಿರುವಾಗ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರಿಂದ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ನೀಡಿರುವ ತೀರ್ಪು ಅವರ ಮೇಲೆ ಕಳಂಕವಾಗಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ರಾಜಿಂದರ್ ಸಾಚಾರ್ ಅವರು ಇಂದು ಇಲ್ಲಿ ಬಣ್ಣಿಸಿದರು.
ಪಿಯುಸಿಎಲ್ ಮಾಜಿ ಅಧ್ಯಕ್ಷರೂ ಆಗಿರುವ ನ್ಯಾ.ಸಾಚಾರ್ ಅವರು ಹೇಳಿಕೆಯೊಂದರಲ್ಲಿ, ಗುಜರಾತಿನಲ್ಲಿ ನಿರ್ವಸಿತರಾಗಿರುವ ಮುಸ್ಲಿಮ ಕುಟುಂಬಗಳ ಸ್ಥಳಾಂತರವನ್ನು ವಿರೋಧಿಸುತ್ತಿರುವ ಹಿಂದು ಜಾತ್ಯಾಂಧರ ಕೋಮುವಾದಿ ನಿಲುವಿನ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ.
ವಡೋದರಾದಲ್ಲಿಯ ಸುಲೇಮಾನ್ ಚಾಳ್ ನೆಲಸಮಗೊಂಡ ಬಳಿಕ ಅಲ್ಲಿ ವಾಸವಾಗಿದ್ದ, ಮುಸ್ಲಿಮರೇ ಹೆಚ್ಚಿರುವ ಸುಮಾರು 300 ಕುಟುಂಬಗಳು ನೆಲೆಯನ್ನು ಕಳೆದುಕೊಂಡು ನಿರ್ಗತಿಕವಾಗಿವೆ. ಈ ಕುಟುಂಬಗಳಿಗೆ ಕಪುರಾಯಿ ಪ್ರದೇಶದಲ್ಲಿ ಪುನರ್ವಸತಿಯನ್ನು ಕಲ್ಪಿಸಲು ವಡೋದರಾ ಮಹಾನಗರ ಪಾಲಿಕೆಯು ಉದ್ದೇಶಿಸಿದೆ. ಆದರೆ ಕಪುರಾಯಿ ನಿವಾಸಿಗಳು ಇದನ್ನು ವಿರೋಧಿಸಿ ಮಹಾನಗರ ಪಾಲಿಕೆಗೆ ಪತ್ರವನ್ನು ಬರೆದಿದ್ದು,ತಮ್ಮ ಬಡಾವಣೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿದರೆ ಹಲ್ಲೆ,ಜಗಳಗಳು ಅವರ ದೈನಂದಿನ ಚಟುವಟಿಕೆಗಳಾಗಿರುವುದರಿಂದ ಇಲ್ಲಿಯ ಶಾಂತಿಪ್ರಿಯ ಪರಿಸರ ಹಾಳಾಗುತ್ತದೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ದೈನಿಕವೊಂದು ಇದನ್ನು ವರದಿ ಮಾಡಿದ್ದು,ಈ ಹಿನ್ನೆಲೆಯಲ್ಲಿ ನ್ಯಾ.ಸಾಚಾರ್ ಅವರ ಹೇಳಿಕೆ ಹೊರಬಿದ್ದಿದೆ.