ಕಸದಿಂದ ಹಣ ಹೆಕ್ಕಿರುವರೇ!?
ಮಾನ್ಯರೆ,
ನಾವೆಲ್ಲಾ ‘ಕಸದಿಂದ ರಸ’ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಬೆಂಗಳೂರು ಮಹಾನಗರ ಪಾಲಿ ಕೆಯ ಕೆಲ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಸದಿಂದಲೇ ಹಣ ಹೆಕ್ಕಿರುವಂತಿದೆ!
ಇದು ಅಚ್ಚರಿಯಾದರೂ ಸತ್ಯ. ಆರ್‌ಟಿಐ ಮಾಹಿತಿಯಡಿ ಬಿಬಿಎಂಪಿ, ಬರೀ ಕಸದ ಸಾಗಾಟಕ್ಕೆ ಒಂದು ವರ್ಷಕ್ಕೆ 242 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ. ಪೂರ್ವ ವಲಯಕ್ಕೆ 76,24,41,849 ರೂ., ಪಶ್ಚಿಮ ವಲಯಕ್ಕೆ 63,39,75000 ರೂ., ದಕ್ಷಿಣ ವಲಯಕ್ಕೆ 62,14,96,970ರೂ.ನಷ್ಟು ಖರ್ಚು ಮಾಡಿದೆಯಂತೆ. ಅಷ್ಟೇ ಅಲ್ಲ, ಯಲಹಂಕ ವಲಯಕ್ಕೆ 16,02,56,901ರೂ., ಮಹದೇವಪುರ ವಲಯಕ್ಕೆ 06,69,20,530ರೂ., ರಾಜರಾಜೇಶ್ವರಿನಗರ ವಲಯಕ್ಕೆ 18,01,51,152 ರೂ. ಹಾಗೂ ದಾಸರಹಳ್ಳಿ ವಲಯಕ್ಕೆ 4,77,03,731 ರೂ.ನಷ್ಟು ಖರ್ಚು ಮಾಡಿದೆ. ನಿಜ ವಿಷಯವೆಂದರೆ ಬೆಂಗಳೂರಿನಿಂದ ಮಂಡೂರಿಗೆ ಕಸ ಸಾಗಾಟಕ್ಕೆ ಇಷ್ಟೊಂದು ಹಣ ಖರ್ಚು ಆಗಲು ಖಂಡಿತ ಸಾಧ್ಯವಿಲ್ಲ. ಹಾಗಾದರೆ ಇಷ್ಟು ಮೊತ್ತ ಯಾತಕ್ಕಾಗಿ ಖರ್ಚು ಮಾಡಲಾಯಿತು..? ಖರ್ಚಾದ ಮೊತ್ತ ಬಿಟ್ಟು ಉಳಿದ ಹಣ ಎಲ್ಲಿಗೆ ಹೋಯಿತು..? ಎಂಬ ಬಗ್ಗೆ ಪ್ರಶ್ನೆ ಮಾಡಿದರೆ ‘ಬೃಹತ್’ ಅವ್ಯವಹಾರ ನಡೆದಿರುವುದು ಪ್ರಾಥಮಿಕ ಹಂತದಲ್ಲಿ ಗೊತ್ತಾಗುತ್ತದೆ. ಕಸದ ಹೆಸರಿನಲ್ಲಿ ಹಣ ನುಂಗಿರುವ ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಿಸುವ ಕಾರ್ಯ ರಾಜ್ಯ ಸರಕಾರದ ಮುಂದಿದೆ.