ಸೆ.30ರೊಳಗೆ ಕಪ್ಪುಹಣವನ್ನು ಘೋಷಿಸಿ: ಪ್ರಧಾನಿ ಮೋದಿ ಕರೆ
ಹೊಸದಿಲ್ಲಿ,ಜೂ.26: ಸೆ.30ರೊಳಗೆ ತಮ್ಮ ಅಘೋಷಿತ ಆದಾಯವನ್ನು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಜನತೆಯನ್ನು ಕೋರಿಕೊಂಡರು. ಸರಕಾರವು ಕಲ್ಪಿಸಿರುವ ಈ ವಿಶೇಷ ಅವಕಾಶ ಕಳೆದುಹೋದರೆ ಸಮಸ್ಯೆಗಳು ಕಾಡಲಿವೆ, ಅವುಗಳಿಂದ ಪಾರಾಗಲು ಇದು ಕೊನೆಯ ಅವಕಾಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸೆ.30ರೊಳಗೆ ಸ್ವಯಿಚ್ಛೆಯಿಂದ ಘೋಷಣೆಯನ್ನು ಸಲ್ಲಿಸಿದರೆ ಕಪ್ಪುಹಣ ಅಥವಾ ಅಕ್ರಮ ಆಸ್ತಿಯ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ತನ್ನ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಹೇಳಿದರು.
ದಂಡವನ್ನು ಪಾವತಿಸುವ ಮೂಲಕ ಅಘೋಷಿತ ಆದಾಯ ಅಥವಾ ಆಸ್ತಿಯನ್ನು ಹೊಂದಿರುವವರು ವಿವಿಧ ಸಂಕಟಗಳಿಂದ ಮುಕ್ತರಾಗಬಹುದು ಎಂದರು.
ನಿಯಮಗಳನ್ನು ಪಾಲಿಸದ್ದಕ್ಕಾಗಿ ಸೆ.30ರ ಬಳಿಕ ಯಾರಾದರೂ ಸಮಸ್ಯೆಗೆ ಸಿಲುಕಿದರೆ ಅಂತಹವರಿಗೆ ಯಾವುದೇ ನೆರವು ಒದಗಿಸದಂತೆ ತಾನು ಬಿಜೆಪಿ ಸಂಸದರಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಜನರು ತೆರಿಗೆ ಪಾವತಿಯನ್ನು ತಪಿಸಿಕೊಳ್ಳಲು ಸಾಧ್ಯವಾಗುವಂತಹ ನಿಯಮಗಳಿದ್ದ ಕಾಲವೊಂದಿತ್ತು. ಆದರೆ ಕಾಲವು ಬದಲಾದಂತೆ ನಿಯಮಗಳೂ ಹಂತಹಂತವಾಗಿ ಬದಲಾಣೆಗೊಂಡಿವೆ. ಈಗ ತೆರಿಗೆದಾತರಿಗೆ ಸರಕಾರದ ನಿಯಮಗಳನ್ನು ಪಾಲಿಸುವುದು ಅಷ್ಟೇನೂ ಕಷ್ಟವಲ್ಲ. ಆದರೆ ಹಳೆಯ ಚಾಳಿಗಳನ್ನು ಮರೆಯುವುದು ಕಷ್ಟ ಎಂದ ಅವರು, ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವುದೇ ಒಳ್ಳೆಯದು ಎಂದು ಭಾವಿಸುವ ಜನರು ಈಗಲೂ ಇದ್ದಾರೆ ಎಂದರು.
ನಿಯಮಗಳಿಂದ ತಪ್ಪಿಸಿಕೊಂಡರೆ ನಾವು ನಮ್ಮ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಯಾವುದೇ ಸಣ್ಣವ್ಯಕ್ತಿಯೂ ನಮಗೆ ಕಿರುಕುಳವನ್ನು ನೀಡಬಲ್ಲ. ಇದಕ್ಕೆ ನಾವೇಕೆ ಅವಕಾಶವನ್ನು ನೀಡಬೇಕು? ನಮ್ಮ ಆದಾಯ,ನಮ್ಮ ಸಂಪತ್ತಿನ ಬಗ್ಗೆ ಸರಿಯಾದ ಮಾಹಿತಿಯನ್ನು ನಾವೇಕೆ ಸರಕಾರಕ್ಕೆ ನೀಡಬಾರದು? ಒಮ್ಮೆ ಹಳೆಯ ಜಂಜಾಟಗಳಿಂದ ಮುಕ್ತರಾಗಿ ಎಂದು ನಾನು ನನ್ನ ದೇಶಬಾಂಧವರನ್ನು ಕೋರುತ್ತೇನೆ ಎಂದು ಮೋದಿ ಹೇಳಿದರು.