×
Ad

ಮಾಲೆಗಾಂವ್‌ನಿಂದ ಪ್ರಮುಖ ಆರೋಪಿಯ ಬಂಧನ

Update: 2016-07-13 22:05 IST

ಅಹ್ಮದಾಬಾದ್, ಜು.13: ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ 2002ರಲ್ಲಿ ನಡೆದ ಸಬರಮತಿ ಎಕ್ಸ್‌ಪ್ರೆಸ್ ದಹನದ ಪ್ರಧಾನ ಪಿತೂರಿಕಾರರಲ್ಲೊಬ್ಬನಾಗಿದ್ದ ಇಮ್ರಾನ್ ಬಟುಕ್ ಎಂಬಾತನನ್ನು ಮಹಾರಾಷ್ಟ್ರದ ಮಾಲೆಗಾಂವ್‌ನಿಂದ ಅಹ್ಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

14 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆತ, 2002ರ ಫೆ.27ರಂದು ಗೋಧ್ರಾ ರೈಲು ನಿಲ್ದಾಣದ ಸಮೀಪ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಬೋಗಿಗೆ ಬೆಂಕಿ ಹಚ್ಚಿದವರಲ್ಲಿ ಒಬ್ಬನಾಗಿದ್ದನೆಂದು ಡಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಅಯೋಧ್ಯೆಯಿಂದ ಮರಳುತ್ತಿದ್ದ 59 ಮಂದಿ ಕರ ಸೇವಕರು ಬೆಂಕಿಗಾಹುತಿಯಾಗಿದ್ದರು.
ಎರಡನೆ ಆರೋಪ ಪಟ್ಟಿಯಲ್ಲಿ ಇಮ್ರಾನ್‌ನ ಹೆಸರು ಪ್ರಮುಖ ಆರೋಪಿಗಳಲ್ಲೊಬ್ಬನೆಂದು ಉಲ್ಲೇಖಿಸಲ್ಪಟ್ಟಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣದ ರೂವಾರಿಗಳಲ್ಲೊಬ್ಬನಾದ ಫಾರೂಕ್ ಭಾನಾ ಎಂಬಾತನನ್ನು ಗುಜರಾತ್ ಎಟಿಎಸ್ ಪಂಚಮಹಲ್ ಜಿಲ್ಲೆಯಿಂದ ಮೇಯಲ್ಲಿ ಬಂಧಿಸಿತ್ತು. ಘಟನೆ ನಡೆದಾಗ ಆತ ಗೋಧ್ರಾದ ಪೋಲನ್ ಬಝಾರ್‌ನ ಕಾರ್ಪೊರೇಟರ್ ಆಗಿದ್ದನು.

ಸುಪ್ರೀಂಕೋರ್ಟ್ ನೇಮಿತ ಎಟಿಎಸ್ ಈ ಪ್ರಕರಣದ ತನಿಖೆ ನಡೆಸಿ 94 ಮಂದಿಯ ವಿರುದ್ಧ ಆರೋಪ ಪಟ್ಟಿ ದಾಖಲಿಸಿತ್ತು. 2011ರಲ್ಲಿ 31 ಮಂದಿಗೆ ಶಿಕ್ಷೆ ವಿಧಿಸಲಾಗಿದ್ದು, ಉಳಿದ 63 ಜನರನ್ನು ಖುಲಾಸೆಗೊಳಿಸಲಾಗಿತ್ತು. ಶಿಕ್ಷೆ ವಿಧಿಸಲಾದವರಲ್ಲಿ 11 ಮಂದಿಗೆ ಮರಣ ದಂಡನೆ ಹಾಗೂ ಉಳಿದವರಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News