332 ಕಿ.ಗ್ರಾಂ ತೂಕದ ವಿಶ್ವದಲ್ಲೇ ದೊಡ್ಡ ಸಮೋಸಾ!
ಹೊಸದಿಲ್ಲಿ, ಜು.13: ವಿಶ್ವದಲ್ಲಿಯೇ ಅತಿ ದೊಡ್ಡದೆನ್ನಲಾದ ಸಮೋಸಾ ತಯಾರಿಸುವ ಮೂಲಕ 10 ಮಂದಿ ಆಸಕ್ತರ ಗುಂಪೊಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಗಳಿಸುವ ಹವಣಿಕೆಯಲ್ಲಿದೆ.
332 ಕಿ.ಗ್ರಾಂ. ತೂಕದ ಈ ಭಾರತೀಯ ಸತ್ವಯುತ ಖಾದ್ಯವನ್ನು ಮಹಾರಾಜಗಂಜ್ ಜಿಲ್ಲೆಯ ಗೋಪಾಲನಗರ್ ಕಾಲನಿಯಲ್ಲಿ ತಯಾರಿಸಲಾಗಿದೆ. ಈ ಸಾಧನೆ ಮಾಡಿರುವ ಸ್ಥಳಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. 20ರ ಹರೆಯದ ರಿತೇಶ್ ಸೋನಿ ನೇತೃತ್ವದ ತಂಡವೀಗ ಈ ಸಾಧನೆಯನ್ನು ಮಾನ್ಯ ಮಾಡಿಸುವುದಕ್ಕಾಗಿ ಗಿನ್ನೆಸ್ ದಾಖಲೆ ಪುಸ್ತಕ ಸಮಿತಿಯನ್ನು ಸಮೀಪಿಸಿದ್ದಾರೆ.
ಗೋಪಾಲ ನಗರ್‌ನ ರಸ್ತೆಬದಿಯಲ್ಲಿ ಸಣ್ಣ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿರುವ ರಿತೇಶ್, ಇದೇ ಜಿಲ್ಲೆಯ ಇನ್ನೊಂದು ಗುಂಪು ತಯಾರಿಸಿದ್ದ ಪ್ರಪಂಚದಲ್ಲೇ ಅತಿ ದೊಡ್ಡ ಜಿಲೇಬಿ ತಮಗೆ ಸ್ಫೂರ್ತಿಯಾಯಿತು ಎಂದಿದ್ದಾರೆ.
15 ದಿನಗಳಿಂದ ನಡೆಸಿದ್ದ ಸಿದ್ಧತೆ ಸೋಮವಾರ ಸಂಜೆಗೆ ಸಾಕಾರಗೊಂಡಿತ್ತು. ಈ ಸಮೋಸಾ ತಯಾರಿಸಲು ಗುಂಪು ರೂ.40 ಸಾವಿರದಷ್ಟು ಖರ್ಚು ಮಾಡಿದೆ. 90 ಲೀ. ರಿಫೈನ್ಡ್ ಎಣ್ಣೆ, 1.75 ಕ್ವಿಂಟಾಲ್ ಗೋಧಿ ಹಿಟ್ಟು ಹಾಗೂ 2 ಕ್ವಿಂಟಾಲ್ ಬಟಾಟೆ ಬಳಸಿ, 3 ಮೀ. ಎತ್ತರ ಹಾಗೂ 2 ಮೀ.1.5 ಮೀ. ಹಾಗೂ 1.5 ಮೀ. ಭುಜಗಳುಳ್ಳ ಸಮೊಸಾ ತಯಾರಿಸಲಾಗಿದೆ. ಅದರ ವ್ಯಾಸ 36 ಇಂಚಿನಷ್ಟಿದೆ.