×
Ad

ಜಾರ್ಖಂಡ್: ಆಡು ಖರೀದಿಸಲು ಎರಡು ಸಾವಿರ ರೂಪಾಯಿಗಳಿಗಾಗಿ 3 ದಿನದ ಮಗುವನ್ನೇ ಮಾರಿದ ತಾಯಿ

Update: 2016-07-14 16:54 IST

ರಾಂಚಿ,ಜು.14 : ಕೇವಲ ಎರಡು ಆಡುಗಳನ್ನು ಖರೀದಿಸಲು ಬೇಕಾಗಿದ್ದ ಎರಡು ಸಾವಿರ ರೂಪಾಯಿಗಾಗಿ ತನ್ನ ಮೂರು ದಿನದ ಹಸುಳೆಯನ್ನೇ ತಾಯಿಯೊಬ್ಬಳು ಮಾರಿದ ಘಟನೆ ಜಾರ್ಖಂಡ್ ರಾಜ್ಯದ ಸಬರ್ ತೊಲಾ ಗ್ರಾಮದಿಂದ ವರದಿಯಾಗಿದೆ. ಜುಲೈ 10 ರಂದು ಮೂವತ್ತರ ಅಸುಪಾಸಿನ ವಯಸ್ಸಿನ ಆದಿವಾಸಿ ವಿಧವೆಯೊಬ್ಬಳು ತನ್ನ ನವಜಾತ ಶಿಶುವನ್ನು ಛಾತ್ರಾದ ಉದ್ಯಮಿ ಕೇದಾರ್ ಸಾಹುಗೆ ಕೆಲವು ರೂಪಾಯಿಗಳಿಗಾಗಿ ಮಾರಿದ್ದಳು. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ರಾಮಘರ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ ತರುವಾಯ ಉದ್ಯಮಿಯಿಂದ ಮಗುವನ್ನು ಪಡೆದು ಆಕೆಗೆ ಹಿಂದಿರುಗಿಸಲಾಗಿತ್ತು.

ಬಿರ್ಹೋರ್ ಆದಿವಾಸಿ ಜನಾಂಗದ ಪದ್ಧತಿಯಂತೆ ಮಗುವೊಂದಕ್ಕೆ ಜನ್ಮ ನೀಡಿದ ಮಹಿಳೆ ಎರಡು ಆಡುಗಳನ್ನು ಬಲಿಗೊಟ್ಟು ಅರಣ್ಯದೇವರುಗಳನ್ನು ಸಂತುಷ್ಟಗೊಳಿಸಬೇಕೆಂಬ ನಂಬಿಕೆಯೇ ಆಕೆ ಹೀಗೆ ಮಾಡಲು ಕಾರಣವೆಂದು ಹೇಳಲಾಗಿತ್ತು. ತನ್ನ ಮಗುವಿಗೆ ಉತ್ತಮ ಬಾಳು ಕೊಡಬೇಕೆಂಬ ಇಚ್ಛೆಯಿಂದ ತಾನು ಹೀಗೆ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಳು.

ಆದರೆ ಮತ್ತೆ ದೊರೆತ ಮಾಹಿತಿಯಂತೆ ಆಕೆಗೆ ಮಗು ಜನಿಸಿದ ಕೂಡಲೇ ಸಾಮೂಹಿಕ ಭೋಜನಕ್ಕಾಗಿ ಗ್ರಾಮಸ್ಥರು ಆಕೆಯಿಂದ ಎರಡು ಬಿಳಿ ಗಂಡು ಆಡುಗಳಿಗಾಗಿ ಬೇಡಿಕೆಯಿಟ್ಟಿದ್ದರು. ಅವರ ಬೇಡಿಕೆ ಈಡೇರಿಸದಿದ್ದರೆ ತನ್ನನ್ನು ನಾಸ್ತಿಕಳೆಂದು ಎಲ್ಲರೂ ಜರಿಯಬಹುದೆಂದು ಬೆದರಿ ಆಕೆ ಮಗುವನ್ನು ಹಣಕ್ಕಾಗಿ ಮಾರಿದ್ದಳೆಂದು ಈಗ ತಿಳಿದು ಬಂದಿದೆ.

‘‘ನನಗೆ ಬೇರೆ ದಾರಿಯಿರಲಿಲ್ಲ. ನನ್ನ ಪತಿ ಆರು ತಿಂಗಳ ಹಿಂದೆ ನಾಲ್ಕು ಮಕ್ಕಳನ್ನು ನನ್ನ ಆರೈಕೆಯಲ್ಲಿ ಬಿಟ್ಟು ಮೃತ ಪಟ್ಟಿದ್ದಾರೆ. ಹಗ್ಗಗಳನ್ನು ಮಾರಿ ಜೀವನ ಸಾಗಿಸುತ್ತಿದ್ದೆ. ಈಗ ಈ ಮಗು ನನಗೊಂದು ಹೆಚ್ಚಿನ ಹೊರೆಯಾಗಿದೆ,’’ ಎಂದು ಆಕೆ ಹೇಳುತ್ತಾಳೆ. ಉದ್ಯಮಿ ನೀಡಿದ ಹಣವನ್ನು ಹಿಂದಿರುಗಿಸುವ ಜವಾಬ್ದಾರಿ ಆಕೆಗಿದ್ದು ತನ್ನ ಮಗುವನ್ನು ದತ್ತು ನೀಡಲು ಕೂಡ ತಾನು ಸಿದ್ಧವೆಂದು ಆಕೆ ಹೇಳುತ್ತಾಳೆ. ಮಗುವನ್ನು ದತ್ತು ನೀಡಲು ಸ್ಥಳೀಯಾಡಳಿತ ಆಕೆಗೆ ಸಹಾಯ ಮಾಡುವ ಭರವಸೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News