ರಾಷ್ಟ್ರಪತಿಯ ತಪ್ಪು ಹೆಜ್ಜೆ
ಮಾನ್ಯರೆ,
ಅರುಣಾಚಲಪ್ರದೇಶ, ಉತ್ತರಾಖಂಡದಲ್ಲಿ ತನ್ನ ಅಧಿಕಾರವನ್ನು ಬಳಸಿ, ಪ್ರಜಾಸತ್ತೆಯನ್ನು ನಾಶ ಮಾಡಲು ಯೋಜನೆ ಹಾಕಿದ ನರೇಂದ್ರ ಮೋದಿಯವರಿಗೆ ತೀವ್ರ ಮುಖಭಂಗವಾಗಿದೆ. ನ್ಯಾಯಾಲಯ ಅಲ್ಲಿ ಮತ್ತೆ ಪ್ರಜಾಸತ್ತೆಯನ್ನು ಪುನರ್ ಸ್ಥಾಪಿಸಿದೆ. ಇದು ದೇಶದ ಭವಿಷ್ಯಕ್ಕೆ ಆಶಾದಾಯಕ ಸಂಗತಿಯಾಗಿದೆ. ಇದೇ ಸಂದರ್ಭದಲ್ಲಿ ಒಂದು ರಾಜ್ಯದಲ್ಲಿ ಜನರು ಆರಿಸಿ ಕಳುಹಿಸಿದ ಸರಕಾರವನ್ನು ಉರುಳಿಸಲು ಸಂಚು ಹೂಡಿದ್ದಕ್ಕೆ ಕೇಂದ್ರದ ನಾಯಕರಿಗೆ ಶಿಕ್ಷೆಯಿಲ್ಲವೇ?
ಜನಸಾಮಾನ್ಯರು ಸಂವಿಧಾನವನ್ನು ಉಲ್ಲಂಘಿಸಿ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ನೀಡಲಾಗುತ್ತದೆ. ಆದರೆ ರಾಜಕಾರಣಿಗಳು ಸಂವಿಧಾನವನ್ನು ಬುಡಮೇಲು ಮಾಡಿದರೆ ಅದಕ್ಕೆ ಯಾಕೆ ಶಿಕ್ಷೆಯಿಲ್ಲ? ಇಂತಹ ತಪ್ಪು ತೀರ್ಮಾನವನ್ನು ತೆಗೆದುಕೊಂಡ ರಾಷ್ಟ್ರಪತಿಯ ವಿರುದ್ಧವೂ ನ್ಯಾಯಾಲಯ ತನ್ನ ಉಗ್ರ ಚಾಟಿಯನ್ನು ಬೀಸಬೇಕಾಗಿದೆ. ಕೇಂದ್ರ ಸರಕಾರ ಹೇಳಿದ್ದಕ್ಕೆ ಕೋತಿಯಂತೆ ತಲೆಯಾಡಿಸುವುದು ರಾಷ್ಟ್ರಪತಿಯ ಕೆಲಸವಲ್ಲ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಅರಿತುಕೊಂಡು ರಾಷ್ಟ್ರಪತಿ ಹೆಜ್ಜೆ ಇಡಬೇಕಾಗಿದೆ. ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಎಡವಿದ್ದು ಸ್ಪಷ್ಟವಾಗಿ ಗೋಚರವಾಗಿದೆ. ಮುಂದಿನ ದಿನಗಳಲ್ಲಾದರೂ ಅವರು ಪಾಠ ಕಲಿಯಬೇಕು. ರಾಷ್ಟ್ರಪತಿಯ ಕೆಲಸವೇ ಸಂವಿಧಾನವನ್ನು ಕಾಯುವುದು. ಕೇಂದ್ರದಲ್ಲಿ ಅಧಿಕಾರ ದುರುಪಯೋಗವಾದಾಗ ಅವರನ್ನು ಎಚ್ಚರಿಸುವುದು. ದುರದೃಷ್ಟವಶಾತ್ ರಾಷ್ಟ್ರಪತಿಯವರು ಕೇಂದ್ರದ ಕೈಗೊಂಬೆಯಾಗುವ ಸನ್ನಿವೇಶ ನಿರ್ಮಾಣವಾಗಿದೆ. ರಾಷ್ಟ್ರಪತಿಗೂ ಒಂದು ವ್ಯಕ್ತಿತ್ವ ಇದೆ. ಹೊಣೆಗಾರಿಕೆ ಇದೆ ಎನ್ನುವುದು ದೇಶಕ್ಕೆ ತಿಳಿಯಲ್ಪಡುವಂತಾಗಬೇಕು. ಹಾಗಾದಾಗ ಮಾತ್ರ ಪ್ರಜಾಸತ್ತೆ ಈ ದೇಶದಲ್ಲಿ ಸ್ಥಿರವಾಗಿ ಉಳಿಯಬಹುದು.