ಇದು ಜನಾಂಗೀಯ ದ್ವೇಷವಲ್ಲವೇ?
ಮಾನ್ಯರೆ,
ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆಲ್ಲ ಇತ್ತೀಚೆಗೆ ಬ್ರಾಹ್ಮಣರನ್ನೇ ಹೊಣೆ ಮಾಡಲಾಗುತ್ತಿದೆ. ಇಂದು ದಲಿತಪರವಾದ, ಪ್ರಗತಿಪರವಾದ ಚಳವಳಿಗಳಲ್ಲಿ ಬ್ರಾಹ್ಮಣರೇ ಮುಂಚೂಣಿಯಲ್ಲಿರುವಾಗ, ದಲಿತರ ಮೇಲೆ ಹಲ್ಲೆ ನಡೆಸಿದವರಲ್ಲಿ ಬ್ರಾಹ್ಮಣರ ಒಂದು ಹೆಸರೂ ಪತ್ರಿಕೆಗಳಲ್ಲಿ ಪ್ರಕಟವಾಗದೇ ಇರುವಾಗ ಬ್ರಾಹ್ಮಣ ಸಮುದಾಯದ ವಿರುದ್ಧ ಈ ಆರೋಪ ಒಂದು ರೀತಿಯ ರಾಜಕೀಯ ಸಂಚು ಆಗಿದೆ. ಬ್ರಾಹ್ಮಣರು ಒಂದು ಕಾಲದಲ್ಲಿ ದಲಿತರನ್ನು, ಹಿಂದುಳಿದ ವರ್ಗಗಳನ್ನು ತಮಗೆ ಪೂರಕವಾಗಿ ಶೋಷಿಸಿರಬಹುದು. ಆದರೆ ಶ್ರೀಮಂತ, ಕೋಟ್ಯಧಿಪತಿ ಬ್ರಾಹ್ಮಣರು ಈ ದೇಶದಲ್ಲಿ ಬಾಳಿ ಬದುಕಿದ್ದು ಕಡಿಮೆ ಎನ್ನುವುದೂ ಅಷ್ಟೇ ವಾಸ್ತವ. ಇಂದಿಗೂ ಕತೆಗಳಲ್ಲಿ ‘ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹ್ಮಣನಿದ್ದ’ ಎಂದೇ ಶುರುವಾಗುತ್ತದೆ. ಇಂದು ಸಾಧಿಸಿ ಮೇಲೆ ಬಂದಿರುವ ಹೆಚ್ಚಿನ ಬ್ರಾಹ್ಮಣರು ವಂಶಪಾರಂಪರ್ಯ ಆಸ್ತಿಯನ್ನು ಹೊಂದಿದವರಲ್ಲ. ತಮ್ಮದೇ ಸಾಧನೆಗಳ ಮೂಲಕ ಅದನ್ನು ಗಳಿಸಿದವರು. ನಿಜ. ವೈದಿಕ ಸಂಪ್ರದಾಯಗಳು ಕ್ಷತ್ರಿಯರು ಅದರಲ್ಲೂ ಮೇಲಿನ ಬಲಾಢ್ಯ ಶೂದ್ರ ಜಾತಿಗಳಿಗೆ ಪೂರಕವಾಗಿತ್ತು. ಆದರೆ ಆ ಸಂಪ್ರದಾಯದಿಂದ ಬಹುತೇಕ ಬ್ರಾಹ್ಮಣರು ಹೊರಗೆ ಬಂದು, ಹೊಸ ಗಾಳಿಯನ್ನು, ಹೊಸ ನೀರನ್ನು ಆರಿಸಿಕೊಂಡಿದ್ದಾರೆ. ಮೇಲ್ಜಾತಿಯ ಶೂದ್ರರು ಮಾತ್ರ ಅದರ ಲಾಭವನ್ನು ಇನ್ನೂ ಪಡೆಯುತ್ತಲೇ ಇದ್ದಾರೆ. ಇಂದಿಗೂ ಉತ್ತರ ಭಾರತದಲ್ಲಿ ಠಾಕೂರರು, ರಜಪೂತರು ಜನರನ್ನು ಶೋಷಿಸುತ್ತಿದ್ದಾರೆಯೇ ಹೊರತು, ಬ್ರಾಹ್ಮಣರ ಸಂಖ್ಯೆ ಎಳ್ಳಷ್ಟೂ ಇಲ್ಲ. ಆದರೆ ಜಾತಿಯ ಎಲ್ಲ ಲಾಭಗಳನ್ನು ಪಡೆದು ಅದನ್ನು ಒಂದಾನೊಂದು ಕಾಲದ ಬ್ರಾಹ್ಮಣರ ಮುಖಕ್ಕೆ ಒರೆಸಿ, ಇಂದಿನ ಬ್ರಾಹ್ಮಣರ ವಿರುದ್ಧ ದ್ವೇಷವನ್ನು ಬಿತ್ತಲಾಗುತ್ತಿದೆ. ಇದೂ ಒಂದು ರೀತಿಯಲ್ಲಿ ಜನಾಂಗೀಯ ದ್ವೇಷವೇ ತಾನೇ? ಯಾಕೆ ಯಾರೂ ಈ ಜನಾಂಗೀಯ ದ್ವೇಷದ ವಿರುದ್ಧ ಮಾತನಾಡುತ್ತಿಲ್ಲ?
ದೇಶಾದ್ಯಂತ ದಲಿತರು, ಕೆಳಜಾತಿ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆದ ಒಂದೇ ಒಂದು ದಾಳಿಯಲ್ಲಿ ಬ್ರಾಹ್ಮಣ ಸಮುದಾಯದ ಯುವಕರಿಲ್ಲ. ಅವರು ಸುಶಿಕ್ಷಿತ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಗುರಿಯಲ್ಲಿ ಸಾಗಿ ಯಶಸ್ವಿಯಾಗುತ್ತಿದ್ದಾರೆ. ಆದರೆ ದಬ್ಬಾಳಿಕೆ, ದೌರ್ಜನ್ಯ ಇವುಗಳ ಬೆನ್ನ ಹಿಂದೆ ಸಾಗಿದವರು ಅಂತಿಮವಾಗಿ ತಮ್ಮ ಇಂದಿನ ಸ್ಥಿತಿಗೆ ಬ್ರಾಹ್ಮಣರನ್ನು ಹೊಣೆ ಮಾಡುತ್ತಿದ್ದಾರೆ. ಇಂದು ದೇಶದ ಹೆಚ್ಚಿನ ದೇವಳದ ಆಡಳಿತ ಮಂಡಳಿಯಲ್ಲಿರುವವರು ಮೇಲ್ವರ್ಗದ ಶೂದ್ರರು. ಆದರೆ ಅಲ್ಲಿ ಪ್ರವೇಶಕ್ಕೆ ನಿರಾಕರಣೆ ನಡೆದಾಗ ಬಲಿಯಾಗುವವರು ಅಲ್ಲಿನ ಅರ್ಚಕರು. ಬ್ರಾಹ್ಮಣರು ಈ ದೇಶದ ಅತಿ ಅಲ್ಪಸಂಖ್ಯಾತರು. ಅವರಿಂದ ಹಿಂದೆ ಕೆಡುಕುಗಳು ಆಗಿರಬಹುದು. ಆದರೆ ಅಷ್ಟೇ ಒಳಿತುಗಳೂ ಈ ದೇಶಕ್ಕೆ ಆಗಿದೆ. ಇಂದಿಗೂ ಆಗುತ್ತಿವೆ. ಇದನ್ನು ಮರೆಯಬಾರದು. ಕ್ಷುದ್ರ ರಾಜಕೀಯಗಳಿಗೆ ಅಮಾಯಕರು ಬಲಿಯಾಗಬಾರದು. ಬಲಾಢ್ಯ ಶೂದ್ರ ವರ್ಗದವರ ವಿರುದ್ಧ ಹೋರಾಡಲು ಸಾಧ್ಯವಾಗದೇ ತಮ್ಮಷ್ಟಕ್ಕೆ ತಾವು ಶಾಲೆ ಕಾಲೇಜು, ಕೃಷಿ ಎಂದು ಬದುಕುತ್ತಿರುವ ಬ್ರಾಹ್ಮಣರ ಮೇಲೆ ಆ ಸಿಟ್ಟನ್ನು ವ್ಯಕ್ತಪಡಿಸುವುದು ಅಥವಾ ಮಾಧ್ಯಮಗಳು ಆ ರೀತಿಯಲ್ಲಿ ಸಾಗುವಂತೆ ಪ್ರಚೋದಿಸುವುದು ಸರಿಯಲ್ಲ.