ಶಾಲಾ ವಾಹನಕ್ಕೆ ರೈಲು ಢಿಕ್ಕಿ

Update: 2016-07-25 18:29 GMT

ಭದೋಹಿ(ಉ.ಪ್ರ.),ಜು.25: ಇಲ್ಲಿಗೆ ಸಮೀಪದ ಕಾವಲು ರಹಿತ ರೈಲ್ವೆ ಕ್ರಾಸಿಂಗೊಂದರಲ್ಲಿ ಇಂದು ಬೆಳಿಗ್ಗೆ ರೈಲೊಂದು ಶಾಲಾವ್ಯಾನಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಶಾಲಾಮಕ್ಕಳು ಸಾವನ್ನಪ್ಪಿದ್ದು, ಇತರ 14 ಜನರು ಗಾಯಗೊಂಡಿದ್ದಾರೆ. ವ್ಯಾನಿನ ಚಾಲಕ ಎಚ್ಚರಿಕೆಯನ್ನು ಕಡೆಗಣಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದು ಈ ದುರಂತಕ್ಕೆ ಕಾರಣವಾಗಿದೆ.

 ಘೋಸಿಯಾ ಬಡಾವಣೆಯಲ್ಲಿರುವ ಟೆಂಡರ್‌ಹಾರ್ಟ್ ಶಾಲೆಗೆ ಸೇರಿದ ಈ ವ್ಯಾನ್ ಆಸುಪಾಸಿನ ಆರು ಗ್ರಾಮಗಳ 6ರಿಂದ 14ವರ್ಷ ವಯೋಮಾನದ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ಚಾಲಕ ಕಟ್ಕಾ ಮತ್ತು ಮಾಧೋಸಿಂಗ್ ರೈಲ್ವೆ ನಿಲ್ದಾಣಗಳ ಮಧ್ಯೆಯಿರುವ ಕಾವಲುರಹಿತ ಕ್ರಾಸಿಂಗ್‌ನ್ನು ದಾಟುವ ಪ್ರಯತ್ನದಲ್ಲಿದ್ದಾಗಲೇ ಧಾವಿಸಿ ಬಂದ ವಾರಣಾಸಿ-ಅಲಹಾಬಾದ್ ಪ್ಯಾಸೆಂಜರ್ ರೈಲು ವ್ಯಾನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ಹಾರಿದ ವ್ಯಾನ್ ಸಮೀಪದ ಗದ್ದೆಯೊಂದರಲ್ಲಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎಳೆಯ ಮಕ್ಕಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ರೈಲ್ವೆ ಸಚಿವ ಸುರೇಶ ಪ್ರಭು ಅವರು, ದುರಂತದ ಸ್ಥಳದಲ್ಲಿದ್ದ ‘ಗೇಟ್ ಮಿತ್ರ’ನೋರ್ವ ಕೆಂಪು ಬಾವುಟ ತೋರಿಸಿ ರೈಲು ಬರುತ್ತಿದೆ ಎಂದು ಎಚ್ಚರಿಸಿದ್ದರೂ ಅದನ್ನು ಕಡೆಗಣಿಸಿದ ಚಾಲಕ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದ ಎಂದು ತಿಳಿಸಿದ್ದಾರೆ.
ಅಪಘಾತದ ಸಂದರ್ಭದಲ್ಲಿ ವ್ಯಾನಿನ ಚಾಲಕ ಕಿವಿಗಳಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಸಂಗೀತವನ್ನು ಆಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ರೈಲು ಬರುತ್ತಿರುವ ಬಗ್ಗೆ ಚಾಲಕನ ಗಮನ ಸೆಳೆಯಲು ತಾವು ಪ್ರಯತ್ನಿಸಿದ್ದೆವು. ಆದರೆ ಆತ ಅದನ್ನು ನಿರ್ಲಕ್ಷಿಸಿ ಕ್ರಾಸಿಂಗ್‌ನ್ನು ದಾಟುವ ತರಾತುರಿಯಲ್ಲಿದ್ದ ಎಂದು ಈ ದುರಂತದಲ್ಲಿ ಬದುಕುಳಿದಿರುವ ಮಕ್ಕಳು ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಏಳು ವಿದ್ಯಾರ್ಥಿಗಳು ಮತ್ತು ಚಾಲಕ ಸೇರಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಸಂಬಂಧ ಶಾಲಾಡಳಿತದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್‌ಪಿ ಅರವಿಂದ ಭೂಷಣ್ ಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News