ದಾದ್ರಿ ಕೊಲೆ ಬಗ್ಗೆ ಮೋದಿ ಮೌನ, ಸಂಘ ಪರಿವಾರದ ದ್ವೇಷ ರಾಜಕೀಯ ಖಂಡಿಸಿದ್ದ ಟಿ.ಎಂ. ಕೃಷ್ಣ
ಬೆಂಗಳೂರು, ಜು.28 : ಇತ್ತೀಚೆಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕದ ಖ್ಯಾತ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಂ. ಕೃಷ್ಣ ಅವರು ದಾದ್ರಿ ಕೊಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ಹಾಗೂ ಸಂಘ ಪರಿವಾರದ ದ್ವೇಷ ರಾಜಕಾರಣವನ್ನು ಖಂಡಿಸಿ ಮೋದಿಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬರೆದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ ಎಂ ಕಲಬುರ್ಗಿ ಹಾಗೂ ದಾದ್ರಿಯ ಮೊಹಮ್ಮದ್ ಅಖ್ಲಾಖ್ ಕೊಲೆ ಪ್ರಕರಣಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದ ಕೃಷ್ಣ ``ಪ್ರಧಾನ ಮಂತ್ರೀಜಿ -- ನಿಮ್ಮ ಮೌನ ಮಾತ್ರವಲ್ಲದೆ, ನಿಮ್ಮ ಪ್ರತಿಕ್ರಿಯೆ ಯಾಚಿಸಿದ ನಾಗರಿಕರನ್ನೆಲ್ಲಾ ನಿಂದಿಸಿ, ಅಪಹಾಸ್ಯ ಮಾಡಿ ಗೌಣಗೊಳಸಿದ ವಿಚಾರವೂ ನಮಗೆ ಆಶ್ಚರ್ಯ ತಂದಿದೆ. ನಿಮ್ಮ ಪ್ರತಿಕ್ರಿಯೆ ಕೇಳುವುದು ಸರಿಯಲ್ಲವೇ ? ನಿಮ್ಮ ಪ್ರತಿಕ್ರಿಯೆ ಕೇಳುವ ಅಧಿಕಾರ ನಮಗಿಲ್ಲವೇ ? ಇಷ್ಟೊಂದು ಮಹತ್ವದ ವಿಚಾರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಕೇಳಿದ ಮಾತ್ರಕ್ಕೆ ನಾವೇನೋ ದೊಡ್ಡ ತಪ್ಪು ಮಾಡಿದ್ದೇವೆಂಬ ಭಾವನೆಯನ್ನು ಏಕೆ ವ್ಯಕ್ತಪಡಿಸಲಾಗುತ್ತಿದೆ ?''ಎಂದು ಪ್ರಶ್ನಿಸಿದ್ದರು.
``ಪ್ರಧಾನ ಮಂತ್ರೀಜಿ, ನೀವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಆಗಾಗ ಹೇಳುತ್ತಿರುತ್ತೀರಿ. ಆದರೆ ಅದು ಸಾಲದು. ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಾವು ಒಂದಕ್ಕಿಂತ ಹೆಚ್ಚು ದುರಂತಗಳಿಗೆ ಸಾಕ್ಷಿಯಾಗಿದ್ದೇವೆ. ಈ ಘಟನೆಗಳ ನಡುವಿನ ಸಂಬಂಧ ನಮಗೆ ಕಾಣದೇ ಇರುವುದೇ? ಕಂತೆಪುರಾಣಗಳನ್ನು ಹೇಳುವ ಸಮಯ ಇದಲ್ಲ, ನಿಮ್ಮಿಂದ ಬಲವಾದ ಖಂಡನೆಯ ಅಗತ್ಯವಿದೆ. ಯಾರೇ ಆಗಲಿ ಮಂಡಿಸಿದ ಅಭಿಪ್ರಾಯ ಅಸಮ್ಮತವಾದಲ್ಲಿ, ಅಥವಾ ಯಾವುದೇ ವ್ಯಕ್ತಿಯ ಧರ್ಮ ಹಾಗೂ ಆಹಾರ ಪದ್ಧತಿಯ ವಿಚಾರದಲ್ಲಿ ಆತನನ್ನು ಕೊಂದರೆ ಸರಕಾರ ಅದನ್ನು ಸಹಿಸುವುದಿಲ್ಲವೆಂಬುದು ನಿಮ್ಮ ಖಂಡನೆಯ ಮೂಲಕ ನಮಗೆ ತಿಳಿಯಬೇಕು,'' ಎಂದು ಕೃಷ್ಣ ಬರೆದಿರುವ ಪತ್ರ ಹೇಳುತ್ತದೆ.
``ನೀವು ಮಾತನಾಡುವುದನ್ನು ನಾವು ಕೆಂಪು ಕೋಟೆ, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ದುಬೈ, ಸಿಲಿಕಾನ್ ವ್ಯಾಲಿ ಹಾಗೂ ಫೇಸ್ ಬುಕ್ ಕಚೇರಿಯಲ್ಲಿ ಕೇಳಿದ್ದೇವೆ. ನಿಮ್ಮ ತಾಯಿ ಪಟ್ಟ ಪಾಡಿನ ಬಗ್ಗೆ ನೀವು ಮಾತನಾಡಿದ್ದನ್ನು ಕೇಳಿದ್ದೇವೆ. ಆದರೆ ಗೋಮಾಂಸ ಸೇವಿಸಿದ್ದಾನೆಂದು ಹೇಳಲಾದ ವ್ಯಕ್ತಿಯ ದಾರುಣ ಕೊಲೆಯ ಬಗ್ಗೆ ನೀವೇಕೆ ಮೌನವಾಗಿದ್ದೀರಿ?''ಎಂದೂ ಅವರು ಪ್ರಶ್ನಿಸಿದ್ದಾರೆ.
`ಆರೆಸ್ಸೆಸ್ ಹಾಗೂ ಸಂಘ ಪರಿವಾರ ಸಂಘಟನೆಗಳು ಜನರನ್ನು ವಿಭಜಿಸಲು ಯತ್ನಿಸುತ್ತವೆ. ನೀವು ಪ್ರಧಾನಿಯಷ್ಟೇ ಅಲ್ಲದೆ ಬಿಜೆಪಿಯನ್ನು ನಿಯಂತ್ರಿಸುವ ದೈತ್ಯ ನಾಯಕ ಹಾಗಿರುವಾಗ ಈ ಸಂಘ ಪರಿವಾರಗಳು ನಡೆಸುವ ಎಲ್ಲಾ ಕಾರ್ಯಗಳಿಗೂ ನೀವೂ ಜವಾಬ್ದಾರರಾಗಿರುತ್ತೀರಿ. ಹಿಂದೂಗಳು ಹಾಗೂ ಮುಸ್ಲಿಮರು ಒಬ್ಬರ ವಿರುದ್ಧ ಒಬ್ಬರು ಹೋರಾಡಬೇಕೇ ಅಥವಾ ಬಡತನದ ವಿರುದ್ಧ ಹೋರಾಡಬೇಕೇ ಎಂದು ನಿರ್ಧರಿಸಬೇಕು ಎಂದು ನೀವು ಹೇಳಿದ್ದೀರಿ. ಇದು ಖಾಲಿ ಘೋಷಣೆಯಲ್ಲದೆ ಮತ್ತಿನ್ನೇನಲ್ಲ ಏಕೆಂದರೆ ಬಡತನವು ಧರ್ಮ, ಜಾತಿ, ವರ್ಗಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ನಮ್ಮ ಮುಂದಿರುವ ಸವಾಲುಗಳನ್ನು ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ಎದುರಿಸದೇ ಹೋದರೆ ನಮ್ಮ ಬಡತನ ಹಾಗೂ ನಮ್ಮ ಹಿಂದುಳುವಿಕೆಯ ಸಮಸ್ಯೆ ಹಾಗೆಯೇ ಉಳಿದು ಬಿಡುವುದು,''ಎಂದಿದ್ದಾರೆ ಕೃಷ್ಣ.