×
Ad

ಮಂಗಳೂರು ವಿ.ವಿ. ಅವಾಂತರ: ವಿದ್ಯಾರ್ಥಿಗಳ ಭವಿಷ್ಯ ತತ್ತರ

Update: 2016-07-28 23:44 IST

ಮಾನ್ಯರೆ,

ಮಂಗಳೂರು ವಿಶ್ವವಿದ್ಯಾನಿಲಯವು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ ಎನ್ನುವುದು ಹೆಮ್ಮೆಯ ಸಂಗತಿ. ಸುಮಾರು 200 ಕಾಲೇಜುಗಳು ವಿ.ವಿ.ಯ ವ್ಯಾಪ್ತಿಗೆ ಒಳಪಡುತ್ತವೆ. ವಿ.ವಿ. ಪ್ರಾಮಾಣಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೆಸರುವಾಸಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದ ಕೆಲವು ಅಪ್ರಾಮಾಣಿಕ ವಿಚಾರಗಳು ವಿದ್ಯಾರ್ಥಿಗಳನ್ನು ಚಿಂತೆಗೀಡುಮಾಡಿವೆ. ಪರಿಣಾಮ ವಾಗಿ ಕೇವಲ ಒಂದೇ ಕಾಲೇಜಿನ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಮಂಗಳೂರು ವಿಶ್ವವಿದ್ಯಾನಿಲಯದಿಂದಾಗಿ ಡೋಲಾಯಮಾನವಾಗಿದೆ ಎಂದು ಹೇಳಲು ಬೇಸರವಾಗುತ್ತದೆ. ಆದರೆ ಹೇಳದೆ ವಿಧಿ ಇಲ್ಲ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಕಾಲೇಜುಗಳ ವಿದ್ಯಾರ್ಥಿಗಳ ಒಂದನೆ, ಮೂರನೆ ಸೆಮಿಸ್ಟರ್‌ನ ಫಲಿತಾಂಶ ನೀಡದೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಿ.ವಿ. ಆಟವನ್ನಾಡುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಈವರೆಗೂ ಎರಡನೆ ಮತ್ತು ನಾಲ್ಕನೆ ಸೆಮಿಸ್ಟರ್ ಪರೀಕ್ಷೆ ಮುಗಿದು ಮೂರನೆ ಮತ್ತು ಐದನೆ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸರಿಯಾದ ಮತ್ತು ಸೂಕ್ತ ರೀತಿಯ ಫಲಿತಾಂಶ ವಿದ್ಯಾರ್ಥಿಗಳ ಕೈಗೆ ಬಂದಿಲ್ಲ. ಇದರ ನಿಜವಾದ ಸಮಸ್ಯೆ ಎದುರಿಸುತ್ತಿರುವವರು ವಿದ್ಯಾರ್ಥಿಗಳೇ ಹೊರತು ಮಂಗಳೂರು ವಿಶ್ವವಿದ್ಯಾನಿಲಯವಲ್ಲ ಎಂಬುದು ಕಣ್ಣಿಗೆ ರಾಚುವ ಕ್ರೂರ ಸತ್ಯ. ಒಂದನೆ, ಮೂರನೆ ಮತ್ತು ಐದನೆ ಸೆಮಿಸ್ಟರ್‌ನ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದ ಸಮಸ್ಯೆಯನ್ನು ಹೇಳಲೇಬೇಕು. * ಕೆಲವು ವಿದ್ಯಾರ್ಥಿಗಳ ಫಲಿತಾಂಶ ಈವರೆಗೂ ಬರಲೇ ಇಲ್ಲ. ವಿ.ವಿ.ಯ ವೆಬ್‌ಸೈಟ್‌ನಲ್ಲಿ ನೋಡಿದರೆ ಸರಿಯಾಗಿ ತೋರಿಸು ವುದಿಲ್ಲ.

 
 

* ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗದೆ ಗೈರಾದ (ಹಾಜರಾಗದ) ವಿದ್ಯಾರ್ಥಿಗೆ ಫಲಿತಾಂಶ ದೊರಕಿದೆ. ಉದಾಹರಣೆಗೆ ‘ಎಬಿಸಿ’ ಎನ್ನುವ ವಿದ್ಯಾರ್ಥಿ ಪರೀಕ್ಷೆಗೆ ಗೈರಾದರೂ ಸುಮಾರು 90 ಅಂಕಗಳು ಬಂದಿವೆ. ಆದರೆ ‘ಸಿಬಿಝಡ್’ ನಿಜಕ್ಕೂ ಪರೀಕ್ಷೆ ಬರೆದರೂ ಗೈರು ಎಂದು ಆತ/ಆಕೆಯ ಅಂಕಪಟ್ಟಿಯಲ್ಲಿ ತೋರಿಸುತ್ತಿದೆ. * ಕೆಲವರ ಆಂತರಿಕ ಅಂಕಗಳು ಆಯಾ ವಿಷಯಗಳ ಥಿಯರಿಯೊಂದಿಗೆ ಸೇರದೆ 00 ಎಂದು ತೋರಿಸುತ್ತದೆ. ಕೇಳಿದರೆ ಕಾಲೇಜು ಕಳುಹಿಸಿಲ್ಲ ಎಂಬ ಸಬೂಬು ಉತ್ತರ ವಿ.ವಿ.ಯಿಂದ ವಿದ್ಯಾರ್ಥಿಗೆ ಸಿಕ್ಕ ಉತ್ತರ. ವಿ.ವಿ. ಕೇಳಿದಾಗಲೆಲ್ಲ ಕಾಲೇಜುಗಳು ಎಲ್ಲಾ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಪುನಃ ಪುನಃ ನೀಡಿದೆ. ಆದರೂ ಫಲಿತಾಂಶ ಬಂದಿಲ್ಲ. * ಇನ್ನೂ ಕೆಲವರ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ವಿ.ವಿ .ನೀಡುವ (ಇಂಟರ್‌ನೆಟ್ ಪ್ರತಿ) ಅಂಕಪಟ್ಟಿಯಲ್ಲಿ ತೋರಿಸುತ್ತಿಲ್ಲ. ಕೆಲವರ ಅಂಕಗಳು ಸರಿಯಾಗಿ ಬಂದರೂ ಅಂಕಪಟ್ಟಿ ಇನ್ನೂ ದೊರೆತಿಲ್ಲ. *ಕೆಲವು ವಿಷಯಗಳ ಅಂಕಗಳು ವಿದ್ಯಾರ್ಥಿ ತೆಗೆದುಕೊಳ್ಳದ ವಿಷಯಕ್ಕೆ ಸೇರಿಕೊಂಡು ಬಂದಿದೆ. ಉದಾಹರಣೆಗೆ ವಿದ್ಯಾರ್ಥಿಕನ್ನಡ ವಿಷಯ ತೆಗೆದುಕೊಳ್ಳದೆ ಇದ್ದರೂ ಅದಕ್ಕೆ ಅಂಕಗಳು ಬಂದಿವೆ. ಬೇರೆ ವಿಷಯದ ಅಂಕಗಳು ಅದರೊಂದಿಗೆ ಸೇರಿಕೊಂಡುಬಂದಿವೆ. * ಇನ್ನೂ ಕೆಲವರ ಅಂಕಗಳು ಉತ್ತೀರ್ಣವಾದರೂ ಅನುತ್ತೀರ್ಣವೆಂದು ಅಂಕಪಟ್ಟಿಯಲ್ಲಿ ತೋರಿಸುತ್ತಿದೆ. * ವಿ.ವಿ. ಅಳವಡಿಸಿಕೊಂಡ ಕ್ರೆಡಿಟ್ ಆಧಾರಿತ ಸೆಮಿಸ್ಟರ್ ಸ್ಕೀಮ್ ವ್ಯಾಪ್ತಿಯಲ್ಲಿ ಬರುವ ಪಠ್ಯ ಮತ್ತು ಪಠ್ಯೇತರ ಅಂಕಗಳು ವಿದ್ಯಾರ್ಥಿಯ ಅಂಕಪಟ್ಟಿಯೊಂದಿಗೆ ಸೇರಿಸಿಕೊಂಡುಬಂದಿಲ್ಲ. * ನಿರೀಕ್ಷಿಸಿದಷ್ಟು ಅಂಕಗಳು ಹಲವು ವಿದ್ಯಾರ್ಥಿಗಳಿಗೆ ಬಂದಿಲ್ಲ.

* ಈಗಾಗಲೇ ಅಂತಿಮ ಪದವಿ ಮುಗಿಸಿ ಹೋದ ವಿದ್ಯಾರ್ಥಿಗಳ ಸರಿಯಾದ ಅಂಕ ಪಟ್ಟಿ ಬಾರದೆ ಮುಂದಿನ ವ್ಯಾಸಂಗಕ್ಕೆ ತೊಂದರೆಯಾಗಿ ಕಣ್ಣೀರಿಡುವಂತಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ಖಿನ್ನತೆಗೊಳಗಾಗುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ವಿಶ್ವವಿದ್ಯಾನಿಲಯದಿಂದ ಯಾವುದೇ ಉತ್ತರವಿಲ್ಲ. 0824-2287277 ಮತ್ತು 2287427 ಎಂಬ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ರಿಂಗ್ ಆದರೂ ಯಾವುದೇ ಉತ್ತರ ವಿ.ವಿ.ಯಿಂದ ಬರುವುದಿಲ್ಲ. ಇದಕ್ಕೆ ಯಾರು ಹೊಣೆ? ವಿದ್ಯಾರ್ಥಿಗಳೋ ಅಥವಾ ವಿಶ್ವವಿದ್ಯಾನಿಲಯದ ಅಧಿಕಾರಿಗಳೋ???

* ಮನೆಯಲ್ಲಿ ತಂದೆತಾಯಿ ಕೇಳಿದ ಪ್ರಶ್ನೆಗಳಿಗೆ ಉತ್ತರ ವಿ.ವಿ. ಹೇಳುತ್ತದೆಯೇ? ಇಲ್ಲ. ಈ ಎಲ್ಲಾ ಸಮಸ್ಯೆಗಳಿಂದಾಗಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ದೊರಕುವ ವಿದ್ಯಾರ್ಥಿವೇತನ ಮತ್ತು ವಸತಿ ನಿಲಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಈವರೆಗೂ ಸಮಜಾಯಿಷಿ ಉತ್ತರ ಬಿಟ್ಟರೆ ಇನ್ನೇನು ಪರಿಹಾರ ಸಿಕ್ಕಿಲ್ಲ. ಈಗಾಗಲೇ ವಿಶ್ವವಿದ್ಯಾನಿಲಯದ ವಿರುದ್ಧ ಪ್ರತಿಭಟನಾ ಹೋರಾಟ ಮಾಡಿದರೂ ಪರಿಹಾರ ಮಾತ್ರ ಸೊನ್ನೆಯಾಗಿದೆ. ದಯವಿಟ್ಟು ಸಂಬಂಧಪಟ್ಟವರು ಮತ್ತುಮಂಗಳೂರು ವಿಶ್ವವಿದ್ಯಾನಿಲಯವು ನ್ಯಾಯ ದೊರಕಿಸಿಕೊಡಬೇಕಾಗಿದೆ. ವಿದ್ಯಾರ್ಥಿಗಳ ಭವಿಷ್ಯ ವಿಶ್ವವಿದ್ಯಾನಿಲಯದ ಸೂಕ್ತ ರೀತಿಯ ಫಲಿತಾಂಶಕೊಡುವುದರಲ್ಲಿದೆ. ಇಲ್ಲದಿದ್ದರೆ ವಿಶ್ವವಿದ್ಯಾನಿಲಯಕ್ಕೆ ಹೋಗಿಯೇ ನ್ಯಾಯಕ್ಕಾಗಿ ಹೋರಾಡಬೇಕಾಗುತ್ತದೆ.

ನೊಂದ ವಿದ್ಯಾರ್ಥಿಗಳು,
ಕುಂದಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News