ಅರ್ಜೆಂಟೀನ ಫುಟ್ಬಾಲ್ ಆಟಗಾರರ ವಸ್ತುಗಳ ಕಳವು

Update: 2016-07-30 18:22 GMT

ಮೆಕ್ಸಿಕೊ ಸಿಟಿ, ಜು.30: ಮೆಕ್ಸಿಕೊ ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡಲು ತೆರಳಿದ್ದ ಅರ್ಜೆಂಟೀನದ ಒಲಿಂಪಿಕ್ಸ್ ಫುಟ್ಬಾಲ್ ತಂಡದ ಆಟಗಾರರು ವಾಸ್ತವ್ಯ ಹೂಡಿದ್ದ ಹೊಟೇಲ್‌ನಿಂದ ನಗದು ಹಾಗೂ ಇಲೆಕ್ಟ್ರಾನಿಕ್ಸ್ ವಸ್ತುಗಳು ಕಳವಾಗಿವೆ. ಈ ಬಗ್ಗೆ ಅರ್ಜೆಂಟೀನ ತಂಡ ಶುಕ್ರವಾರ ದೂರು ನೀಡಿದೆ.

ಗುರುವಾರ ರಾತ್ರಿ ಮೆಕ್ಸಿಕೊ ವಿರುದ್ಧ ಅರ್ಜೆಂಟೀನ ತಂಡದ ಆಟಗಾರರು ಸೌಹಾರ್ದ ಪಂದ್ಯವನ್ನು ಆಡಿ ರಾತ್ರಿ 11:40ಕ್ಕೆ ಹೊಟೇಲ್ ರೂಮ್‌ಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎಂದು ಅರ್ಜೆಂಟೀನ ಫುಟ್ಬಾಲ್ ಸಂಸ್ಥೆ(ಎಎಪ್‌ಎ) ಉಪಾಧ್ಯಕ್ಷ ಕೌಡಿಯೊ ಟಾಪಿಯಾ ಹೇಳಿದ್ದಾರೆ. ಅವರು ಎಷ್ಟು ಹಣ ಕಳವಾಗಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಅರ್ಜೆಂಟೀನ ತಂಡದ ಆಟಗಾರರಿಗೆ ಪರಿಹಾರ ನೀಡುವ ಕುರಿತು ಎಎಫ್‌ಎ, ಕ್ಯಾಮಿನೊ ರಿಯಲ್ ಹೊಟೇಲ್ ಹಾಗೂ ಇನ್ಶುರೆನ್ಸ್ ಕಂಪೆನಿ ನಡುವೆ ನಡೆಸಲಾದ ಮಾತುಕತೆ ಯಶಸ್ವಿಯಾಗಿದೆ ಎಂದು ಮೆಕ್ಸಿಕೊ ಫುಟ್ಬಾಲ್ ಫೆಡರೇಶನ್ ಹೇಳಿದೆ.

ಆ.5 ರಂದು ರಿಯೋ ಡಿ ಜನೈರೊದಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಅರ್ಜೆಂಟೀನ ಹಾಗೂ ಮೆಕ್ಸಿಕೊ ತಂಡಗಳಿಗೆ ಇದು ಒಲಿಂಪಿಕ್ಸ್‌ಗೆ ಮೊದಲು ಕೊನೆಯ ಪೂರ್ವ ತಯಾರಿ ಪಂದ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News