ರಿಯೋ ಗ್ರಾಮದ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ: ಆಸ್ಟ್ರೇಲಿಯ ಅಥ್ಲೀಟ್‌ಗಳು ಪಾರು

Update: 2016-07-30 18:23 GMT

ರಿಯೋ ಡಿ ಜನೈರೊ, ಜು.30: ರಿಯೋ ಒಲಿಂಪಿಕ್ಸ್ ಗ್ರಾಮದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡ ಕಾರಣ ಆಸ್ಟ್ರೇಲಿಯದ ಅಥ್ಲೀಟ್‌ಗಳನ್ನು ತಕ್ಷಣವೇ ಅಪಾರ್ಟ್‌ಮೆಂಟ್‌ನಿಂದ ತೆರವುಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.

ಆಗಸ್ಟ್ 5 ರಂದು ರಿಯೋ ಡಿಜನೈರೊದಲ್ಲಿ ಆರಂಭವಾಗಲಿರುವ ರಿಯೋ ಗೇಮ್ಸ್‌ಗೆ ಸಜ್ಜಾಗುತ್ತಿರುವ ಆಸ್ಟ್ರೇಲಿಯದ ನಿಯೋಗ ಬೆಂಕಿ ಆಕಸ್ಮಿಕ ಘಟನೆ ನಿವಾರಣೆಯಾಗುವ ತನಕ ಹೊರಗಡೆ ಕಾಲ ಕಳೆದಿತ್ತು. ಘಟನೆಯಿಂದ ಯಾರಿಗೂ ಗಾಯವಾಗಿಲ್ಲ. ಗಂಭೀರ ಹಾನಿ ಸಂಭವಿಸಿಲ್ಲ.

ಒಲಿಂಪಿಕ್ಸ್ ಗ್ರಾಮದ ಕಟ್ಟಡದ ನೆಲ ಮಾಳಿಗೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಕಟ್ಟಡದಲ್ಲಿದ್ದ ಎಲ್ಲ ಅಥ್ಲೀಟ್‌ಗಳು ಹಾಗೂ ಸಹಾಯಕ ಸಿಬ್ಬಂದಿ ವರ್ಗವನ್ನು ಕಟ್ಟಡದಿಂದ ತೆರವುಗೊಳಿಸಲಾಗಿತ್ತು.

ಕಟ್ಟಡದಲ್ಲಿ ಭಾರಿ ಪ್ರಮಾಣದ ಹೊಗೆ ಆವರಿಸಿತ್ತು. ಈ ಕಾರಣದಿಂದ ಎಲ್ಲರನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿಯನ್ನು ತಹಬಂದಿಗೆ ತಂದರು. ಆ ಬಳಿಕ ನಾವು ರೂಮ್‌ಗಳಿಗೆ ವಾಪಸಾದೆವು. ಅಗ್ನಿ ಆಕಸ್ಮಿಕಕ್ಕೆ ಕಾರಣವೇನೆಂದು ಗೊತ್ತಿಲ್ಲ ಎಂದು ಆಸ್ಟ್ರೇಲಿಯ ಅಥ್ಲೀಟ್ ನಿಯೋಗದ ವಕ್ತಾರ ಮೈಕ್ ಟ್ಯಾನ್‌ಕ್ರೆಡ್ ತಿಳಿಸಿದ್ದಾರೆ.

ಆಸ್ಟ್ರೇಲಿಯ ಅಥ್ಲೀಟ್ ತಂಡ ಕಳೆದ ವಾರ ಒಲಿಂಪಿಕ್ಸ್ ವಿಲೇಜ್‌ನ ವಸತಿ ಕಟ್ಟಡಕ್ಕೆ ತೆರಳಲು ನಿರಾಕರಿಸಿತ್ತು. ನಿರ್ಬಂಧಿಸಲ್ಪಟ್ಟ ಶೌಚಾಲಯ ಹಾಗೂ ಅಪಾಯಕಾರಿ ವೈಯರಿಂಗ್‌ರಿಂದಾಗಿ ಒಲಿಂಪಿಕ್ಸ್ ವಿಲೇಜ್‌ಗೆ ತೆರಳಲು ಆಸ್ಟ್ರೇಲಿಯನ್ನರು ಹಿಂದೇಟು ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News