ಫ್ರೊ.ಅಗ್ನಿಹೋತ್ರಿ ಅಮಾನತು ಪ್ರಕರಣ : ಮುಷ್ಕರಕ್ಕಿಳಿದ ಜೆಎನ್‌ಯು ಶಿಕ್ಷಕರು
ಹೊಸದಿಲ್ಲಿ,ಆ.6:ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ(ಜೆಎನ್‌ಯು) ಶಿಕ್ಷಕರು, ವಿಶ್ವವಿದ್ಯಾನಿಲಯದ ಅಡಳಿತ ಪ್ರೊಫೆಸರ್ ಒಬ್ಬರನ್ನು ಆರ್ಥಿಕ ಅಕ್ರಮವೆಸಗಿದ್ದಾರೆಂದು ಆರೋಪಿಸಿ ಅಮಾನತು ಗೊಳಿಸಿದ್ದನ್ನು ಪ್ರತಿಭಟಿಸಿ ನಿನ್ನೆ ಮುಷ್ಕರ ನಡೆಸಿದ್ದಾರೆ ಎಂದು ವರದಿಯಾಗಿದೆ. "ಪ್ರೊಫೆಸರ್ ಆಶಿಷ್ ಅಗ್ನಿಹೋತ್ರಿಯವರ ಅಮಾನತು ಮತ್ತು ಅವರ ವಿರುದ್ಧ ಆಡಳಿತಾತ್ಮಕ ತನಿಖೆಗೆ ಆದೇಶ ಹೊರಡಿಸಿದ ಕುಲಪತಿಯ ನಿರ್ಧಾರ ಅನುಚಿತವಾದುದು. ಇದು ಶಿಕ್ಷರನ್ನು ಹೆದರಿಸುವ ಸಂಚಾಗಿದೆ ಎಂದು ಜೆಎನ್‌ಯು ಶಿಕ್ಷಕರ ಸಂಘ(ಜೆಎನ್‌ಯುಟಿಎ)ದ ಸದಸ್ಯರೊಬ್ಬರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಜೆಎನ್‌ಯು ಭಾಷಾ ಕೇಂದ್ರದ ಪ್ರೊಫೆಸರ್ ಮತ್ತು ಜೆಎನ್‌ಯುಟಿಯ(ಜೆಎನ್‌ಯು ಶಿಕ್ಷಕರ ಸಂಘ) ಉಪಾಧ್ಯಕ್ಷ ಆಶಿಷ್ ಅಗ್ನಿಹೋತ್ರಿಯವರನ್ನು ವಿಶ್ವವಿದ್ಯಾನಿಲಯದ ಆಡಳಿತ ಕಳೆದವಾರ ಅಮಾನತುಗೊಳಿಸಿತ್ತು. ನಕಲಿ ದಾಖಲೆ ತೋರಿಸಿ ಎಲ್‌ಟಿಸಿ ಮತ್ತು ತನ್ನ ತಂದೆ-ತಾಯಿಯ ಚಿಕಿತ್ಸೆಗೆ ಐವತ್ತು ಸಾವಿರ ರೂಪಾಯಿ ಖರ್ಚುಮಾಡಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಆಶಿಷ್ ಅಗ್ನಿಹೋತ್ರಿಯವರನ್ನು ವಿಶ್ವವಿದ್ಯಾನಿಲಯದ ಆಡಳಿತ ಅಮಾನತಿನಲ್ಲಿರಿಸಿತ್ತು ಎನ್ನಲಾಗಿದೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಅಗ್ನಿಹೋತ್ರಿ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದೆ. ಆದರೆ,ವಿಶ್ವವಿದ್ಯಾನಿಲಯದ ಆಡಳಿತ ಕೆಲವು ತಿಂಗಳಿಂದ ಇಂತಹ ಹಲವು ನಿರ್ಧಾರಗಳನ್ನು ಮಾಡುತ್ತಿದೆ ಎಂದು ಜೆಎನ್‌ಯುಟಿಎ(ಶಿಕ್ಷಕರ ಸಂಘ) ಅರೋಪಿಸಿದೆ. "ವಿಶ್ವವಿದ್ಯಾನಿಲಯದ ಸ್ವಾಯತ್ತೆಯ ಮೇಲಿನ ಹಲ್ಲೆಯಿದು ಮತ್ತು ಪ್ರತಿಗಾಮಿ ಹೆಜ್ಜೆಯಾಗಿದೆ" ಎಂದು ಆರೋಪಿಸಿದ್ದ ಜೆಎನ್‌ಯುಟಿಎ, ವಿಶ್ವವಿದ್ಯಾನಿಲಯದ ಈ ನಡೆಗಳನ್ನು ವಿರೋಧಿಸಿ ಮುಷ್ಕರ ನಡೆಸಲು ಆಗಸ್ಟ್ ಒಂದರಂದು ಸಭೆ ಸೇರಿ ನಿರ್ಧರಿಸಿತ್ತು ಎಂದು ವರದಿ ತಿಳಿಸಿದೆ.