ಎಐಡಿಎಂಕೆ ಉಚ್ಚಾಟಿತ ಸಂಸದೆಗೆ ದಿಲ್ಲಿ ಪೊಲೀಸರಿಂದ ರಕ್ಷಣೆ!
ಹೊಸದಿಲ್ಲಿ, ಆ.6: ಎಐಡಿಎಂಕೆ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಪಾರಿಗೆ ದಿಲ್ಲಿಪೊಲೀಸ್ ಇಲಾಖೆ ರಕ್ಷಣೆ ಒದಗಿಸಿದೆ ಎಂದು ವರದಿಯಾಗಿದೆ. ತನ್ನಜೀವಕ್ಕೆ ಅಪಾಯವಿದೆ ಎಂದು ಸಂಸದೆ ಹೇಳಿದ್ದರು ಮತ್ತು ಅವರ ಪಕ್ಷ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಲು ಒತ್ತಡ ಹೇರುತ್ತಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಈ ಕುರಿತು ಹೊಸದಿಲ್ಲಿ ಜಿಲ್ಲಾ ಪೊಲೀಸ್ ವಿಭಾಗದ ಓರ್ವ ಹಿರಿಯ ಅಧಿಕಾರಿ" ಎಐಡಿಎಂಕೆ ಸಂಸದೆಗೆ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದಾರೆ. ಇದಕ್ಕಾಗಿ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿದೆ.ಹಾಗೂ ನಾರ್ಥ್ ಅವೆನ್ಯೂನಲ್ಲಿರುವ ಅವರ ಮನೆಯಲ್ಲಿ ಒಂದು ಪಿಸಿಆರ್ ವ್ಯಾನ್ ಸುಸಜ್ಜಿತಗೊಳಿಸಿ ಇರಿಸಲಾಗಿದೆ" ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಜೊತೆಗೆ ಈ ಹಿರಿಯ ಪೊಲೀಸ್ ಅಧಿಕಾರಿ ಸಂಸದೆ ಶಶಿಕಲಾರಿಗೆ ಪ್ರಾಣಾಪಾಯವಿದೆಯೇ ಎಂದು ಕೂಡಾ ಪರೀಕ್ಷಿಸಲಾಗುತ್ತಿದೆಎಂದು ತಿಳಿಸಿದ್ದು, ಶಶಿಕಲಾ ಪುಷ್ಪಾ ಹಾಗೂ ಡಿಎಂಕೆಯ ಸಂಸದ ತಿರುಚಿ ಶಿವರ ನಡುವೆ ಜುಲೈ ಮೂವತ್ತರಂದು ದಿಲ್ಲಿ ವಿಮಾನನಿಲ್ದಾಣವೊಂದರಲ್ಲಿ ಜಗಳ ನಡೆದಿತ್ತು. ಈ ಪ್ರಕರಣದ ನಂತರ ಶಶಿಕಲಾರನ್ನು ಅವರ ಪಕ್ಷ ಉಚ್ಚಾಟಿಸಿತ್ತು.
ಶಶಿಕಲಾ ಪುಷ್ಪಾ ಆಗಸ್ಟ್ ಒಂದರಂದು ದಿಲ್ಲಿಯ ಡಿಸಿಪಿಗೆ ದೂರೊಂದನ್ನು ನೀಡಿದ್ದರು. "ನನಗೆ ಕಪಾಳಮೋಕ್ಷ ಮಾಡಲಾಗಿದೆ. ಮತ್ತು ಪಕ್ಷದ ಮುಖ್ಯಸ್ಥೆ ಜಯಲಲಿತಾ, ಅವರ ಸಹಾಯಕಿ ಶಶಿಕಲಾ. ಹಾಗೂ ಸಂಸತ್ತಿನ ಉಪಾಧ್ಯಕ್ಷ ತಂಬಿದೊರೈ ಸಹಿತ ಎಐಡಿಎಂಕೆ ಎಲ್ಲ ಸಂಸದರೂ ರಾಜಿನಾಮೆ ನೀಡುವಂತೆ ಬೆದರಿಕೆ ಹಾಕಿದ್ದಾರೆ. ರಾಜಿನಾಮೆ ನೀಡಲು ಒತ್ತಡ ಹೇರುತ್ತಿದ್ದಾರೆ" ಎಂದು ದೂರಿನಲ್ಲಿ ವಿವರಿಸಿದ್ದರು.
"ನಾನು ರಾಜಿನಾಮೆ ನೀಡಲು ಬಯಸುವುದಿಲ್ಲ. ಒಂದು ವೇಳೆ ನಾನು ರಾಜಿನಾಮೆ ನೀಡಿದರೆ ತನ್ನ ಜೀವಕ್ಕೆ ಅಪಾಯ ಎದುರಾಗಬಹುದು. ಆದ್ದರಿಂದ ಡಿಸಿಪಿಗೆ ದೂರು ನೀಡುತ್ತಿದ್ದೇನೆ. ನನಗೆ, ನನ್ನ ಕುಟುಂಬಕ್ಕೆ ಹಾಗೂ ನಾರ್ಥ್ ಅವೆನ್ಯೂದಲ್ಲಿರುವ ತನ್ನ ನಿವಾಸಕ್ಕೆ ಸಂಪೂರ್ಣ ರಕ್ಷಣೆಒದಗಿಸಬೇಕು" ಎಂದು ಶಶಿಕಲಾ ಪೊಲೀಸರನ್ನು ವಿನಂತಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.