×
Ad

ತ್ರಿವರ್ಣದ್ವಜ ಹಾರಿಸುವ ಮುನ್ನ... ನಮ್ಮ ಧ್ವಜದ ಬಗ್ಗೆ ನಮಗೆಷ್ಟು ಗೊತ್ತು?

Update: 2016-08-14 17:30 IST

ರಾಷ್ಟ್ರವು ಸ್ವಾತಂತ್ರ್ಯ ಸಂಭ್ರಮಕ್ಕೆ ಮೈಕೊಡವಿ ನಿಂತಿದೆ. ಶಿಕ್ಷಣ ಕೇಂದ್ರ, ಸರಕಾರಿ-ಖಾಸಗಿ ಸಂಸ್ಥೆಗಳು ರಾಷ್ಟ್ರ ಧ್ವಜಾರೋಹಣದ ಗಳಿಗೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಧ್ವಜದ ವಿಚಾರದಲ್ಲಿ ಕೆಲವು ಕಡೆ ಎಡವಟ್ಟೂ ನಡೆಯುತ್ತದೆ. ಉಲ್ಟಾ ಹಾರಿಸುವವರು, ಸಮಯಮೀರಿಯೂ ತೆಗೆಯದವರು, ನೆಲದಲ್ಲಿ ಹಾಕಿ ಅಗೌರವ ತೋರಿಸುವವರು ಹೀಗೇ ತುಂಬಾ ಉದಾಹರಣೆಗಳಿವೆ. ಅದೆಲ್ಲಾ ಬಿಡಿ ಖುದ್ದು ನಮ್ಮ ಪ್ರಧಾನಮಂತ್ರಿಯವರೇ ಬಾವುಟಕ್ಕೆ ಸಹಿ ಮಾಡಿ ಅಮೆರಿಕಾ ಅಧ್ಯಕ್ಷರಿಗೆ ನೀಡಿ ತಿರಂಗಾ ಕ್ಕೆ ಅಪಮಾನ ಮಾಡಿದ ಉದಾಹರಣೆಯಿದೆ. ಕೆಲವೊಂದು ರಾಜಕಾರಣಿಗಳು ತಿಳುವಳಿಕೆಯಿಲ್ಲದೆ ಧ್ವಜದ ವಿಚಾರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ನಗೆಪಾಟಲಿಗೀಡಾದದ್ದೂ ಇದೆ. ಧ್ವಜದ ಮಹತ್ವವೇನು? ಅದು ಎಲ್ಲಿಂದ ಪ್ರಾರಂಭವಾಯಿತು? ಯಾಕಾಗಿ ತ್ರಿವರ್ಣ? ಇವೇ ಮೊದಲಾದ ಪ್ರಶ್ನೆಯನ್ನು ಕೇಳಿನೋಡಿ. ಹೆಚ್ಚಿನವರಿಗೆ ಏನೇನೂ ಮಾಹಿತಿಯಿಲ್ಲ. ಉತ್ತರಿಸಲು ತತ್ತರಿಸುತ್ತಾರೆ.

ರಾಷ್ಟ್ರಧ್ವಜದ ಕಲ್ಪನೆಯನ್ನು ಹುಟ್ಟುಹಾಕಿದವರು ಸ್ವಾತಂತ್ರ್ಯ ಹೋರಾಟಗಾರರಾದ ಆಂಧ್ರದ ಪಿಂಗಳಿ ವೆಂಕಯ್ಯ ಮತ್ತು ಮೇಡಂ ಕಾಮಾ. ಇದು ಒಮ್ಮೆಲೆ ರೂಪ ತಾಳಿದ್ದಲ್ಲ. ಹಲವು ಉನ್ನತ ತಂಡದ ಸಮಾಲೋಚನೆ, ತಿದ್ದುಪಡಿಯ ಬಳಿಕ ತ್ರಿವರ್ಣ ರಾಷ್ಟ್ರಧ್ವಜ ಸ್ವರೂಪ ಪಡೆಯಿತು. ಧ್ವಜ ನಿರ್ಮಾತೃ ಪಿಂಗಳಿ ವೆಂಕಯ್ಯ 1916 ರಿಂದ 1921 ರ ತನಕ 30 ರಾಷ್ಟ್ರಗಳ ಧ್ವಜದ ಅಧ್ಯಯನ ನಡೆಸಿ ಎರಡು ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಕೆಂಪು ಮತ್ತು ಹಸಿರು ಪಟ್ಟಿಯಿಂದ ಕೂಡಿದ ಭಾರತದ ಧ್ವಜ ತಯಾರಿಸಿದ್ದರು. 1921 ಮಾರ್ಚ್ 30 ರಂದು ಆಂಧ್ರದ ವಿಜಯವಾಡ ದಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಧ್ವಜ ಪ್ರಸ್ತುತಪಡಿಸಲಾಯಿತು. ಗಾಂಧೀಜಿಯವರು ಕೆಂಪು, ಹಸಿರು ಬಣ್ಣದ ಮಧ್ಯೆ ಬಿಳಿಯನ್ನು ಸೇರಿಸಿ ಚರಕವನ್ನು ಸೂಚಿಸಿದರು. 1931 ಆಗಸ್ಟ್ 6 ರಂದು ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರು ಧ್ವಜದ ಮಧ್ಯೆ ಚರಕವಿರುವ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು. ಆಗಸ್ಟ್ 31 ರಂದು ಮೊದಲ ಬಾರಿ ಧ್ವಜಾರೋಹಣ ಮಾಡಿದ ಫಲವಾಗಿ  ಆ ದಿನವನ್ನು ಧ್ವಜ ದಿನವನ್ನಾಗಿ ಆಚರಿಸಲಾಗುತ್ತದೆ. ಜಲಂಧರ್ ನ ಶಿಕ್ಷಣ ತಜ್ಞ ಲಾಲಾ ಹಂಸರಾಜ್ ಚರಕದ ಬದಲಾಗಿ ಅಶೋಕ ಚಕ್ರವನ್ನು ಪರಿಗಣಿಸಲು ಒತ್ತಾಯಿಸಿದರು. ಸರ್ವಪಳ್ಳಿ ರಾಧಾಕೃಷ್ಣನ್ ತ್ರಿವರ್ಣಕ್ಕೆ ಹೊಸ ಅರ್ಥ ಕಲ್ಪಿಸಿದರು. ಕೇಸರಿ ತ್ಯಾಗ ಮತ್ತು ಬಲಿದಾನ, ಬಿಳಿ ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಸಮೃದ್ಧಿ, ಅಶೋಕ ನ್ಯಾಯ ಧರ್ಮದ ಸಂಕೇತವೆಂದು ಹೊಸ ಭಾಷ್ಯ ಬರೆದರು. ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅಸೆಂಬ್ಲಿಯಲ್ಲಿ 1947 ರ ಜುಲೈ 22 ರಂದು ರಾಷ್ಟ್ರಧ್ವಜಕ್ಕೆ ಅಂತಿಮ ಸ್ಪರ್ಶ ನೀಡಿ ಅಧಿಕೃತ ಘೋಷಣೆ ಮಾಡಿದರು. 1950 ಜನವರಿ 26 ರ ತನಕ ಸ್ವತಂತ್ರ ಭಾರತದ ಸ್ವರಾಜ್ಯಭಾರದ ಬಾವುಟವಾಗಿ ನಂತರದ ದಿನಗಳಲ್ಲಿ ಗಣರಾಜ್ಯ ಭಾರತದ ಬಾವುಟವಾಗಿದೆ ನಮ್ಮ ತ್ರಿವರ್ಣ ಪತಾಕೆ. ಅದೇ ಧ್ವಜ ಇಂದಿನ ತನಕ ಮುಂದುವರಿದಿದೆ.

ತ್ರಿವರ್ಣ ಧ್ವಜದ ಮೇಲೆ ಕೇಸರಿ, ಮಧ್ಯೆ ಬಿಳಿ, ಕೆಳಗೆ ಹಸಿರು ಬಣ್ಣ ಹೊಂದಿದೆ. ಬಾವುಟ ಮಧ್ಯದಲ್ಲಿ 24 ರೇಖೆಗಳ ನೀಲಿ ಬಣ್ಣದ ಅಶೋಕ ಚಕ್ರವಿದೆ. ಧ್ವಜವು ಕೈನೇಯ್ಗೆಯಿಂದ ಸಿದ್ಧವಾದ ಶುದ್ಧ ಖಾದಿಯಿಂದ ಕೂಡಿರಬೇಕು. ಅದು ಉಣ್ಣೆ, ರೇಶ್ಮೆ, ಹತ್ತಿಯಾದರೂ ಪರವಾಗಿಲ್ಲ. ಮೂರೂ ಬಣ್ಣಗಳು ಸಮ ಪ್ರಮಾಣದಲ್ಲಿರಬೇಕು ಮತ್ತು ಧ್ವಜದ ಉದ್ದಗಲ 3:2 ರ ಅಳತೆಯಲ್ಲಿರಬೇಕೆಂಬ ನಿಯಮವಿದೆ. ರಾಷ್ಟ್ರಾದ್ಯಂತ ನೀಡಲಾಗುವ ಧ್ವಜ ತಯಾರಾಗುವುದು ನಮ್ಮ ಕರ್ನಾಟಕದಲ್ಲಿ ಎಂಬ ಹೆಮ್ಮೆ ನಮಗಿದೆ. ಭಾರತ ಸಂವಿಧಾನದ ಉಲ್ಲೇಖ ಮತ್ತು ಇಂಡಿಯನ್ ಸ್ಟಾಂಡರ್ಡ್ ಬ್ಯೂರೋ ನಿಯಮಾವಳಿ ಪ್ರಕಾರ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ (ಹುಬ್ಬಳ್ಳಿಯ ಬೆಂಗೇರಿ ಕೇಂದ್ರ) ರಾಷ್ಟ್ರಧ್ವಜ ತಯಾರಿಸಲಾಗುತ್ತಿದೆ. ಬಾವುಟವನ್ನು ಹಿಂದಿಯಲ್ಲಿ "ತಿರಂಗಾ" ಹಾಗೂ ಕನ್ನಡದಲ್ಲಿ "ತ್ರಿವರ್ಣ" ಅಥವಾ "ಮುಬ್ಬಣ್ಣ" ಎಂಬ ಹೆಸರಲ್ಲಿ ಕರೆಯಲ್ಪಡುತ್ತದೆ.

ರಾಷ್ಟ್ರಧ್ವಜ ಪ್ರದರ್ಶನದ ವಿಧಾನಗಳು;
●ಧ್ವಜವನ್ನು ಶೀಘ್ರಗತಿಯಲ್ಲಿ ಏರಿಸಿ ನಿಧಾನವಾಗಿ ಇಳಿಸಬೇಕು.
●ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಹಾರಿಸಬಹುದು.
●ಧ್ವಜದ ಹಸಿರು ಬಣ್ಣ ಕೆಳಗೆ ಕೇಸರಿ ಮೇಲಿರಬೇಕು.
●ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಗಾಂಧಿಜಯಂತಿ, ರಾಷ್ಟ್ರೀಯ ವಿಶೇಷ ದಿನಗಳಲ್ಲಿ ಧ್ವಜ ಹಾರಿಸಲಾಗುತ್ತದೆ. ಕೆಲವೆಡೆ ಎಲ್ಲಾ ದಿನಗಳಲ್ಲೂ ಪ್ರದರ್ಶಿಸಲಾಗುತ್ತದೆ.
●ಧ್ವಜವನ್ನು ಸುಡುವುದು, ಕಾಲಡಿಯಲ್ಲಿ ಹಾಕುವುದು, ಕೆಡಿಸುವುದು, ಮಾತು-ಬರಹ-ಕೃತ್ಯದ ಮೂಲಕ ನಿಂದಿಸಿದರೆ ಅವಮಾನ, ವಿರೋಧಿ ಕಾಯ್ದೆಯಡಿ ಅಪರಾಧವಾಗುತ್ತದೆ.
●ಹವಾಮಾನ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಕಾಪಾಡಬೇಕು.
●ವೇದಿಕೆಯ ಮೇಲೆ ಧ್ವಜ ಬಳಸುವಾಗ ಭಾಷಣ ಮಾಡುವವರ ಬಲಬದಿಯಲ್ಲಿ ಎತ್ತರದಲ್ಲಿ ಕೋಲಿನಲ್ಲಿ ಅಳವಡಿಸಿರಬೇಕು.
●ಶಿಕ್ಷಣ ಸಂಸ್ಥೆಗಳು,ಕ್ರೀಡೆ, ಸ್ಕೌಟ್ಸ್ ಶಿಬಿರಗಳಲ್ಲಿ ಮಕ್ಕಳ ಮನಸ್ಸಲ್ಲಿ ಗೌರವ ಮೂಡಿಸಲು ಧ್ವಜ ಹಾರಿಸಬಹುದು.

ಅಧಿಕೃತ ಧ್ವಜ; ಅಧಿಕೃತ ಧ್ವಜವು ಧಾರಾವಾಡದಲ್ಲಿ ಮಾತ್ರ ತಯಾರಾಗುತ್ತದೆ. ನಮ್ಮೂರ ಬಹುತೇಕ ಫ್ಯಾನ್ಸಿ, ಅಂಗಡಿ ಮುಂಗಟ್ಟುಗಳಲ್ಲಿ ಸಿಗುವ ಧ್ವಜವು ಅನಧಿಕೃತ. ಮಂಗಳೂರಿನಲ್ಲಿ ಧ್ವಜ  ಅಧಿಕೃತವಾಗಿ ಸಿಗುವ ಸ್ಥಳ ಎರಡೇ ಎರಡು. ಕಾರ್ ಸ್ಟ್ರೀಟ್ ಹಾಗೂ ಕೆ.ಎಸ್. ರಾವ್ ರಸ್ತೆಯಲ್ಲಿರುವ ಖಾದಿ ಭಂಡಾರ.

ದೇಶದ ವಿಭಿನ್ನ ಜಾತಿ, ಮತ, ಪಂಗಡ, ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ಏಕತೆಯನ್ನು ಸಾರುವ ದಿವ್ಯ, ಭವ್ಯ, ಅಭಿಮಾನದ ಸಂಕೇತ ಮತ್ತು ಸಾಧನವಾಗಿ ರಾಷ್ಟ್ರಧ್ವಜ ನಮ್ಮ ಮುಂದಿದೆ. ಅದಕ್ಕೆ ಅಪಚಾರ ಬಾರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News