×
Ad

ನಂಬಿ, ಭಾರತದ ಈ ನಗರದಲ್ಲಿ ಜನರು ಹಾರ್ನ್ ಮಾಡುವುದೇ ಇಲ್ಲ !

Update: 2016-08-16 13:47 IST

ಐಜ್ವಾಲ್, ಆ.16: ಇತರ ಯಾವುದೇ ಚಿತ್ರಗಳಲ್ಲಿ ಕಂಡುಬರುವಂತೆ ಈ ನಗರದ ಚಿತ್ರಣ ಇಲ್ಲೂ ಗಮನ ಸೆಳೆಯುತ್ತದೆ. ಸ್ಪಷ್ಟ ಹಾಗೂ ಉಸಿರು ಬಿಗಿಹಿಡಿಯುವಂಥ ಆಕರ್ಷಕ ದೃಶ್ಯಗಳು. ಹಿನ್ನೆಲೆಯಲ್ಲಿ ಹಕ್ಕಿಗಳ ಚಿಲಿಪಿಲಿ ಗುಂಯ್‌ಗುಟ್ಟುತ್ತಿದೆ. ತಾಯಿ- ಮಗ ವಾಹನದಲ್ಲಿ ಹೊರಟಿದ್ದಾರೆ. ರಸ್ತೆಯಲ್ಲಿ ಸಂಚಾರ ದಟ್ಟಣೆ ಇದೆ, ಇತರ ಯಾವುದೇ ನಗರದಲ್ಲಿ ಕಂಡುಬರುವಂತೆ ಇಲ್ಲೂ ಟ್ರಾಫಿಕ್‌ನಿಂದ ಸಮಯ ವ್ಯರ್ಥವಾಗುತ್ತದೆ. ಆದರೆ ಮಿಜೋರಾಂನ ರಾಜಧಾನಿ ಕುರಿತಾದ ಈ ಚಿತ್ರದಲ್ಲಿ ವೈಶಿಷ್ಟ ಇದೆ. ವಿಶ್ವಾದ್ಯಂತ ಅದರಲ್ಲೂ ಮುಖ್ಯವಾಗಿ ದೇಶದ ನಗರಗಳಲ್ಲಿ ಕೇಳಿಬರುವ ವಾಹನಗಳ ಕರ್ಕಶ ಶಬ್ದ ಇಲ್ಲಿ ಮಾಯವಾಗಿದೆ!

ಒಂದು ವಾಹನದಿಂದ ಕೂಡಾ ಹಾರ್ನ್ ಕೇಳಿಸುವುದಿಲ್ಲ. ನಗರದಲ್ಲಿ ಕೇಳಿಬರುವ ಶಬ್ದಗಳು ಕಿವಿಗೆ ಹಿತ ಎನಿಸುವ ಇಂಪಾದ ಸಂಗೀತದಂತಿದೆ. ಸರಕಾರದ ಚಲನಚಿತ್ರ ವಿಭಾಗ ಈಶಾನ್ಯ ರಾಜ್ಯಗಳಲ್ಲಿ ಚಲನಚಿತ್ರವನ್ನು ಉತ್ತೇಜಿಸುವ ಉದ್ದೇಶದಿಂದ ಈ ಬಗ್ಗೆ ಕಿರುಚಿತ್ರ ನಿರ್ಮಿಸಿದೆ. ಮಿಜೋರಾಂ ಹಾಗೂ ನಾಗಾಲ್ಯಾಂಡ್‌ನ ಆರು ಮಂದಿ ಯುವಕರನ್ನು ಚಿತ್ರ ನಿರ್ಮಾಣ ಕೌಶಲ ಕಲಿಯಲು ನೆರವು ನೀಡಿದೆ. ಟ್ರಾಂಕ್ವಿಲಿಟಿ ಎನ್ನುವುದು ಇಂಥ ಹೊಸ ಪ್ರಯತ್ನದ ಸಣ್ಣ ಉದಾಹರಣೆ. ರಾಜಧಾನಿಯ ಮೂರು ಲಕ್ಷ ಮಂದಿ ನಾಗರಿಕರು ವಾಹನಗಳ ಹಾರ್ನ್‌ಗಳಿಗೆ ಸ್ವಯಂಪ್ರೇರಿತರಾಗಿ ಗುಡ್‌ಬೈ ಹೇಳಿದ ಘಟನೆ ಕುರಿತ ಸಾಕ್ಷ್ಯ ಚಿತ್ರ ಇದು.

ಸಾಮಾನ್ಯವಾಗಿ ವಾಹನಗಳ ಹಾರ್ನ್‌ಗಳ ಡೆಸಿಬೆಲ್ ಮಟ್ಟ 110 ಡಿಬಿ ಇರುತ್ತದೆ. ಆದರೆ 60-70ಕ್ಕಿಂತ ಅಧಿಕ ಡಿಬಿ ಶಬ್ದವನ್ನು ಕೇಳುವುದು ಕ್ರಮೇಣ ಶ್ರವಣ ಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆ. ತಜ್ಞರು ಹೇಳುವಂತೆ ನಗರದಲ್ಲಿ ಅತ್ಯಧಿಕ ಶಬ್ದ ಮಾಲಿನ್ಯದ ಕಾರಣದಿಂದ ನಗರವಾಸಿಗಳ ಶ್ರವಣಶಕ್ತಿ 20ಡಿಬಿ ನಷ್ಟವಾಗಿರುತ್ತದೆ.

2013ರ ವರದಿಯ ಪ್ರಕಾರ, ಮುಂಬೈ ಇಡೀ ದೇಶದಲ್ಲಿ ಅತಿಹೆಚ್ಚು ಶಬ್ದಮಾಲಿನ್ಯದ ನಗರ. ಉಳಿದಂತೆ ಲಕ್ನೋ, ಹೈದರಾಬಾದ್, ಹೊಸದಿಲ್ಲಿ ಹಾಗೂ ಚೆನ್ನೈ ನಂತರದ ಸ್ಥಾನಗಳಲ್ಲಿವೆ. ಆದರೆ ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಈ ಪ್ರಮಾಣ ಕಡಿಮೆ. ಅಧಿಕ ಶಬ್ದ ಮಾಲಿನ್ಯ ಹೃದ್ರೋಗಕ್ಕೂ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪುಟ್ಟ ರಾಜ್ಯದ ರಾಜಧಾನಿ ಶಬ್ದ ಮಾಲಿನ್ಯ ನಿಯಂತ್ರಣದಲ್ಲಿ ಇಡೀ ದೇಶಕ್ಕೇ ಮಾದರಿ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News