ಭದ್ರತಾ ಅಧಿಕಾರಿಗಳಿಂದ ಚಪ್ಪಲಿ ಹಾಕಿಸಿದ ಒಡಿಸ್ಸಾ ಸಚಿವ ! : ವಿವಾದ ತಾರಕಕ್ಕೆ
ಭುವನೇಶ್ವರ, ಆ.6: ಒಡಿಸ್ಸ ಸಣ್ಣ ಉದ್ದಿಮೆಗಳ ಸಚಿವ ಜೋಗೇಂದ್ರ ಬೆಹ್ರ ತನ್ನ ಭದ್ರತಾ ಅಧಿಕಾರಿಗಳಿಂದ ತನ್ನ ಕಾಲಿನ ಚಪ್ಪಲಿ ತೆಗೆಸಿದ ಘಟನೆ ವಿವಾದಾಸ್ಪದವಾಗಿದೆ. ಸ್ವಾತಂತ್ರ್ಯದಿನಾಚರಣೆ ಧ್ವಜಾರೋಹಣಕ್ಕಿಂತ ಸ್ವಲ್ಪ ಮೊದಲು ವೇದಿಕೆ ಹತ್ತುವಾಗ ತನ್ನ ಭದ್ರತಾ ಅಧಿಕಾರಿಯೊಬ್ಬರಿಂದ ಸಚಿವ ಚಪ್ಪಲಿ ಕಳಚಿಸಿದ್ದು ಇದನ್ನು ಪ್ರಾದೇಶಿಕ ಟಿವಿ ಚ್ಯಾನಲ್‌ಗಳು ಬಹಿರಂಗಪಡಿಸಿದ್ದವು ಎಂದು ವರದಿಯಾಗಿದೆ.
ಆದರೆ ವಿವಾದವಾದಾಗಲೂ ತಾನೊಬ್ಬ ವಿಐಪಿ ಎಂಬಂತೆ ಸಚಿವ ಪ್ರತಿಕ್ರಿಯಿಸಿದ್ದು ಜನರಲ್ಲಿ ಆಶ್ಚರ್ಯವುಂಟುಮಾಡಿದೆ ಎನ್ನಲಾಗಿದೆ. "ನಾನು ಧ್ವಜಾರೋಹಣ ಮಾಡಿದ ವ್ಯಕ್ತಿಯಲ್ಲವೇ" ಎಂದು ಘಟನೆಯ ಕುರಿತು ಸಚಿವರು ಪ್ರತಿಕ್ರಿಯಿಸಿದ್ದರು ಎಂದು ತಿಳಿದು ಬಂದಿದೆ.
ಸಚಿವರ ವರ್ತನೆಯನ್ನು ಉಲ್ಲೇಖಿಸಿ ಪ್ರತಿಪಕ್ಷಗಳು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ವಿರುದ್ಧ ಟೀಕಾಪ್ರಹಾರ ಹರಿಸಿದೆ. "ಒಬ್ಬ ಸಚಿವ ಎಲ್ಲರನ್ನು ಸಮಾನವಾಗಿ ಪರಿಗಣಿಸಬೇಕು. ನೂರಾರು ಜನಸೇರಿದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಚಿವರ ಇಂತಹ ವರ್ತನೆ ಜನರಿಗೆ ತಪ್ಪು ಸಂದೇಶ ನೀಡುತ್ತದೆ" ಎಂದು ಒಡಿಸ್ಸಾದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. ಸಚಿವರನ್ನು ವಜಾಗೊಳಿಸಬೇಕೆಂದು ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ಪ್ರತಿಕ್ರಿಯೆಗಳು ಕಾಣಿಸಿಕೊಂಡಿವೆ ಎಂದು ವರದಿ ತಿಳಿಸಿದೆ.