ನನ್ನ ಜಾಮೀನು ರದ್ದು ಮಾಡಿ, ನಾನು ಜೈಲಲ್ಲೇ ಇರುತ್ತೇನೆ ಎಂದ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ!

Update: 2016-08-17 03:24 GMT

ಹೊಸದಿಲ್ಲಿ,ಆ.17: "ನಾನು ಜೈಲಿನಲ್ಲಿದ್ದುಕೊಂಡೇ ವಿಚಾರಣೆ ಎದುರಿಸುತ್ತೇನೆ. ದಯವಿಟ್ಟು ನನ್ನ ಜಾಮೀನು ರದ್ದು ಮಾಡಿ" ಎಂಬ ವಿಚಿತ್ರ ಮನವಿಯೊಂದು ವಿಶೇಷ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ಹಲವು ಕಲ್ಲಿದ್ದಲು ಹಗರಣಗಳಲ್ಲಿ ಆರೋಪಿಯಾಗಿರುವ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್.ಸಿ.ಗುಪ್ತಾ ಇಂಥದ್ದೊಂದು ಮನವಿ ಸಲ್ಲಿಸಿದ್ದಾರೆ.

ಹಗರಣದ ವಿಚಾರಣೆ ವೇಳೆ ತೀರಾ ಭಾವಪರಶವಾಗಿದ್ದ ಗುಪ್ತಾ, ಜಾಮೀನಿನ ಮೇಲೆ ಬಿಡುಗಡೆ ಮಾಡುವ ಮುನ್ನ ಸಲ್ಲಿಸಿದ್ದ ವೈಯಕ್ತಿಕ ಬಾಂಡ್ ವಾಪಸು ಪಡೆಯುವ ಸಂಬಂಧ ಅರ್ಜಿ ಸಲ್ಲಿಸಿದರು. ಈ ಪ್ರಕರಣದ ಹಣಕಾಸು ಹೊರೆಯನ್ನು ತಡೆದುಕೊಳ್ಳಲು ನನಗೆ ಸಾಧ್ಯವಿಲ್ಲ ಎಂದು ಹೇಳಿ ತಮ್ಮ ವಕೀಲರಿಗೆ ನೀಡಿದ್ದ ಆದೇಶಪತ್ರವನ್ನು ವಾಪಸು ಪಡೆಯುವ ಇಂಗಿತ ವ್ಯಕ್ತಪಡಿಸಿದರು. ತಮಗೆ ಪರವಾದ ಯಾವ ಸಾಕ್ಷಿಯ ವಿಚಾರಣೆಯನ್ನೂ ನಡೆಸಬೇಕಿಲ್ಲ ಎಂದು ಹೇಳಿದರು.

ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು, ಈ ಮನವಿಯ ಬಗ್ಗೆ ಮರುಚಿಂತನೆ ನಡೆಸಲು ಗುಪ್ತಾಗೆ ಕಾಲಾವಕಾಶ ನೀಡಿದರು. ಈ ಮನವಿಯ ಬಗ್ಗೆ ಬುಧವಾರದ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸಿಬಿಐಗೆ ಸೂಚನೆ ನೀಡಿದರು. ಗುಪ್ತಾ ಈ ಮನವಿ ಸಲ್ಲಿಸಲು ಏನು ಕಾರಣ ಎಂಬ ಬಗ್ಗೆ ನ್ಯಾಯಾಲಯ ವಿಸ್ತತ ವಿಚಾರಣೆ ನಡೆಸಿತು. ತಮ್ಮ ಪರ ವಕೀಲರನ್ನು ನೇಮಿಸಿಕೊಳ್ಳಲೂ ಸಾಧ್ಯವಾಗದಷ್ಟು ಆರ್ಥಿಕ ಮುಗ್ಗಟ್ಟಿನ ಸ್ಥಿತಿ ಇದೆ ಎಂದು ಗುಪ್ತಾ ಹೇಳಿದರು.

ಈ ಸಂದರ್ಭದಲ್ಲಿ ನ್ಯಾಯಾಲಯ, ದಿಲ್ಲಿ ಕಾನೂನು ಸೇವಾ ವಿಭಾಗದಿಂದ ವಕೀಲರನ್ನು ನಿಯೋಜಿಸುವ ಭರವಸೆ ನೀಡಿತು. ಅಥವಾ ಇವರ ಪರವಾಗಿ ಎಮಿಕಸ್ ಕ್ಯೂರಿ ಅವರನ್ನು ನೇಮಕ ಮಾಡಬಹುದು ಎಂಬ ಅವಕಾಶ ನೀಡಿತು. ಆದರೆ ಇವೆರಡೂ ಪ್ರಸ್ತಾವಗಳನ್ನು ಗುಪ್ತಾ ತಿರಸ್ಕರಿಸಿದರು. ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News