ಗ್ರಾಮೀಣ ಸೇವೆ ಸಲ್ಲಿಸುವ ವೈದ್ಯರಿಗೆ ಸ್ನಾತಕೋತ್ತರ ಪದವಿ ದಾಖಲಾತಿಗೆ ಅಂಕ

Update: 2016-08-17 03:28 GMT

ಹೊಸದಿಲ್ಲಿ, ಆ.17: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸ್ನಾತಕೋತ್ತರ ಪದವಿ ಪ್ರವೇಶ ಪಡೆಯಲು ಪೂರಕವಾಗುವಂತೆ ಉತ್ತೇಜಕ ಅಂಕ ನೀಡುವ ಸಂಬಂಧ ಭಾರತದ ವೈದ್ಯಕೀಯ ಮಂಡಳಿ (ಎಂಸಿಐ) ಕೈಗೊಂಡಿರುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ವೈದ್ಯರ ತೀವ್ರ ಕೊರತೆ ಎದುರಿಸುತ್ತಿರುವ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಇದು ಹೊಸ ವೈದ್ಯರಿಗೆ ಸ್ಫೂರ್ತಿ ನೀಡುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಕನ್ವೀಲ್ಕರ್ ಮತ್ತು ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಗ್ರಾಮೀಣ ವೈದ್ಯಸೇವೆ ನೀಡುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯನ್ನು ಕೂಡಾ ಪರಿಗಣಿಸಬೇಕು. ಆದ್ದರಿಂದ ಎಂಸಿಐ ಈ ನೀತಿಯನ್ನು ರೂಪಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ. ವೈದ್ಯಕೀಯ ವಿಜ್ಞಾನದ ಸ್ನಾತಕೋತ್ತರ ಪ್ರವೇಶಕ್ಕೆ ಕೇವಲ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕವಷ್ಟೇ ಮಾನದಂಡವಾಗಬಾರದು ಎಂದು ಹೇಳಿದೆ.

"ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಂಸಿಐ ರೂಪಿಸಿರುವ 9ನೆ ನಿಯಮವು ಅಭ್ಯರ್ಥಿಯ ಪ್ರತಿಭೆಯ ಜತೆಗೆ ಗ್ರಾಮೀಣ ಸೇವೆಯ ಅಂಶವನ್ನು ಕೂಡಾ ಪರಿಗಣಿಸುವುದು ಕಾನೂನುಬದ್ಧವಾಗಿದೆ. ಇದು ಈ ನಿಯಮಾವಳಿಯ ನಾಲ್ಕನೆ ವಿಭಾಗಕ್ಕೆ ಅನುಗುಣವಾಗಿದ್ದು, ವಿಸ್ತ್ರತ ಸಾರ್ವಜನಿಕ ಹಿತಾಸಕ್ತಿಯಿಂದ ಇದನ್ನು ಎತ್ತಿಹಿಡಿಯಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News