×
Ad

ಸೋತವರನ್ನೂ ಪ್ರೋತ್ಸಾಹಿಸಬೇಕಾಗಿದೆ

Update: 2016-08-19 23:50 IST

ಮಾನ್ಯರೆ,

ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು, ಸಾಕ್ಷಿ ಮಲಿಕ್ ಪದಕಗಳನ್ನು ಗೆದ್ದು ದೇಶ ಸಂಭ್ರಮಿಸುವಂತೆ ಮಾಡಿದ್ದಾರೆ. ಈ ಕ್ರೀಡಾ ಸಾಧಕರನ್ನು ದೇಶವೇ ಹೊಗಳಿತು. ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು, ಬೆಳೆಸುವುದು ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿ. ಆದರೆ ಪದಕಗಳನ್ನು ಗಳಿಸಲು ವಿಫಲರಾಗುತ್ತಿದ್ದಾರೆಂದು ಆರೋಪಿಸಿ ಕೆಲವು ಭಾರತೀಯ ಕ್ರೀಡಾಪಟುಗಳನ್ನು ತೆಗಳುತ್ತಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಸ್ಪರ್ಧೆ ಅಂದ ಮೇಲೆ ಅಲ್ಲಿ ಸೋಲು, ಗೆಲುವು ಇದ್ದದ್ದೇ. ಇದು ಗೊತ್ತಿದ್ದರೂ ಪದಕ ಗೆಲ್ಲಲೇಬೇಕೆನ್ನುವುದು ಎಷ್ಟು ಸರಿ..?

ಯಾವುದೇ ವಿಭಾಗದಲ್ಲಿ ಸ್ಪರ್ಧೆ ನಡೆಯಲಿ, ಅದರಲ್ಲಿ ಕಠಿಣ ಪೈಪೋಟಿ ಇದ್ದು, ಇತರ ದೇಶದ ಗೆದ್ದವರಿಗೆ ಹೆಚ್ಚಿನ ಗುಣಮಟ್ಟದ ತರಬೇತಿ ಸಿಗುತ್ತಿರುವುದರಿಂದ ಅವರು ಗೆಲ್ಲುತ್ತಿದ್ದಾರೆ. ನಮ್ಮಲ್ಲಿ ಆ ಮಟ್ಟದ ಸೌಕರ್ಯ ಇಲ್ಲದಿರುವುದರಿಂದ ಯಶಸ್ಸುಗಳಿಸಲು ಸಾಧ್ಯವಾಗುತ್ತಿಲ್ಲ.

 ದೀಪಾ, ಬಿಂದ್ರಾ, ನಾರಂಗ್ ಹೀಗೆ ಕೆಲ ಕ್ರೀಡಾಪಟುಗಳು ಸೋತ ಬೆನ್ನಲ್ಲೇ ತೆಗಳುವ ಮಂದಿ ಜಾಸ್ತಿಯಾಗುತ್ತಿದ್ದಾರೆ. ಆದರೆ ಗೆದ್ದಾಗ ಯಾವ ರೀತಿ ಬೆನ್ನು ತಟ್ಟುತ್ತೇವೆಯೋ ಅದೇ ರೀತಿ ಸೋತಾಗ ಸಾಂತ್ವನ ಹೇಳಿ ಮುಂದೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಧೈರ್ಯ ಹೇಳುವ ಮಂದಿ ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಬಿಟ್ಟು ಇತರ ವಿಭಾಗದಲ್ಲಿ ಕ್ರೀಡಾಳುಗಳು ಸಿಗುತ್ತಿಲ್ಲ. ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಕೆಲ ಸಮಸ್ಯೆಗಳಿವೆ. ಇಷ್ಟೆಲ್ಲಾ ಇದ್ದರೂ ಈ ಸಲದ ರಿಯೋ ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಭಾಗವಹಿಸಿದ್ದರು. ಗೆಲುವು, ಸೋಲು ಮುಖ್ಯವಲ್ಲ. ಈಗಿರುವ ಕ್ರೀಡಾ ರಾಜಕೀಯದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನಾದರೂ ಪಡೆದಿದ್ದಾರೆ ಅನ್ನುವುದು ತೆಗಳುವ ಮಂದಿಗೆ ಗೊತ್ತಿರಲಿ.

Writer - -ಶಂಶೀರ್ ಬುಡೋಳಿ, ಬೆಂಗಳೂರು

contributor

Editor - -ಶಂಶೀರ್ ಬುಡೋಳಿ, ಬೆಂಗಳೂರು

contributor

Similar News