×
Ad

ಉತ್ತರಪ್ರದೇಶ: ದಲಿತ ಮಹಿಳೆಯ ಗುಂಡಿಕ್ಕಿ ಹತ್ಯೆ

Update: 2016-08-21 21:28 IST

 
ಲಕ್ನೋ, ಆ.21: ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯ ಮನೋನಾ ಗ್ರಾಮದಲ್ಲಿ ಶನಿವಾರ ಭೂವಿವಾದಕ್ಕೆ ಸಂಬಂಧಿಸಿದ ವೈಷಮ್ಯದಿಂದ ಮೇಲ್ಜಾತಿಯ ಮಹಿಳೆಯೊಬ್ಬಳು ದಲಿತ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾಳೆ.

ಘಟನೆಯ ಬಳಿಕ ಆರೋಪಿ ಮಹಿಳೆ ಹಾಗಗೂ ಆಕೆಯ ಪತಿ ತಲೆ ಮರೆಸಿಕೊಂಡಿದ್ದಾರೆ.
 ಆರೋಪಿ ಮಹಿಳೆಯ ವಿರುದ್ಧ ಕುರವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸಂಹಿತೆ ಹಾಗೂ ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯೆಂದು ಪ್ರಭಾರ ಠಾಣಾಧಿಕಾರಿ ಜಗದೀಶ್ ಚಾಂದ್ ತಿಳಿಸಿದ್ದಾರೆ. ಘಟನೆಯ ಬಳಿಕ ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.


     ದಲಿತ ಮಹಿಳೆಯ ಹತ್ಯೆಗೈದ ಆರೋಪಿ ಪೂನಂ ಥೋಮಾರ್ ಇಟಾ ಜಿಲ್ಲೆಯ ಬಾರ್‌ಹರಿ ಗ್ರಾಮದ ನಿವಾಸಿಯಾಗಿದ್ದಾಳೆ. ಆಕೆಯ ಸೋದರಿ ಹಾಗೂ ಸೋದರಳಿಯನಿಗೆ ಆಕೆಯ ಹೆತ್ತವರಿಂದ ಮನೋನಾ ಗ್ರಾಮದಲ್ಲಿ ಜಮೀನು ದೊರೆತಿತ್ತು. ಕೆಲವು ಸಮಯದ ಹಿಂದೆ ಪೂನಂಳ ಸೋದರಿ ಶಿಖಾ, ತನ್ನ ಪಾಲಿನ ಜಮೀನನ್ನು ಹತ್ಯೆಗೀಡಾದ ದಲಿತ ಮಹಿಳೆ ಸರಳಾ ದೇವಿಗೆ ಮಾರಿದ್ದಳು. ಇದರಿಂದ ಪೂನಂ ಆಸಮಾಧಾನಗೊಂಡಿದ್ದಳು.

ದಲಿತ ಮಹಿಳೆಯು ತಾನು ಖರೀದಿಸಿದ ಜಮೀನಿನಲ್ಲಿ ಮನೆಯನ್ನು ನಿರ್ಮಿಸಲು ಆರಂಭಿಸಿದ ಬಳಿಕವಂತೂ ಆಕೆ ತೀವ್ರ ಆಕ್ರೋಶಗೊಂಡಿದ್ದಳು. ಶನಿವಾರ ಮನೋನಾ ಗ್ರಾಮಕ್ಕೆ ಆಗಮಿಸಿದ ಪೂನಂ ತೋಮಾರ್, ದಲಿತ ಮಹಿಳೆ ಸರಳಾಳನ್ನು ನಾಡಪಿಸ್ತೂಲ್‌ನಿಂದ ಗುಂಡಿಕ್ಕಿ ಕೊಂದಳೆಂದು ಪೊಲೀಸರು ತಿಳಿಸಿದ್ದಾರೆ.


   ಈ ಘಟನೆಯಿಂದಾಗಿ ಈಗಾಗಲೇ ಸೂಕ್ಷ್ಮ ಸಂವೇದಿ ಪ್ರದೇಶವಾಗಿರುವ ಮೈನ್‌ಪುರಿ ಜಿಲ್ಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ತೀರಾ ಇತ್ತೀಚೆಗೆ 10 ರೂ. ಸಾಲವನ್ನು ಮರುಪಾವತಿಸಲಿಲ್ಲವೆಂಬ ಕಾರಣಕ್ಕೆ ದಲಿತ ದಂಪತಿಯನ್ನು ಮೇಲ್ಜಾತಿಯ ಅಂಗಡಿ ಮಾಲಕನೊಬ್ಬ ಕಡಿದು ಕೊಂದ ಘಟನೆ ವರದಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಮೈನ್‌ಪುರಿ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಇನ್ನೂ ಮೂವರು ದಲಿತರು, ಸವರ್ಣೀಯರಿಂದ ಹತ್ಯೆಯಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News