×
Ad

ಸರಕಾರಗಳು ಕ್ರೀಡೆಗೆ ಪ್ರೋತ್ಸಾಹ ನೀಡಲಿ

Update: 2016-08-22 23:43 IST


ಮಾನ್ಯರೆ,
ಬ್ರೆಝಿಲ್‌ನ ರಿಯೋದಲ್ಲಿ ಕಳೆದ 17 ದಿನಗಳಿಂದ ನಡೆದ ಒಲಿಂಪಿಕ್ಸ್ ಕ್ರೀಡಾ ಮಹೋತ್ಸವದಲ್ಲಿ ಭಾರತದ ಪರವಾಗಿ ಭಾಗವಹಿಸಿದ 117 ಕ್ರೀಡಾಪಟುಗಳಲ್ಲಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದು ಸಂಭ್ರಮಿಸಿದರೆ, ಬ್ಯಾಡ್ಮಿಂಟನ್ ಮಹಿಳೆಯರ ವಿಭಾಗದಲ್ಲಿ ಪಿ.ವಿ ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆ ಪಡೆದುಕೊಂಡರು.
ಆದರೆ ವಿಷಾದನೀಯ ಸಂಗತಿ ಎಂದರೆ ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀ ಹೆಚ್ಚು ಅಥ್ಲೀಟ್‌ಗಳ ತಂಡ ಕಳುಹಿಸಿದರೂ ಕೇವಲ ಎರಡು ಪದಕಗಳಿಗೆ ತೃಪ್ತಿ ಪಡಬೇಕಾಯಿತು. ಇದಕ್ಕೆ ಮೂಲ ಕಾರಣ ಭಾರತದಲ್ಲಿ ಕ್ರಿಕೆಟ್ ಆಟಗಾರರನ್ನು ಹೊರತು ಪಡಿಸಿ ಇನ್ನಿತರ ಕ್ರೀಡಾಪಟುಗಳಿಗೆ ಸರಕಾರಗಳು ಉತ್ತಮ ತರಬೇತಿ,ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡದೆ ಇರುವುದರಿಂದ ಭಾರತ 67ನೆ ಪಡೆದುಕೊಂಡು ಮುಜುಗರ ಪಡಬೇಕಾಯಿತು.
ಅಮೆರಿಕಾ,ಚೀನಾ,ಇಂಗ್ಲೆಂಡ್ ಆಸ್ಟ್ರೇಲಿಯಾ ದೇಶಗಳು ಒಲಿಂಪಿಕ್ ಪದಕ ಪಟ್ಟಿಯಲ್ಲಿ ಉತ್ತುಂಗ ಸ್ಥಾನ ಪಡೆದುಕೊಂಡಿತು. ಇವರ ಈ ಸಾಧನೆಗೆ ಕಾರಣ ಆ ದೇಶದಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳ ಕ್ರೀಡಾ ಆಸಕ್ತಿಗಳನ್ನು ಗುರುತಿಸಿ ಇವರಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ.ಆದರೆ ಭಾರತದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಮೈದಾನ, ದೈಹಿಕ ಶಿಕ್ಷಕರ ಕೊರತೆ ಇರುವುದರಿಂದ ಕ್ರೀಡೆಯ ಬಗ್ಗೆ ಮಾಹಿತಿ ಇಲ್ಲದಂತಾಗಿದೆ.
ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಎಲ್ಲಾ ರೀತಿಯ ಕ್ರೀಡೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ, ಉತ್ತಮ ಕ್ರೀಡಾ ಮೈದಾನಗಳನ್ನು ನಿರ್ಮಿಸಿ ಖಾಲಿ ಇರುವ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡು ಮಕ್ಕಳು ಹೆಚ್ಚಿನ ರೀತಿಯಲ್ಲಿ ಕ್ರೀಡೆ ಕುರಿತು ಆಸಕ್ತಿ ವಹಿಸುವಲ್ಲಿ ಪ್ರೋತ್ಸಾಹ, ಸಲಹೆ, ಮಾರ್ಗದರ್ಶನ ನೀಡಿ ಶ್ರೇಷ್ಠ ಕ್ರೀಡಾ ಪಟುಗಳಾಗಿ ಮಾಡುವಲ್ಲಿ ಶ್ರಮವಹಿಸಲಿ. ಆಗ ಭಾರತದ ಒಲಿಂಪಿಕ್ಸ್ ಪದಕಗಳ ಸಂಖ್ಯೆ ಗರಿಷ್ಠವಾಗಲು ಸಾಧ್ಯವಾಗುತ್ತದೆ.

Writer - -ಮೌಲಾಲಿ ಕೆ.ಬೋರಗಿ.ಸಿಂದಗಿ

contributor

Editor - -ಮೌಲಾಲಿ ಕೆ.ಬೋರಗಿ.ಸಿಂದಗಿ

contributor

Similar News