ಸ್ಕಾರ್ಪಿನ್ ದಾಖಲೆಗಳ ಸಿಡಿ ಆಸ್ಟ್ರೇಲಿಯ ಸರಕಾರಕ್ಕೆ ಸೋಮವಾರ ಸಲ್ಲಿಕೆ
ಹೊಸದಿಲ್ಲಿ, ಆ.27: ಭಾರತದ ನೌಕಾಪಡೆಗಾಗಿ ಫ್ರೆಂಚ್ ಕಂಪನಿಯೊಂದು ನಿರ್ಮಿಸಿಕೊಡುತ್ತಿರುವ ಅತ್ಯಾಧುನಿಕ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಗಳ ಮಾಹಿತಿ ಸೋರಿಕೆಯಾಗಿರುವುದನ್ನು ಬಹಿರಂಗಗೊಳಿಸಿದ ಮಾಹಿತಿದಾರ ಸೋಮವಾರ ಸ್ಕಾರ್ಪಿನ್ ದಾಖಲೆಗಳ್ಳುಳ್ಳ ಸಿಡಿಯನ್ನು ಆಸ್ಟ್ರೇಲಿಯ ಸರಕಾರಕ್ಕೆ ಸಲ್ಲಿಸಲಿದ್ದಾನೆ.
ಆಸ್ಟ್ರೇಲಿಯದ ವಾರ ಪತ್ರಿಕೆಯೊಂದು ಇಂದು ಈ ಸುದ್ದಿಯನ್ನು ವರದಿ ಮಾಡಿದ್ದು, ಸಹಸ್ರಾರು ಪುಟಗಳ ಸ್ಕಾರ್ಪಿನ್ ರಹಸ್ಯ ದಾಖಲೆಗಳನ್ನು ವ್ಹಿಸಲ್ ಬ್ಲೋವರ್ ವ್ಯಕ್ತಿಯು ಸಲ್ಲಿಸಲಿದ್ದಾನೆ. ಈತನ ಬಗ್ಗೆ ಆಸ್ಟ್ರೇಲಿಯ ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ಆದರೆ ಭಾರತ ಮತ್ತು ಜಲಾಂತರ್ಗಾಮಿ ನೌಕೆ ನಿರ್ಮಿಸುತ್ತಿರುವ ಫ್ರಾ ನ್ಸ್ ಗೆ ಈತನ ಬಗ್ಗೆ ಮಾಹಿತಿ ಇಲ್ಲ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದಂತೆಯೇ ಆಸ್ಟ್ರೇಲಿಯ ಸರಕಾರ ಪ್ರಸ್ತುತ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆ ನಿರ್ಮಾಣ ಮಾಡುತ್ತಿರುವ ಫ್ರಾನ್ಸ್ ಮೂಲದ ಡಿಸಿಎನ್ ಎಸ್ ಸಂಸ್ಥೆಯೊಂದಿಗೆ ಜಲಾಂತರ್ಗಾಮಿ ನಿರ್ಮಾಣಕ್ಕಾಗಿ 50 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.