ಮೆಹಬೂಬರಿಂದ ಪ್ರಧಾನಿಗೆ ಮೂರಂಶಗಳ ಕ್ರಿಯಾ ಯೋಜನೆ ಸಲ್ಲಿಕೆ
ಹೊಸದಿಲ್ಲಿ,ಆ.27: ಶನಿವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದಲ್ಲಿಯ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಅಶಾಂತಿಯಲ್ಲಿ ಕುದಿಯುತ್ತಿರುವ ಕಾಶ್ಮೀರ ಕಣಿವೆಯಲ್ಲಿ ಶಾಶ್ವತ ಶಾಂತಿಯನ್ನು ಮೂಡಿಸಲು ಮೂರಂಶಗಳ ಕ್ರಿಯಾ ಯೋಜನೆಯನ್ನು ಸಲ್ಲಿಸಿದರು. ಎಲ್ಲ ಪಾಲುದಾರರೊಂದಿಗೆ ಮಾತುಕತೆ ನಡೆಸುವುದು ಈ ಪ್ರಸ್ತಾವನೆಗಳಲ್ಲಿ ಸೇರಿದೆ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಈವರೆಗೆ 68 ಜನರು ಬಲಿಯಾಗಿದ್ದಾರೆ.
ಜುಲೈ 8ರಂದು ಅಶಾಂತಿ ಸ್ಫೋಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಮೋದಿಯವರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರು ತೀವ್ರ ಕಳವಳಗೊಂಡಿದ್ದಾರೆ ಮತ್ತು ಕಣಿವೆಯಲ್ಲಿ ಶಾಂತಿ ಮರಳುವಂತಾಗಲು ಈ ರಕ್ತಪಾತವನ್ನು ನಿಲ್ಲಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸೂಚಿಸಿದ್ದಾರೆ ಎಂದರು.
ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ತನಗೆ ನೆರವಾಗುವಂತೆ ಪ್ರತಿಭಟನಾ ಕಾರರನ್ನು ಅವರು ಈ ಸಂದರ್ಭದಲ್ಲಿ ಕೋರಿಕೊಂಡರು.
ಪಾಕಿಸ್ತಾನವನ್ನು ತೀವ್ರ ತರಾಟೆಗೆತ್ತಿಕೊಂಡ ಅವರು, ಪೊಲೀಸ್ ಠಾಣೆಗಳು ಮತ್ತು ಸೇನಾ ಶಿಬಿರಗಳ ಮೇಲೆ ದಾಳಿಗಳನ್ನು ನಡೆಸುವಂತೆ ಕಣಿವೆಯಲ್ಲಿಯ ಯುವಜನರನ್ನು ಪ್ರಚೋದಿಸುತ್ತಿರುವ ಜನರನ್ನು ಬೆಂಬಲಿಸುವುದನ್ನು ಅದು ನಿಲ್ಲಿಸಬೇಕು ಎಂದು ಹೇಳಿದರು.
ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಮುಫ್ತಿಯವರು ಮೂರಂಶಗಳ ಕ್ರಿಯಾಯೋಜನೆಯೊಂದನ್ನು ಪ್ರಧಾನಿಯವರ ಮುಂದೆ ಮಂಡಿಸಿದ್ದಾರೆ. ಸಮಕಾಲೀನ ಭೂ-ರಾಜಕೀಯ ವಾಸ್ತವಗಳ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಧಾನ ಮಾತುಕತೆಗಳಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನವನ್ನು ಸೇರಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯು ಇದರಲ್ಲಿ ಸೇರಿದೆ ಎಂದು ರಾಜ್ಯ ಸರಕಾರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಆದರೆ ಈ ಹೇಳಿಕೆಯು ಯಾವುದೇ ವಿವರಗಳನ್ನು ನೀಡಿಲ್ಲ. ಮುಂದಿನ ವಾರ ಕಣಿವೆಗೆ ಸರ್ವಪಕ್ಷ ನಿಯೋಗದ ಭೇಟಿಗೆ ವ್ಯವಸ್ಥೆ,ರಾಜ್ಯಪಾಲರ ಸಂಭಾವ್ಯ ಬದಲಾವಣೆ ಮತ್ತು ರಾಜ್ಯದಲ್ಲಿಯ ಎಲ್ಲ ಪಾಲುದಾರರೊಡನೆ ಮಾತುಕತೆ ನಡೆಸಲು ಸಂಧಾನಕಾರರೋರ್ವರ ನೇಮಕ ಇವು ಈ ಯೋಜನೆಯಲ್ಲಿ ಒಳಗೊಂಡಿವೆ ಎಂದು ಬಲ್ಲ ಮೂಲಗಳು ತಿಳಿಸಿದವು.
ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಆಗಿನ ಎನ್‌ಡಿ ಸರಕಾರವು ಆರಂಭಿಸಿದ್ದ ಉಪಕ್ರಮವನ್ನು ಪುನಃಶ್ಚೇತನಗೊಳಿಸುವಂತೆಯೂ ಮುಫ್ತಿ ಕರೆ ನೀಡಿದರು.