×
Ad

ಗ್ರಾಮೀಣ ಭಾರತೀಯರ ಪೌಷ್ಟಿಕ ಆಹಾರ ಸೇವನೆ ಪ್ರಮಾಣ ಕಡಿಮೆಯಾಗಿದೆಯೇ?

Update: 2016-08-28 00:08 IST

ಭಾರತದ ಶೇ.35ರಷ್ಟು ಗ್ರಾಮೀಣ ಪುರುಷರು ಹಾಗೂ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದು ಅವರಲ್ಲಿ ಶೇ.42ರಷ್ಟು ಮಂದಿ ಕಡಿಮೆ ದೇಹತೂಕವನ್ನು ಹೊಂದಿದ್ದಾರೆಂದು ಸಮೀಕ್ಷೆಯು ಬಹಿರಂಗಪಡಿಸಿದೆ.

 ಕಳೆದ 40 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಭೂರಹಿತರ ಪ್ರಮಾಣವು ಶೇ.30ರಿಂದ ಶೇ.40ರವರೆಗೆ ಏರಿರುವುದನ್ನು ರಾಷ್ಟ್ರೀಯ ಪೌಷ್ಟಿಕತೆ ನಿಗಾ ದಳವು ಬಹಿರಂಗಪಡಿಸಿದೆ ಹಾಗೂ ಭೂಮಾಲಕರು ಹಾಗೂ ರೈತರ ಪ್ರಮಾಣ ಕೂಡಾ ಅರ್ಧಾಂಶದಷ್ಟು ಕಡಿಮೆಯಾಗಿದೆಯೆಂದು ಅದು ಹೇಳಿದೆ.

  ಸ್ವಾತಂತ್ರಾ ನಂತರದ ಭಾರತಕ್ಕೆ 70 ವರ್ಷ ತುಂಬಿರುವ ಈ ಸಂದರ್ಭದಲ್ಲಿ ದೇಶವು ವ್ಯಾಪಕವಾಗಿ ಪ್ರಗತಿಯತ್ತ ಮುನ್ನಡೆಯುತ್ತಿ ರುವುದು ಗೋಚರವಾಗುತ್ತಿದೆ. ಆದರೆ ರಾಷ್ಟ್ರೀಯ ಪೌಷ್ಟಿಕತೆ ಕಣ್ಗಾವಲು ಬ್ಯೂರೋ (ಎನ್‌ಎನ್‌ಎಂಬಿ)ದ ಸಮೀಕ್ಷೆಯ ಪ್ರಕಾರ 83.30 ಕೋಟಿ ಭಾರತೀಯರು (ಶೇ.70) ವಾಸವಾಗಿರುವ ಗ್ರಾಮೀಣ ಭಾರತದಲ್ಲಿ ಜನರು ಆರೋಗ್ಯದಿಂದಿರಲು ಅಗತ್ಯವಿರುವುದಕ್ಕಿಂತ ಕಡಿಮೆ ಪ್ರಮಾಣದ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತಿದ್ದಾರೆ.

 1975-79ರ ಸಾಲಿಗೆ ಹೋಲಿಸಿದರೆ ಪ್ರಸ್ತುತ ಸರಾಸರಿ ಓರ್ವ ಗ್ರಾಮೀಣ ಭಾರತೀಯನು 550ಕ್ಕಿಂತಲೂ ಕಡಿಮೆ ಕ್ಯಾಲರಿಗಳನ್ನು ಹಾಗೂ 13 ಗ್ರಾಂ ಪ್ರೊಟೀನ್, 5 ಮಿ.ಗ್ರಾಂ ಕಬ್ಬಿಣಾಂಶ, 250 ಮಿ.ಗ್ರಾಂ ಕ್ಯಾಲ್ಸಿಯಂ ಹಾಗೂ 500 ಮಿ.ಗ್ರಾಂಗಿಂತಲೂ ಕಡಿಮೆ ಪ್ರಮಾಣದ ವಿಟಾಮಿನ್ ಎ ಸೇವಿಸುತ್ತಾನೆ.

3 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಿಗೆ ಪ್ರತಿದಿನ 300 ಮಿ.ಲೀ. ಹಾಲಿನ ಅಗತ್ಯವಿದೆಯಾದರೂ, ಅವರು ಸರಾಸರಿ ಕೇವಲ 80 ಮಿ.ಲೀ.ಹಾಲನ್ನು ಸೇವಿಸುತ್ತಿದ್ದಾರೆ. ಶೇ.35ರಷ್ಟು ಗ್ರಾಮೀಣ ಪುರುಷರು ಹಾಗೂ ಮಹಿಳೆಯರು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದು ಅವರಲ್ಲಿ ಶೇ.42ಮಂದಿ ಕಡಿಮೆದೇಹತೂಕವನ್ನು ಹೊಂದಿದ್ದಾರೆಂದು ಸಮೀಕ್ಷೆಯು ಬಹಿರಂಗಪಡಿಸಿದೆ.

 ಬಡತನ ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಶೋಚನೀಯ ವಾಗಿದೆಯೆಂಬುದನ್ನು ಸಾಮಾಜಿಕ ಸೇವಾಸಂಸ್ಥೆ ‘ಆಜೀವಿಕಾ ಬ್ಯೂರೋ’ 2014ರಲ್ಲಿ ದಕ್ಷಿಣ ರಾಜಸ್ಥಾನದ ನಾಲ್ಕು ಪಂಚಾಯತ್‌ಗಳಲ್ಲಿ ನಡೆಸಿದ ಸಮೀಕ್ಷೆಯೊಂದು ಸಾಬೀತುಪಡಿಸಿದೆ.

 ಸಮೀಕ್ಷೆಯಲ್ಲಿ ಪಾಲ್ಗೊಂಡ 500 ಮಂದಿ ತಾಯಂದಿರ ಪೈಕಿ, ಅರ್ಧದಷ್ಟು ಮಂದಿ ಸಮೀಕ್ಷೆ ನಡೆದ ಹಿಂದಿನ ದಿನ ಬೇಳೆಕಾಳುಗಳನ್ನು ಸೇವಿಸಿರಲಿಲ್ಲ ಹಾಗೂ ಅವರಲ್ಲಿ ಪ್ರತೀ ಮೂವರಲ್ಲೊಬ್ಬರು ತರಕಾರಿ ಸೇವಿಸಿರಲಿಲ್ಲ ಮತ್ತು ಹೆಚ್ಚುಕಮ್ಮಿ ಯಾರು ಕೂಡಾ ಹಣ್ಣು, ಮೊಟ್ಟೆ ಅಥವಾ ಮಾಂಸವನ್ನು ತಿಂದಿರಲಿಲ್ಲ. ಅಂದರೆ ಈ ಪ್ರದೇಶಗಳಲ್ಲಿನ ಅರ್ಧಾಂಶದಷ್ಟು ತಾಯಂದಿರು ಹಾಗೂ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆಂದಾಯಿತು.

ಭಾರತದ ಭವಿಷ್ಯಕ್ಕೆ ಸವಾಲಾಗಿರುವ ಹಸಿವು

 ಈ ಅಂಕಿಅಂಶಗಳು, ದೇಶದ ಆರ್ಥಿಕ ಬೆಳವಣಿಗಾಗಿ ರೂಪಿಸಲಾದ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಕಾರ್ಯಕ್ರಮಗಳ ಮೇಲೆ ಪರಿಣಾಮವುಂಟು ಮಾಡಲಿದೆ.

 ‘‘ಅಪೌಷ್ಟಿಕತೆಯಿಂದ ಶಿಶುಗಳು ಅನಾರೋಗ್ಯಕ್ಕೆ ತುತ್ತಾಗುವುದು ಅಥವಾ ಸಾವಿಗೀಡಾಗುವುದರಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವುಂಟಾಗುತ್ತದೆ. ಇದರ ಜೊತೆಗೆ, ದೇಶದ ಉತ್ಪಾದಕತೆಯ ಮೇಲೂ ಅಪೌಷ್ಟಿಕತೆಯು ಗಣನೀಯವಾದ ಪರಿಣಾಮ ಬೀರುತ್ತದೆ. ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಹಣ ಹೂಡಿಕೆಯಲ್ಲಿ ಉಂಟಾಗುವ ವೈಫಲ್ಯವು ಆರ್ಥಿಕ ಬೆಳವಣಿಗೆಯ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ’’ ಎಂದು 2015ರ ವಿಶ್ವಬ್ಯಾಂಕ್ ವರದಿ ತಿಳಿಸಿದೆ.

    ಅಧಿಕ ಆರ್ಥಿಕ ಬೆಳವಣಿಗೆಯ ಹೊರತಾಗಿಯೂ, ಸಬ್ -ಸಹಾರ ಆಫ್ರಿಕಾ ಪ್ರಾಂತಕ್ಕೆ ಹೋಲಿಸಿದರೆ ದಕ್ಷಿಣ ಏಶ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣವು ಎರಡು ಪಟ್ಟು ಹೆಚ್ಚಿದೆಯೆಂದು ವಿ.ರಾಮಲಿಂಗಸ್ವಾಮಿ ಹಾಗೂ ಅರ್ಬನ್ ಜಾನ್ಸನ್ ಅವರು 1997ರಲ್ಲಿ ವಿಚಾರಸಂಕಿರಣವೊಂದರಲ್ಲಿ ಮಂಡಿಸಿದ ಱಚ್ಝ್ಞ್ಠಠ್ಟಿಜಿಠಿಜಿಟ್ಞ: ಅ್ಞ ಅಜಿಚ್ಞ ಉ್ಞಜಿಜಞೞ(ಅಪೌಷ್ಟಿಕತೆ: ದಕ್ಷಿಣ ಏಶ್ಯದ ಕಳಂಕ)ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ತಿಳಿಸಿದ್ದರು. ದಕ್ಷಿಣ ಏಶ್ಯದ ರಾಷ್ಟ್ರಗಳಲ್ಲಿ ಮಹಿಳೆಯರ ಸ್ಥಿತಿಗತಿ ತೀರಾ ಕೆಳಮಟ್ಟದಲ್ಲಿರುವ ಬಗ್ಗೆಯೂ ಪ್ರಬಂಧ ಗಮನಸೆಳೆದಿತ್ತು. ಆದರೆ ಎರಡು ದಶಕಗಳ ಬಳಿಕವೂ ಗ್ರಾಮೀಣ ಭಾರತೀಯರು, ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ವಂಚಿತರಾಗಿದ್ದಾರೆಂಬುದು ವಾಸ್ತವ.

 1990ರ ದಶಕದ ಆರಂಭದಿಂದ ಭಾರತದ ಆರ್ಥಿಕತೆಯು ಸ್ಥಿರವಾಗಿ ಬೆಳೆಯುತ್ತಿದೆ. 2008ರಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಆರ್ಥಿಕ ಹಿಂಜರಿತವು ಜಗತ್ತಿನ ಬಹುತೇಕ ದೇಶಗಳ ಮೇಲೆ ದುಷ್ಪರಿಣಾಮವನ್ನು ಬೀರಿತ್ತಾದರೂ, ಭಾರತವು ಪಾರಾಗಿತ್ತು. ಆದರೆ ಈ ಅವಧಿಯಲ್ಲಿ ಗ್ರಾಮೀಣ ಭಾರತದ ಹೆಚ್ಚಿನ ಸಂಖ್ಯೆಯ ಜನರ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣವು ಕಡಿಮೆಯಾಗಿತ್ತೆಂಬ ವಿಷಯವು ಹೆಚ್ಚಿನವರಿಗೆ ತಿಳಿದಿರಲಾರದು.

         ದೇಶಾದ್ಯಂತದ 10 ರಾಜ್ಯಗಳ ಗ್ರಾಮೀಣ ಪ್ರದೇಶಗಳ ಜನರ ಪೌಷ್ಟಿಕತೆಯ ಕುರಿತಾದ ಸ್ಥಿತಿಗತಿಯ ಬಗ್ಗೆ ನಿಗಾವಹಿಸಲು ರಾಷ್ಟ್ರೀಯ ಪೌಷ್ಟಿಕತೆ ಕಣ್ಗಾವಲು ಬ್ಯೂರೋವನ್ನು ಸ್ಥಾಪಿಸಲಾಗಿತ್ತು. ಸಂಸ್ಥೆಯು ಸುಮಾರು ಮೂರು ಅವಧಿಗಳಲ್ಲಿ, 1975-79; 1996-97 ಹಾಗೂ 2011-12ರಲ್ಲಿ ಈ ಹತ್ತು ರಾಜ್ಯಗಳ ಗ್ರಾಮೀಣ ಪ್ರದೇಶಗಳ ಜನತೆಯ ಪೌಷ್ಟಿಕತೆ ಬಗ್ಗೆ ಸಮೀಕ್ಷೆಯನ್ನು ನಡೆಸಿತ್ತು. ಕಳೆದ ನಾಲ್ಕು ದಶಕಗಳಲ್ಲಿ ಗ್ರಾಮೀಣ ಭಾರತಾದ್ಯಂತದ ಜನತೆಯ ಆಹಾರ ಸೇವನೆಯ ಬಗ್ಗೆ ತಾತ್ಕಾಲಿಕವಾದ ಮಾಹಿತಿಯನ್ನು ಈ ಸಮೀಕ್ಷೆಗಳು ನಮಗೆ ಒದಗಿಸುತ್ತವೆ.

ಇಷ್ಟು ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆಯಾಗಿದ್ದರೂ,ಜನತೆಯ ಊಟದ ತಟ್ಟೆಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರವಿರಬೇಕಿತ್ತು.

ಅದರ ಬದಲು, ಕಳೆದ ನಾಲ್ಕು ದಶಕಗಳಲ್ಲಿ ಎಲ್ಲ ಪೋಷಕಾಂಶಗಳ ಸೇವನೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಯಾಕೆ ಹೀಗಾಗುತ್ತಿದೆ?.

ಭೂರಹಿತರು, ಬೆಲೆಯೇರಿಕೆ ಹಾಗೂ ಹಸಿವು

    ಕಳೆದ 40 ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಭೂರಹಿತರ ಪ್ರಮಾಣವು ಶೇ.30ರಿಂದ ಶೇ.40ರವರೆಗೆ ಏರಿರುವುದನ್ನು ರಾಷ್ಟ್ರೀಯ ಪೌಷ್ಟಿಕತೆ ನಿಗಾ ದಳವು ಬಹಿರಂಗಪಡಿಸಿದೆ ಹಾಗೂ ಭೂಮಾಲಕರು ಹಾಗೂ ರೈತರ ಪ್ರಮಾಣ ಕೂಡಾ ಅರ್ಧಾಂಶದಷ್ಟು ಕಡಿಮೆಯಾಗಿದೆಯೆಂದು ಅದು ಹೇಳಿದೆ. ಈ ಮಧ್ಯೆ ಭಾರತದಲ್ಲಿ ಆಹಾರ ಹಣದುಬ್ಬರವು ಒಟ್ಟಾರೆ ಹಣದುಬ್ಬರಕ್ಕಿಂತ ತ್ವರಿತದರದಲ್ಲಿ ಹೆಚ್ಚಳವನ್ನು ಕಂಡಿದೆ (ಒಟ್ಟು ಹಣದುಬ್ಬರ ಶೇ.7ರಷ್ಟಿದ್ದರೆ, ಆಹಾರ ಹಣದುಬ್ಬರ ಶೇ. 10ರಷ್ಟಿದೆ).

 ಹೀಗೆ ಒಟ್ಟಾರೆ ಆಹಾರ ಹಣದುಬ್ಬರವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಧಾನ್ಯಗಳು, ಕೊಬ್ಬಿನಾಂಶದ ಪದಾರ್ಥಗಳು ಹಾಗೂ ತರಕಾರಿಗಳ ದರಗಳು ಬೇಳೆಕಾಳುಗಳ ಬೆಲೆಗಿಂತ ತ್ವರಿತವಾಗಿ ಏರಿಕೆಯಾಗಿದ್ದವು. ಇದರ ಪರಿಣಾಮ ಈ ಆಹಾರವನ್ನು ಕಡಿಮೆ ಜನರು ಖರೀದಿಸುವಂತಾಯಿತು. ಭಾರತೀಯರ ಪೌಷ್ಟಿಕ ಆಹಾರ ಸೇವನೆಯ ಪ್ರಮಾಣದಲ್ಲಿ ಕುಸಿತವುಂಟಾಗಿದ್ದರೂ, ಕಳೆದ ಕೆಲವು ವರ್ಷಳಿಂದ ಅವರ ಅಪೌಷ್ಟಿಕತೆಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಆದರೂ ಜಾಗತಿಕ ಮಟ್ಟದಲ್ಲಿ ಅದರ ಅಪೌಷ್ಟಿಕತೆಯ ಪ್ರಮಾಣವು ಗರಿಷ್ಠ ಮಟ್ಟದಲ್ಲಿದೆಯೆಂದು ‘ಇಂಡಿಯಾಸ್ಪೆಂಡ್’ 2015ರ ಜುಲೈನಲ್ಲಿ ವರದಿ ಮಾಡಿತ್ತು. ಅಪೌಷ್ಟಿಕತೆಯನ್ನು ಕಡಿಮೆಗೊಳಿಸುವಲ್ಲಿ ಭಾರತವು ಯಶಸ್ವಿಯಾಗಿದೆ. ಆದರೆ ಜಾಗತಿಕ ಮಟ್ಟಕ್ಕೆ ಹೋಲಿಸುವುದಾದರೆ ಅದರ ಅಪೌಷ್ಟಿಕತೆಯ ಪ್ರಮಾಣವು, ಬ್ರೆಝಿಲ್‌ಗಿಂತ 13 ಪಟ್ಟು, ಚೀನಾಕ್ಕಿಂತ 9 ಪಟ್ಟು ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಮೂರು ಪಟ್ಟು ಅಧಿಕವಾಗಿದೆಯೆಂದು ಅದು ಹೇಳಿದೆ.

   ಸ್ವಾತಂತ್ರಾನಂತರದ 69 ವರ್ಷಗಳ ಬಳಿಕವೂ ಭಾರತವು ತನ್ನ ಜನತೆಯ ಹಸಿವಿನ ಮಟ್ಟವನ್ನು ಗುರುತಿಸಲು ಯಾವುದೇ ಕ್ರಿಯಾ ಯೋಜನೆಯನ್ನು ರೂಪಿಸಿಲ್ಲ. ಭಾರತದ ಹತ್ತು ರಾಜ್ಯಗಳ ಜನತೆಯ ಪೌಷ್ಟಿಕತೆಯ ಮಟ್ಟ ಹಾಗೂ ಆಹಾರಸೇವನೆಯ ಪ್ರಮಾಣದ ಬಗ್ಗೆ ವಿಸ್ತೃತವಾದ ದತ್ತಾಂಶಗಳನ್ನು ಒದಗಿಸುವ ಏಕೈಕ ಮೂಲವಾಗಿದ್ದ ರಾಷ್ಟ್ರೀಯ ಪೌಷ್ಟಿಕತೆ ಕಣ್ಗಾವಲು ಬ್ಯೂರೋ (ಎನ್‌ಎನ್‌ಎಂಬಿ)ವನ್ನು 2015ರಲ್ಲಿ ಮುಚ್ಚಲಾಗಿದೆ.

ಈ ಸಂಸ್ಥೆಯ ಮುಚ್ಚುಗಡೆಯಿಂದಾಗಿ ನಾವು ತಿಳಿಯಬೇಕಾಗಿದ್ದ ಸಂಗತಿಗಳು ಇನ್ನು ಮುಂದೆ ಬಹಿರಂಗಗೊಳ್ಳಲಾರವು. ಎಂಬುದಂತೂ ಖಚಿತವಾದಂತಾಗಿದೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News