ತಂದೆಯ ಸಾವು: ಸರಕಾರಿ ಪರಿಹಾರಕ್ಕಾಗಿ ಲಂಚ ನೀಡಲು ಭಿಕ್ಷೆ ಎತ್ತುವ ಬಾಲಕ!
ಚೆನ್ನೈ,ಆಗಸ್ಟ್ 28: ತಂದೆ ಸಾವಿನ ನಷ್ಟ ಪರಿಹಾರ ಲಭಿಸುವಂತಾಗಲು ಅಧಿಕಾರಿಗೆ ಲಂಚ ನೀಡುವ ಹಣಕ್ಕಾಗಿ ಹದಿನೈದು ವರ್ಷದ ಬಾಲಕನೊಬ್ಬ ಸಾರ್ವಜನಿಕವಾಗಿ ಭಿಕ್ಷೆ ಬೇಡಲು ಮುಂದಾದ ಘಟನೆಯೊಂದು ತಮಿಳ್ನಾಡಿನ ವಿಲ್ಲು ಪುರಂ ಜಿಲ್ಲೆಯ ಕುನ್ನತ್ತೂರ್ ಗ್ರಾಮದಿಂದ ವರದಿಯಾಗಿದೆ. ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ಪಡೆದ ಸಾಲವನ್ನು ಕಳೆದ ಒಂದೂವರೆ ವರ್ಷದಿಂದ ಪಾವತಿಸಲು ಸಾಧ್ಯವಾಗದೆ ಅಂತಿಮವಾಗಿ ಈ ಬಾಲಕ ಬೀದಿಬದಿ ಕುಳಿತು ನೆರವಾಗಿ ಎಂದು ಸಾರ್ವಜನಿಕರಲ್ಲಿ ವಿನಂತಿಸ ತೊಡಗಿದ್ದಾನೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಬಾಲಕನ ತಂದೆ ಕೊಲಾಂಚಿ(45) ಎಂಬವರು ನಿಧನರಾಗಿದ್ದರು. ರೈತರಿಗೆ ಸಿಗುವ ಸಾಮಾಜಿಕ ಸುರಕ್ಷಾ ಯೋಜನೆ ಪ್ರಕಾರ ರಾಜ್ಯಸರಕಾರ 12,500 ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ಪುತ್ರ ಅಜಿತ್ ಅಧಿಕಾರಿಗಳನ್ನು ಭೇಟಿಯಾದಾಗ ಅವರು ಮೂರುಸಾವಿರರೂಪಾಯಿ ಲಂಚಕೇಳಿದ್ದರು.
ತಂದೆ ನಿಧನರಾಗಿ ಒಂದೂವರೆ ವರ್ಷ ಕಳೆದರೂ ಪರಿಹಾರದ ಹಣ ಸಿಗದಿದ್ದುದರಿಂದ ಲಂಚಕ್ಕಾಗಿ ಹಣಹೊಂದಿಸುವ ಅನಿವಾರ್ಯತೆ ಅವನ ಮುಂದಿತ್ತು. ಹಣ ಸಂಗ್ರಹಿಸಲು ಬ್ಯಾನರ್‌ನೊಂದಿಗೆ ಬೀದಿಗಿಳಿದಿದ್ದಾನೆ. ಅಪ್ಪನ ಅಂತ್ಯಸಂಸ್ಕಾರಕ್ಕೆ ಪಡೆದ ಸಾಲವನ್ನು ಮರುಪಾವತಿ ಮಾಡುವ ಆರ್ಥಿಕ ಸ್ಥಿತಿ ತನಗಿಲ್ಲ ಸರಕಾರದ ಪರಿಹಾರ ಮೊತ್ತು 12,500ರೂಪಾಯಿ ಲಭಿಸಲು ವಿಲೇಜ್ ಆಫೀಸರ್ 3000ರೂಪಾಯಿ ಲಂಚ ಕೇಳಿದ್ದಾರೆಂದೂ ಬ್ಯಾನರ್‌ನಲ್ಲಿ ಬಾಲಕ ಬರೆದಿದ್ದಾನೆ.
ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ಅಧಿಕಾರಿಗಳು ವಿಲೇಜ್ ಆಫೀಸರ್ ವಿರುದ್ಧ ತನಿಖೆಗೆ ಆದೇಶಹೊರಡಿಸಿದ್ದಾರೆ. ವಿಲೇಜ್ ಆಫೀಸರ್ ಸುಬ್ರಮಣ್ಯರನ್ನು ತಾತ್ಕಾಲಿಕ ವರ್ಗಾವಣೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.