ಗರ್ಭಿಣಿ ಮಗಳನ್ನು ಸೈಕಲ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದ ತಂದೆ.. !
ಭೂಪಾಲ್, ಆ.29: ‘ಜನನಿ ಎಕ್ಸ್‌ಪ್ರೆಸ್’ನಲ್ಲಿ ತುಂಬು ಗರ್ಭಿಣಿ ಮಗಳನ್ನು ಕರೆದೊಯ್ಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮನನೊಂದ ತಂದೆಯೊಬ್ಬರು ತನ್ನ ಸೈಕಲ್‌ನಲ್ಲಿ ಕುಳ್ಳಿರಿಸಿಕೊಂಡು ಆರು ಕಿ.ಮೀ. ದೂರದ ಆಸ್ಪತ್ರೆಯ ಹಾದಿ ಹಿಡಿದ ಘಟನೆ ಬುಂದೆಲ್‌ಖಂಡ್‌ನಲ್ಲಿ ನಡೆದಿದೆ.
ಚಿತ್ತಾರಪುರ ಜಿಲ್ಲೆಯ ಶಾಹ್‌ಪುರ್ ಗ್ರಾಮದ ಬಕ್ಸವಾಹ್ ಎಂಬಲ್ಲಿನ ನಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ನನ್ಹೆಭಾಯ್ ಎಂಬವರೇ ಗರ್ಭಿಣಿ ಮಗಳನ್ನು ಸೈಕಲ್‌ನಲ್ಲಿ ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದ ತಂದೆ.
ರವಿವಾರ ಬೆಳಗ್ಗೆ ನನ್ಹೆಭಾಯ್ ಮಗಳು ಗರ್ಭಿಣಿ ಪಾರ್ವತಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರು ಮಗಳನ್ನು ಕರೆದೊಯ್ಯಲು ಸಹಾಯಕ್ಕಾಗಿ ‘ಜನನಿ ಎಕ್ಸ್‌ಪ್ರೆಸ್’ಗೆ ಕರೆ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಇರುವ ತುರ್ತು ಸಾರಿಗೆ ಸೌಲಭ್ಯ ಜನನಿ ಎಕ್ಸ್‌ಪ್ರೆಸ್‌ನಿಂದ ಅವರಿಗೆ ಸಹಾಯ ದೊರೆಯಲಿಲ್ಲ. ಜನನಿ ಎಕ್ಸ್‌ಪ್ರೆಸ್‌ನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಗುತ್ತಿಗೆದಾರ ನನ್ಹೆಭಾಯ್‌ಗೆ ನೀಡಿದರು. ಆದರೆ ನನ್ಹೆ ಭಾಯ್ ಕೈ ಕಟ್ಟಿ ಕೂರಲಿಲ್ಲ. ಮಗಳನ್ನು ಸೈಕಲಿನಲ್ಲಿ ಕುಳ್ಳಿರಿಸಿ ಸೈಕಲ್ ತುಳಿಯುತ್ತಲೇ 6 ಕಿ.ಮಿ. ದೂರದ ಆಸ್ಪತ್ರೆ ತಲುಪಿದರು. ಆಸ್ಪತ್ರೆಯಲ್ಲಿ ಮಗಳು ಪಾರ್ವತಿ ಗಂಡು ಮಗುವಿಗೆ ಜನ್ಮ ನೀಡಿದಳು.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಡಾ.ವಿ.ಕೆ. ಗುಪ್ತಾ ಅವರು ಜಿಲ್ಲೆಯಲ್ಲಿ 15 ಆ್ಯಂಬುಲೆನ್ಸ್ ಮತ್ತು 19 ಜನನಿ ಎಕ್ಸ್‌ಪ್ರೆಸ್ ವಾಹನಗಳ ಸೌಲಭ್ಯ ಇದೆ. ಆದರೆ ನನ್ಹೆಭಾಯ್ ಅವರು ಜನನಿ ಎಕ್ಸ್‌ಪ್ರೆಸ್ ಕೇಂದಕ್ಕೆ ಕರೆ ಮಾಡಿರುವ ದಾಖಲೆಯಿಲ್ಲ ಎಂದು ಹೇಳಿದ್ದಾರೆ.
ಅಮಾನವೀಯ ಘಟನೆಗಳಿಗೆ ಕೊನೆಯಿಲ್ಲ. ಒಡಿಶಾದ ಕಲಹಂಡಿಯಲ್ಲಿ ಕ್ಷಯ ರೋಗದಿಂದ ಸಾವಿಗೀಡಾದ ಮಹಿಳೆಯ ಶವವನ್ನು ಸಾಗಿಸಲು ಆಸ್ಪತ್ರೆಯ ಅಧಿಕಾರಿಗಳು ವಾಹನ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯ ಪತಿ ಹೆಣವನ್ನು ತಲೆಯಲ್ಲಿ ಹೊತ್ತುಕೊಂಡ ಘಟನೆ ಮತ್ತು ಮಧ್ಯಪ್ರದೇಶದ ದಾಮೋಹ್‌ನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತಪಟ್ಟಾಗ,ಶವವನ್ನು ಹೊರಕ್ಕೆ ಎಸೆದು ಆಕೆಯ ಪತಿ ಹಾಗೂ ಹಸುಗೂಸನ್ನು ಬಸ್‌ನಿಂದ ಹೊರದಬ್ಬಿದ ಘಟನೆಯ ಬಳಿಕ ಇದೀಗ ಇನ್ನೊಂದು ಅಂತದ್ದೇ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.