ಅಗ್ರಾಳ ಪುರಂದರ ರೈಯವರ ವಿಚಿತ್ರ ಸತ್ಯ ಅನುಭವಗಳು

Update: 2016-08-30 17:40 GMT

ನಾನು ಸ್ವಲ್ಪ ಸಮಯ ಹಳ್ಳಿಯ ಊರಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ್ದೆ. ನನ್ನ ಅಧ್ಯಾಪನದ ದಿನಗಳಲ್ಲಿ ವಿದ್ಯಾರ್ಥಿಗಳ ಮನೋಭಾವಗಳನ್ನು ತಿಳಿದುಕೊಳ್ಳುವ ಅರ್ಥ ಮಾಡಿಕೊಳ್ಳುವ ಅವಕಾಶ ನನಗೆ ಸಿಗುತ್ತಿತ್ತು. ತರಗತಿಯಲ್ಲಿ ಮಕ್ಕಳು ಅಧ್ಯಾಪಕರನ್ನು ಹೇಗೆ ಮತ್ತು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಎನ್ನುವುದಕ್ಕೆ ಒಂದು ಘಟನೆ ಹೀಗಿದೆ.

ನಾನು ಸಾಮಾನ್ಯವಾಗಿ ಶಾಲೆಗೆ ಹೋಗುತ್ತಿದ್ದಾಗ ಮಳೆ, ಚಳಿಗಾಲದಲ್ಲಿ ಅಂಗಿಯ ಮೇಲೆ ಒಂದು ಶ್ವೆಟ್ಟರ್ ಹಾಕಿಕೊಳ್ಳುತ್ತಿದ್ದೆ. ಇದನ್ನು ಗಮನಿಸುತ್ತಿದ್ದ ಕೆಲವು ವಿದ್ಯಾರ್ಥಿಗಳು ತಾವು ಕೂಡಾ ತಮ್ಮ ತಮ್ಮ ಅಂಗಿಗಳ ಮೇಲೆ ಬನಿಯನ್ ಹಾಕಿಕೊಂಡು ಬರಲು ಪ್ರಾರಂಭಿಸಿದರು. ಮಕ್ಕಳ ಇಂತಹ ಸಹಜವಾದ ಸವಿಕಲ್ಪ ಅನುಕರಣೆ ಮತ್ತು ನಿರ್ವಿಕಲ್ಪ ಅನುಕರಣೆಯ ಬಗೆಗೆ ನನಗೆ ಅವರ ಮೇಲೆ ಮುನಿಸು ತಾಳುವ ಪ್ರಮೇಯವೇ ಇರಲಿಲ್ಲ.
ಇನ್ನೊಂದು ಇಂತಹದ್ದೇ ಘಟನೆ ನಡೆದಿತ್ತು. ಈ ಎರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಮೈಸೂರಿನ ವಯಸ್ಕರ ಶಿಕ್ಷಣ ಸಮಿತಿ ಪ್ರಕಟಿಸುತ್ತಿದ್ದ ‘ವಿದ್ಯಾದಾಯಿನಿ’ ಪತ್ರಿಕೆಯಲ್ಲಿ ಈ ಕುರಿತು ಎರಡು ಲೇಖನಗಳನ್ನು ಬರೆದಿದ್ದೆ. ಆ ಪತ್ರಿಕೆ ಎಲ್ಲರಿಗೂ ಬೇಕಾದುದಲ್ಲವಾದರೂ ಶಾಲೆಗಳಿಗೆ ಮತ್ತು ಶಾಲಾ ಅಧ್ಯಾಪಕರಿಗೆ ಬೇಕಾಗಿತ್ತು. ಅದರಲ್ಲೂ ಆಸಕ್ತ ಶಾಲೆಗಳವರು ಮಾತ್ರ ಆ ಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದರು.
* ನಮ್ಮ ಒಕ್ಕಲಿನಲ್ಲಿ ಸೇಸು ನಾಯ್ಕೆದಿ ಎಂಬವಳಿದ್ದಳು. ಅವಳ ನಾಲಗೆಯ ಬುಡದ ಮೇಲ್ಭಾಗದಲ್ಲಿ ಪಾರಿಜಾತ ಹೂವಿನಷ್ಟು ಗಾತ್ರದಲ್ಲಿ ಒಂದು ದುರ್ಮಾಂಸ ಗಡ್ಡೆ ಏನೋ ಬೆಳೆದಿತ್ತು. ಅದಕ್ಕೆ ಆಕೆಯ ಚಿಕಿತ್ಸೆಯೇನು ಗೊತ್ತೇ ? ನೀವು ಹೇಳಿದರೆ ಖಂಡಿತ ನಂಬಲಿಕ್ಕಿಲ್ಲ. ಪೈರು ಕೊಯ್ಯುವ ಪರು ಕತ್ತಿಯಲ್ಲಿ ಆಕೆಯೇ ಆ ಗಡ್ಡೆಯನ್ನು ಬುಡದಿಂದ ಕತ್ತರಿಸಿ ಕಸಿ ಚಿಕಿತ್ಸೆ ಮಾಡಿಕೊಂಡಳು. ನಾವು ಈಗ ಹೇಳುವ ಯಾವುದೇ ಸೆಪ್ಟಿಕ್ (ನಂಜು) ಅವಳಿಗೆ ಆಗ ಆಗಿರಲಿಲ್ಲ. ಕೆಲವು ದಿವಸಗಳಲ್ಲಿ ಆಕೆಯ ನಾಲಗೆಯ ಗಾಯ ವಾಸಿಯಾಗಿತ್ತು.

* ಜೇನುತುಪ್ಪ ಸಿಹಿ ಎನ್ನುತ್ತಾರೆ. ಸಿಹಿಯೇ ಇರಬೇಕಾಗಿಲ್ಲ. ಜೇನಿನಲ್ಲಿ ವಿವಿಧ ರುಚಿಯ ಜೇನಿದೆ. ಜೇನು ಸಂಗ್ರಹಿಸುವ ಕೀಟಗಳು ಯಾವ ಪರಿಸರದಲ್ಲಿರುತ್ತವೆ, ಎಂತಹ ಹೂವುಗಳನ್ನು ಸಂಪರ್ಕಿಸುತ್ತವೆ ಎನ್ನುವುದರ ಮೇಲೆ ಜೇನಿನ ರುಚಿಯ ಗುಣವಿರುತ್ತದೆ. ಕಾಡುಗುಡ್ಡಗಳಲ್ಲಿ ಸಾವಿರಾರು ಬಗೆಯ ಹೂಗಳು ಅರಳುತ್ತವೆ. ಬೇರೆ ಬೇರೆ ಹೂಗಳ ಮಧು ಬೇರೆ ಬೇರೆ ಒಗರು ರುಚಿಗಳಿಂದ ಕೂಡಿರುವುದು ಸಹಜ ನನ್ನ ಹಿರಿಯಕ್ಕನನ್ನು ಕೆಯ್ಯೂರಿನ ಮಾಡಾವಿಗೆ ಮದುವೆ ಮಾಡಿಕೊಟ್ಟಿದ್ದರು. ದಟ್ಟಕಾಡುಗಳ ಪ್ರದೇಶವದು. ನಾನು ಅಲ್ಲಿದ್ದಾಗ ಒಮ್ಮೆ ಮರವೊಂದರಲ್ಲಿ ಒಂದು ಜೇನುತೊಟ್ಟಿ ಕಂಡೆ. ಅದನ್ನು ತೆಗೆದು ಜೇನು ಸವಿಯಬೇಕೆನಿಸಿತು. ಹಾಗೆಯೇ ತೆಗೆಸಿ ಸವಿದು ರುಚಿ ನೋಡಿಯೂ ಆಯಿತು. ಆದರೆ ಆ ಜೇನು ಕಹಿ ಎಂದರೆ ಕಹಿಯಾಗಿತ್ತು. ಕಾರಣ ಕೆಯ್ಯೂರಿನ ಕಾಡಿನಲ್ಲಿ ವಿಶೇಷವಾಗಿ ಕಾಸರಕನ ಮರಗಳೇ ಜಾಸ್ತಿ. ಜೇನು ಕೀಟಗಳಿಗೆ ಸಿಗುವುದು ಕಾಸರಕನ ಮರಗಳ ಹೂವಿನ ಮಧುವಲ್ಲವೇ?
 * ನಮ್ಮೂರಿನ ಒಬ್ಬರು ಕಾಡಿಗೆ ಮೃಗಬೇಟೆಗೆ ಹೋದಾಗ ನಡೆದ ಒಂದು ಘಟನೆ ಕೇಳಿ. ಬೇಟೆಗೆ ಹೋದವನಿಗೆ ಕಾಡುಹಂದಿಯಿದ್ದ ಸುಳಿವು ಸಿಕ್ಕಿತ್ತು. ಅಂತಹ ಹಂದಿಗೆ ‘ಬರಿಂಕ’ ಎನ್ನುತ್ತಾರೆ.

ಅದಕ್ಕೆ ತೀರ ಚೂಪಾದ ಮತ್ತು ಹರಿತವಾದ ದಾಡೆಯಿರುತ್ತಿತ್ತು. ಬೇಟೆಯ ಸೋವು ತಿಳಿದ ಆ ಬರಿಂಕ ಎದ್ದು ನಾಗಾಲೋಟಕಿತ್ತಿತು. ದುರದೃಷ್ಟಕ್ಕೆ ಅದರ ಇದಿರಿಗೆ ದಾರಿಯಲ್ಲಿ ಅಡ್ಡವಾಗಿ ಕುಕ್ಕುರುಗಾಲಲ್ಲಿ ಕುಳಿತಿದ್ದ ನಮ್ಮ ಒಕ್ಕಲಿನವನ ತೊಡೆಗಳ ಸಂಯಿಂದಲೇ ಅದು ಹಾದು ಹೋಯಿತು. ಆಗಳಿಗೆಯಲ್ಲಿ ಆತನ ಮರ್ಮಾಂಗದ ಬೀಜಗಳಲ್ಲಿ ಒಂದು ಬರಿಂಕದ ದಾಡೆಗೆ ಸಿಕ್ಕಿ ಕತ್ತರಿಸಲ್ಪಟ್ಟು ಕೆಳಗೆ ಬಿತ್ತು. ಆದರೆ ಆತ ತುಸು ಸುಧಾರಿಸಿಕೊಂಡು ಅದನ್ನು ಅಲ್ಲೇ ಬೇಲಿ ಪೊದೆಯಲ್ಲಿದ್ದ ದಡ್ಡಾಲೆಯ ನೂಲಿನಿಂದ ಮತ್ತು ಅದರ ತುದಿಯ ಚೂಪಾದ ಮುಳ್ಳಿನಿಂದ ಹೊಲಿದು ಒಳಗೆ ಸೇರಿಸಿಕೊಂಡು ತಾನೇ ಔಷ ಮಾಡಿಕೊಂಡ. ಕ್ರಮೇಣ ಆತ ಗುಣಮುಖನಾಗಿ ಸುಧಾರಿಸಿಕೊಂಡ. ಇದನ್ನು ಕೇಳಿದವರು ನೀವು ಯಾರೂ ನಂಬಲಿಕ್ಕಿಲ್ಲ. ಆದರೂ ನಡೆದಿರುವುದು ನಿಜ. ವೈದ್ಯರೂ ಕೂಡಾ ಈ ಬಗೆಗೆ ಇಂತಹದ್ದೆಲ್ಲ ಸಾಧ್ಯ ಎನ್ನುತ್ತಾರೆ. ಹಾಗೆ ನೋಡಿದರೆ ಪ್ರಾಣಿ ಸಂಕುಲವೆಲ್ಲ ಪ್ರಕೃತಿಯ ಸಂದರ್ಭಗಳಿಗೆಲ್ಲ ಸ್ಪಂದಿಸಿಯೇ ಬದುಕು ನಡೆಸಬೇಕಾಗುತ್ತದೆ. ಹಾಗೆ ಪ್ರಕೃತಿಯ ಜೊತೆಗೆ ಹೋರಾಡುವ ಮತ್ತು ಪ್ರತಿರೋಧ ಸಾಮರ್ಥ್ಯವಿರುವವು ಉಳಿದುಕೊಳ್ಳುತ್ತವೆ. ಇದು ನಿಸರ್ಗ ನಿಯಮ. ಯಾವ ಪಕ್ಷಿ, ಪ್ರಾಣಿಯಾದರೂ ಪ್ರಕೃತಿಯಲ್ಲಿ ಇದ್ದುಕೊಂಡೇ ಕಾಠಿಣ್ಯಗಳಿಂದ, ಅಪಾಯಗಳಿಂದ ತನ್ನ ರಕ್ಷಣೆ ಮಾಡಿಕೊಂಡು ಹೊಂದಿಕೊಳ್ಳುವುದನ್ನು ಕಲಿತುಕೊಳ್ಳುತ್ತದೆ. ಮನುಷ್ಯನಾದರೂ ಅಷ್ಟೇ. ಪ್ರಾಣಿವರ್ಗಕ್ಕೆ ಸೇರಿದವನು ತಾನೇ?

* ನಮ್ಮ ಗ್ರಾಮದ ಪಟೇಲನಾಗಿ ನಾನು ಕೆಲಸ ಮಾಡುತ್ತಿದ್ದಾಗ ನಡೆದ ಒಂದು ಘಟನೆ ಹೀಗಿದೆ. ಆ ಗ್ರಾಮದಲ್ಲಿ ಒಬ್ಬಳು ಯುವತಿಯನ್ನು ಅದೇ ಕೋಮಿನ ತರುಣನೇ ಅತ್ಯಾಚಾರ ಮಾಡುವ ವಿಲ ಪ್ರಯತ್ನ ನಡೆಸಿದ್ದ. ಆಕೆಯ ಮೇಲೆ ಬಲಾತ್ಕಾರ ನಡೆಸಲು ಪ್ರಯತ್ನಿಸುತ್ತಿದ್ದಂತೆಯೇ ಮಂಚದ ಪಕ್ಕದ ಮೇಜಿನ ಮೇಲಿನಿಂದ ಎತ್ತಿಕೊಂಡ ಚಾಕುವಿನಿಂದಲೇ ಆಕೆ ಆತನ ಮರ್ಮಾಂಗವನ್ನು ಬುಡದಿಂದಲೇ ಕತ್ತರಿಸಿ ತನ್ನ ಪ್ರತಿಭಟನೆಯನ್ನು ತೋರಿಸಿಯೇ ಬಿಟ್ಟಳು. ಹೀಗಿದ್ದರೂ ಆತ ಮುಂದೆ ಸುಧಾರಿಸಿಕೊಂಡ ಮತ್ತು ಸಂಸಾರಿಯೂ ಆಗಿ ಜೀವನ ನಡೆಸಿದ. ಪಟೇಲನಾಗಿದ್ದ ಕಾರಣ ಮುಂದೆ ಈ ಕೇಸಿಗೆ ಸಂಬಂಸಿ ಕೋರ್ಟ್‌ಗೆ ರಿಪೋರ್ಟ್ ಕೊಡುವ ಮತ್ತು ಸಾಕ್ಷಿ ಹೇಳುವ ಕೆಲಸ ನನಗೆ ಅನಿವಾರ್ಯವಾಗಿತ್ತು. ಮಂಗಳೂರಿನಿಂದ ಹೊರಡುತ್ತಿದ್ದ ಸಂಗಾತಿ ಪತ್ರಿಕೆಯಲ್ಲಿ ಈ ಘಟನೆಯ ಅನುಭವದ ಸಮಗ್ರ ವಿವರವನ್ನು ನಾನು ಬರೆದದ್ದು ಉಂಟು.

ತಮಗೆ ಇಷ್ಟವಿರುವ ಯಾವುದೇ ಸಾಹಿತ್ಯ ಕೂಟ, ಸಭೆ ಸಮಾರಂಭಗಳಲ್ಲಿ ಕಾರ್ಯಕರ್ತರ ಅಥವಾ ಯಾರದ್ದೇ ಆಗಲಿ, ಸ್ವಾಗತ, ಗಮನಗಳ ನಿರೀಕ್ಷೆಗಳಿಲ್ಲದೆ ಪಾಲುಗೊಂಡು ತನ್ನ ಪಾಡಿಗೆ ಎದ್ದು ಹೋಗುತ್ತಿದ್ದವರೆಂದರೆ ಅಗ್ರಾಳ ಪುರಂದರ ರೈಯವರೇ ಸೈ. ಸಾದಾ ಖಾದಿ ಜುಬ್ಬ ಪಂಚೆಯುಡುಗೆಯುಟ್ಟು ಹೆಗಲಿಗೊಂದು ಶಾಲು, ಶಾಲಿನ ಜೊತೆಗೊಂದು ಬಗಲಲ್ಲಿ ಚೀಲ ನೇತು ಹಾಕಿಕೊಂಡು ತಮ್ಮದೇ ಆದ ನಡಿಗೆಯ ಶೈಲಿಯಲ್ಲಿ ಸಾಗುವ ವ್ಯಕ್ತಿತ್ವ ಪುರಂದರ ರೈಗಳದ್ದು. ಪರಿಚಯದವರು ಯಾರಾದರೂ ಕಂಡು ಮಾತಾಡಿಸಹತ್ತಿದಾಗ ತಾವೇ ಮೊದಲಿಗರಾಗಿ ಎರಡೂ ಕೈಗಳನ್ನು ಎತ್ತಿ ಜೋಡಿಸಿ ನಕ್ಕು ‘ಹೇಗಿದ್ದೀರಿ’ ಎಂದು ಯೋಗಕ್ಷೇಮ ವಿಚಾರಿಸುತ್ತಿದ್ದವರು. ಅವರ ಮನೆ ‘ಸುಯಿಲ್’ಗೆ ಹೋದರೂ ಅಷ್ಟೇ. ನನ್ನಂತಹ ಕಿರಿಯನನ್ನು ಕಂಡರೂ ಹಾಗೆಯೇ ನಮಸ್ಕರಿಸಿ ನಕ್ಕು ಪ್ರೀತಿಯಿಂದ ಹತ್ತಿರ ಕೂರಿಸಿಕೊಂಡು ಸುಖದುಃಖ ಮಾತನಾಡತೊಡಗುತ್ತಿದ್ದರು. ಬಿಡುವಿದ್ದಾಗ ಸಾಂದರ್ಭಿಕವಾದ ಸಕಾಲಿಕವಾದ ಲೋಕಾಭಿರಾಮಕ್ಕೆ ತೊಡಗಿ, ಅರ್ಧ ಶತಮಾನಕ್ಕೂ ಹಿಂದೆ ಸಾಗಿ ಆ ಕಾಲದ ಬದುಕಿನ ದಿನಗಳನ್ನು ಮೆಲುಕು ಹಾಕುತ್ತಿದ್ದರು.
ಮೂಲತಃ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅಗ್ರಾಳ ಹಳ್ಳಿಯಲ್ಲಿ ಕೃಷಿಕರಾಗಿದ್ದು, ಗ್ರಾಮದ ಪಟೇಲರಾಗಿದ್ದು, ಊರಿನ ಶಾನುಭೋಗರಾಗಿದ್ದು, ಅಧ್ಯಾಪಕರಾಗಿದ್ದು, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕೆಗಳ ಬಾತ್ಮೀದಾರರಾಗಿದ್ದು, ಪಡೆದುಕೊಂಡ ವಿವಿಧ ಬಗೆಯ ಜೀವನಾನುಭವಗಳನ್ನು ಪುರಂದರ ರೈಯವರು ತಮ್ಮದೇ ಆದ ಶೈಲಿಯಲ್ಲಿ ನಿರೂಪಿಸುತ್ತಿದ್ದರು.

‘‘ಇವುಗಳನ್ನೆಲ್ಲ ನೀವು ಕೇಳಿದರೆ ಖಂಡಿತ ನಂಬಲಿಕ್ಕಿಲ್ಲ. ಆದರೂ ಅವು ನಡೆದಿರುವುದು ನಿಜ.’’ ಎಂದು ಮತ್ತೆ ಮತ್ತೆ ತಲೆಮಾರುಗಳ ಅಂತರದ ಬಗ್ಗೆ ಒತ್ತಿ ಹೇಳುತ್ತಿದ್ದರು. ಅಂತಹವುಗಳನ್ನು ಕೇಳಿಸಿಕೊಂಡ ನೆನಪಿನ ಬುತ್ತಿಯ ಕೆಲವು ಸಂಗತಿಗಳು ಇವು.
ಐವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಸರ್ವೋದಯ ಪತ್ರಿಕೆಯಲ್ಲಿ ಅಗ್ರಾಳ ಪುರಂದರ ರೈಗಳು ಬರೆಯುತ್ತಿದ್ದರು. ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗರ್ಭಸ್ಥ ಶಿಶುವಿನ ಮೇಲೆ ತಾಯಿಯಿಂದಾಗುವ ಪ್ರಭಾವ, ಪ್ರೇರಣೆ, ಪರಿಣಾಮಗಳ ವಸ್ತುವುಳ್ಳ ಲೇಖನಗಳನ್ನು ಅವರು ಬರೆದದ್ದುಂಟು. ಕ್ಷೇತ್ರ(ತಾಯಿ) ಬೀಜ (ತಂದೆ) ಮತ್ತು ಗೊಬ್ಬರ (ಸಂಸ್ಕಾರ-ಶಿಕ್ಷಣ-ಪರಿಸರ) ಈ ವಿಷಯಕ್ಕೆ ಸಂಬಂಸಿದಂತೆ ಪುರಾಣ ಚರಿತ್ರೆಗಳ ಆಧಾರಗಳಿಂದ ‘ಪ್ರಗತಿಯ ಹಾದಿಗಳು’ ಎನ್ನುವ ಲೇಖನವನ್ನು ಅವರು ಸರ್ವೋದಯದಲ್ಲಿ ಬರೆದಿದ್ದಾರೆ.

ನಿರಂಜನರು ‘ಜನಪ್ರಗತಿ ಪತ್ರಿಕೆಯಲ್ಲಿ ‘ಸಾಧನ ಸಂಚಯ’ ಅಂಕಣದಲ್ಲಿ ಪತ್ರಗಳಿಗೆ ಉತ್ತರ ಬರೆಯುತ್ತಿದ್ದುದನ್ನು ಗಮನಿಸುತ್ತಿದ್ದ ಪುರಂದರ ರೈಗಳು ಅವುಗಳಿಂದ ಬಹಳಷ್ಟು ಪ್ರೇರಣೆ ಪಟ್ಟುಕೊಂಡು ಅದೇ ಜಾಡಿನಲ್ಲಿ ‘ಪರಿಮಳೆಗೆ ಪತ್ರಗಳು’ ಎಂಬ ಅಂಕಣ ಲೇಖನಗಳನ್ನು ಸರ್ವೋದಯ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇಂತಹ ಪತ್ರಗಳಲ್ಲಿ ಒಂದು ನಿರ್ದಿಷ್ಟ ವಸ್ತುವನ್ನು ಇಟ್ಟುಕೊಂಡು ಬರೆಯುವುದು ಸುಲಭ ಮತ್ತು ಪ್ರಸ್ತುತ ಎನ್ನುವುದು ರೈಗಳ ಅನುಭವ. ‘ಸ್ವರ್ಗಾಪ’ ಎನ್ನುವ ಗುಪ್ತನಾಮದಲ್ಲೂ ಅವರು ಬರೆಯುತ್ತಿದ್ದದ್ದುಂಟು. ಪುರಂದರ ರೈಗಳಂತಹ ಹಿರಿಯರ ಇಂತಹ ಅನುಭವಗಳು ಹಳೆಯ ಮತ್ತು ಹೊಸ ತಲೆಮಾರುಗಳನ್ನು ಬೆಸೆಯುವ ಕೊಂಡಿಗಳ ಹಾಗೆ. ಅವುಗಳಲ್ಲಿ ವಿಚಿತ್ರ ಸತ್ಯ ಸಂಗತಿಗಳೂ ಇವೆ. ಬದುಕಿನ ವಾಸ್ತವ, ನಿಷ್ಠುರ ಮತ್ತು ಅಷ್ಟೇ ರೋಚಕ ಅಂಶಗಳೂ ಇವೆ. ಅವು ಹೊಸ ಬದುಕಿಗೆ ಒಂದು ಧೈರ್ಯವನ್ನೂ ಶಕ್ತಿ ಚೈತನ್ಯವನ್ನೂ ಕೊಡಬಲ್ಲವು. ಅವರ ಈ ಆದರ್ಶಗಳನ್ನೇ ಮೈಗೂಡಿಸಿಕೊಂಡು ಬಹಳಷ್ಟು ಎತ್ತರಕ್ಕೆ ಬೆಳೆದವರು ಅವರ ಮಗ ಹಂಪಿ ವಿ.ವಿ. ಮತ್ತು ಕರ್ನಾಟಕದ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಯಾಗಿರುವ ಡಾ. ಬಿ. ಎ. ವಿವೇಕ ರೈಯವರು.

Writer - ಡಾ. ವಾಮನ ನಂದಾವರ

contributor

Editor - ಡಾ. ವಾಮನ ನಂದಾವರ

contributor

Similar News