ಅಮೆರಿಕದ ಸ್ವಾತಂತ್ರ್ಯ ಪ್ರತಿಮೆಯ ಮಹಿಳಾ ರೂಪ ಮುಸ್ಲಿಮ್ ರೈತ ಹೆಂಗಸಿನದ್ದು!

Update: 2016-08-30 18:20 GMT

ವಾಶಿಂಗ್ಟನ್, ಆ.30: ಅಮೆರಿಕದ ಪ್ರಗತಿ ಸೂಚಕ ರಾಷ್ಟ್ರೀಯ ಸ್ಮಾರಕ ‘ಸ್ಟಾಚ್ಯೂ ಆಫ್ ಲಿಬರ್ಟಿ’ಯ ಮಹಿಳೆಯ ರೂಪವು ಈಜಿಪ್ಟ್‌ನ ಓರ್ವ ಮಹಿಳಾ ರೈತಳದ್ದು ಎನ್ನುವುದು ಬಹಿರಂಗವಾಗಿದೆ.

ಅಮೆರಿಕದ ‘ದ ಡೇಲಿ ಬಿಸ್ಟ್’ ಎಂಬ ಪತ್ರಿಕೆಯಲ್ಲಿ ಇದಕ್ಕೆ ಸಂಬಂಧಿಸಿದ ಲೇಖನ ಪ್ರಕಟವಾಗಿದೆ. ಮೈಕಲ್ ಡೇಲಿ ಎಂಬ ಲೇಖಕ ಈ ಲೇಖನವನ್ನು ಬರೆದಿದ್ದಾನೆಂದು ವರದಿಯೊಂದು ತಿಳಿಸಿದೆ.

ಸೂಯೆಜ್ ಕಾಲುವೆಯ ಅಭಿಮುಖವಾಗಿ ಸ್ಥಾಪಿಸಲಿಕ್ಕಾಗಿ ಫ್ರೆಂಚ್ ಶಿಲ್ಪಿ ಫೆಡ್ರಿಕ್ ಆಗಸ್ಟೆ ಬರ್ತಾಲ್ಡಿ ಇದರ ರೂಪಕಲ್ಪನೆ ಮಾಡಿ ಚಿತ್ರ ರಚಿಸಿದ್ದ. ಈಜಿಪ್ಟ್ ರೈತ ಮಹಿಳೆಯೊಬ್ಬರು ದೀಪ ಎತ್ತಿ ಹಿಡಿದು ನಿಂತ ರೀತಿಯಲ್ಲಿ ಈ ಚಿತ್ರವಿದೆ. ಪ್ರಗತಿ ಮತ್ತು ಬೆಳಕು ಪ್ರಸಾರಿಸುವ ‘ಲೈಟ್‌ಹೌಸ್’ ಎಂಬ ಪರಿಕಲ್ಪನೆಯಲ್ಲಿ ಶಿಲ್ಪಿ ಚಿತ್ರವನ್ನು ರಚಿಸಿದ್ದರೂ, ಅಂದಿನ ಈಜಿಪ್ಟ್ ರಾಜ್ಯಪಾಲ ಇಸ್ಮಾಯೀಲ್ ಪಾಶ ಇದಕ್ಕೆ ಅಂಗೀಕಾರ ನೀಡಿರಲಿಲ್ಲ. ಆದರೆ ಶಿಲ್ಪನಿರ್ಮಿಸುವ ತನ್ನ ಸಂಕಲ್ಪದಿಂದ ಹಿಂದೆ ಸರಿಯದ ಶಿಲ್ಪಿನಂತರ ತನ್ನ ಚಿತ್ರದೊಂದಿಗೆ ಅಮೆರಿಕಕ್ಕೆ ಬಂದಿದ್ದ ಎಂದು ಲೇಖನದಲ್ಲಿ ಬರೆಯಲಾಗಿದೆ.

ಮೊದಲು ಈ ಪ್ರತಿಮೆಯನ್ನು ಮ್ಯಾನ್‌ಹಟನ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸ್ಥಾಪಿಸಲು ಆತ ಬಯಸಿದ್ದ. ಬಳಿಕ ತನ್ನ ಯೋಚನೆಯನ್ನು ಬದಲಿಸಿ ಲಿಬರ್ಟಿ ದ್ವೀಪದಲ್ಲಿ ಸ್ಥಾಪಿಸಿದ್ದಾನೆ. ಆತ ಚಿತ್ರವನ್ನು ‘ಲೇಡಿ ಲಿಬರ್ಟಿ’ ಎಂಬುದಾಗಿ ಹೆಸರಿಸಿದ.

ಬಳಿಕ, ಈಜಿಪ್ಟ್‌ನ ಮುಸ್ಲಿಮ್ ರೈತ ಮಹಿಳೆಯೊಬ್ಬರು ಅಮೆರಿಕದ ಸ್ವಾತಂತ್ರ್ಯದ ಸಂಕೇತವಾಗಿ ರೂಪುಗೊಂಡರು ಎನ್ನಲಾಗಿದೆ.

ಪ್ರತಿಮೆ ನಿರ್ಮಾಣದ ವೇಳೆ ಶಿಲ್ಪಿಫೆಡ್ರಿಕ್ ಆರ್ಥಿಕ ಮುಗ್ಗಟ್ಟು ಎದುರಿಸಿದ್ದ. ಆದ್ದರಿಂದ ಒಂದು ಲಕ್ಷಕ್ಕೂ ಅಧಿಕ ಅಮೆರಿಕನ್ ಮಕ್ಕಳು ನೀಡಿದ ದೇಣಿಗೆಯ ನೆರವಿನಲ್ಲಿ ಇದನ್ನು ಶಿಲ್ಪಿ ನಿರ್ಮಿಸಿದ್ದಾನೆ. ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಪ್ಯಾರಿಸ್‌ನ ವಿಶ್ವವಿಖ್ಯಾತ ‘ಐಫೆಲ್ ಟವರ್’ ನಿರ್ಮಿಸಿದ ಗುಸಾತಿವ್ ಐಫೆಲ್ ಕೂಡಾ ಪಾಲ್ಗೊಂಡಿದ್ದು, ಅಮೆರಿಕನ್ ಜನತೆಗೆ ಫ್ರಾನ್ಸ್ ನೀಡಿದ ಉಡುಗೊರೆಯಾಗಿ ಈ ಪ್ರತಿಮೆ ಪರಿಗಣಿಸಲ್ಪಟ್ಟಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News