×
Ad

ನಾಳೆ ಮದರ್ ತೆರೆಸಾಗೆ ಸಂತ ಪದವಿ ಘೋಷಣೆ

Update: 2016-09-03 19:52 IST

ಕೋಲ್ಕತಾ, ಸೆ.3: ವಿಶ್ವಾದ್ಯಂತದ ಲಕ್ಷಾಂತರ ಶ್ರದ್ಧಾಳುಗಳ ಸಮ್ಮುಖದಲ್ಲಿ ನಾಳೆ ವೆಟಿಕನ್ ನಗರದಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ರೋಮನ್ ಕೆಥೊಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್, ಮದರ್ ತೆರೆಸಾರನ್ನು ಸಂತಳೆಂದು ಘೋಷಿಸಲಿದ್ದಾರೆ.

ಭಾರತದಿಂದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ನೇತೃತ್ವದ 12 ಸದಸ್ಯರ ನಿಯೋಗ, ದಿಲ್ಲಿ ಹಾಗೂ ಪಶ್ಚಿಮ ಬಂಗಾಲಗಳಿಂದ ಕ್ರಮವಾಗಿ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಎರಡು ರಾಜ್ಯ ಮಟ್ಟದ ನಿಯೋಗಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ.

ಮದರ್ ತೆರೆಸಾರ ಜನಪ್ರಿಯತೆಯಿಂದಾಗಿ ರೋಮ್‌ನಲ್ಲಿ ನಡೆಯಲಿರುವ ಸಂತ ಪದವಿ ಪ್ರದಾನ ಸಮಾರಂಭವು ಜಾಗತಿಕ ವಿಶೇಷತೆಯನ್ನು ಪಡೆದಿದೆಯೆಂದು ಮಿಶನರೀಸ್ ಆಫ್ ಚಾರಿಟಿಯ ಕ್ರೈಸ್ತ ಭಗಿನಿಯರು ಹೇಳಿದ್ದಾರೆ.

ಚಾರಿಟಿಯ ಸುಪೀರಿಯರ್ ಜನರಲ್ ಸಿಸ್ಟರ್ ಮೇರಿ ಪ್ರೇಮಾರ ನೇತೃತ್ವದಲ್ಲಿ ಇಲ್ಲಿ ನಡೆಯಲಿರುವ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳ 40-50 ಕ್ರೈಸ್ತ ಸನ್ಯಾಸಿಯರ ಗುಂಪೊಂದು ಭಾಗವಹಿಸಲಿದೆ.

ಕೋಲ್ಕತಾದ ಆರ್ಚ್ ಬಿಷಪ್ ಥಾಮಸ್ ಡಿ’ಸೋಜಾರಲ್ಲದೆ, ಭಾರತಾದ್ಯಂತದ ಸುಮಾರು 45 ಬಿಷಪ್‌ಗಳು ಈಗ ವೆಟಿಕನ್‌ನಲ್ಲಿದ್ದಾರೆ.

ತೆರೆಸಾರ ಮರಣಾನಂತರ ಅವರ ಹೆಸರಲ್ಲಿ ನಡೆದಿವೆಯೆನ್ನಲಾದ ಎರಡು ಪವಾಡಗಳನ್ನು ಚರ್ಚ್ ಗುರುತಿಸಿದ ಬಳಿಕ, ಅವರನ್ನು ಸಂತ ಪದವಿಗೇರಿಸುವ ಘೋಷಣೆಯನ್ನು ಪೋಪ್ ಫ್ರಾನ್ಸಿಸ್ ಮಾರ್ಚ್‌ನಲ್ಲಿ ಮಾಡಿದ್ದರು.

ತೆರೆಸಾ, ಸುಮಾರು 45 ವರ್ಷಗಳ ಕಾಲ ಬಡವರು ಹಾಗೂ ರೋಗಿಗಳ ಸೇವೆ ಮಾಡಿದ್ದ ಕೋಲ್ಕತಾದ ಮದರ್ ಹೌಸ್‌ನಲ್ಲಿ ನಾಳೆ ಸಾಮೂಹಿಕ ಪ್ರಾರ್ಥನೆ ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News