ಭುವನೇಶ್ವರ ರಸ್ತೆಗೆ ತೆರೇಸಾ ಹೆಸರು

Update: 2016-09-04 17:28 GMT

ಭುವನೇಶ್ವರ, ಸೆ.4: ಸಂತ ಪದವಿಗೆ ಏರಿರುವ ಮದರ್ ತೆರೇಸಾ ಹೆಸರನ್ನು ಇಲ್ಲಿನ ಪ್ರಮುಖ ರಸ್ತೆಯೊಂದಕ್ಕೆ ನಾಮಕರಣ ಮಾಡಲು ಬಿಹಾರ ಸರಕಾರ ನಿರ್ಧರಿಸಿದೆ.

ಸತ್ಯನಗರ ಹಾಗೂ ಕಟಕ್-ಪುರಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಗೆ ಸಂತ ಮದರ್ ತೆರೇಸಾ ರಸ್ತೆ ಎಂದು ಕರೆಯಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಕಟಿಸಿದ್ದಾರೆ. ತೆರೇಸಾಗೆ ಮರಣೋತ್ತರವಾಗಿ ಸಂತ ಪದವಿ ಕರುಣಿಸುವ ದಿನವೇ ಈ ನಿರ್ಧಾರ ಹೊರಬಿದ್ದಿದೆ.

ಮದರ್ ತೆರೇಸಾ ಅವರಿಗೆ ಸಂತ ಪದವಿ ದೊರಕಿರುವ ಸಂದರ್ಭದಲ್ಲಿ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ. 1929ರಲ್ಲಿ ಭಾರತಕ್ಕೆ ಬಂದು, ಈ ದೇಶವನ್ನು ತಮ್ಮ ಮನೆಯಾಗಿ ಮಾಡಿಕೊಂಡು ಬಡವರ, ರೋಗಿಗಳ ಹಾಗೂ ನಿರ್ಗತಿಕರ ಸೇವೆ ಮಾಡಿದರು ಎಂದು ಪಟ್ನಾಯಕ್ ಸ್ಮರಿಸಿಕೊಂಡಿದ್ದಾರೆ.

ಅವರ ಬದುಕಿನ ಅಧ್ಯಾಯದ ಪುಟಗಳಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಅವರ ಸೇವೆ ಹಾಗೂ ನಿರ್ಗತಿಕರ ಬಗ್ಗೆ ಅವರಿಗೆ ಇದ್ದ ಬದ್ಧತೆ ನಮಗೆಲ್ಲರಿಗೂ ಪಾಠ. ಪ್ರತಿಯೊಬ್ಬರ ಘನತೆಗಾಗಿ ಶ್ರಮಿಸೋಣ ಎಂದು ಪಟ್ನಾಯಕ್ ಕರೆ ನೀಡಿದ್ದಾರೆ.

ಒಡಿಶಾದ ಕೆಥೊಲಿಕ್ ಬಿಷಪ್ಸ್ ಕೌನ್ಸಿಲ್ ಅಧ್ಯಕ್ಷ ಆರ್ಚ್‌ಬಿಷಪ್ ಜಾನ್ ಬರ್ವ ಅವರ ಮನವಿಯ ಮೇರೆಗೆ ಸರಕಾರ ಈ ನಿರ್ಧಾರ ಕೈಗೊಂಡಿದೆ. ಮದರ್ ತೆರೇಸಾ ಅವರು ಆರಂಭಿಸಿದ ಮಿಷನರೀಸ್ ಆಫ್ ಚಾರಿಟಿಯ 18 ಗೃಹಗಳು ಒಡಿಶಾದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಮದರ್ ತೆರೇಸಾ 1974ರಲ್ಲಿ ಮೊದಲ ಬಾರಿಗೆ ಭುವನೇಶ್ವರಕ್ಕೆ ಭೇಟಿ ನೀಡಿ, ಅಂದಿನ ಮುಖ್ಯಮಂತ್ರಿ ನಂದಿನಿ ಸತ್ಯಪತಿ ಹಾಗೂ ರಾಜ್ಯಪಾಲ ಅಕ್ಬರ್ ಅಲಿ ಖಾನ್ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಅವರು ಹಲವು ಬಾರಿ ಒಡಿಶಾಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News