ಜಯವೇಲು: ಭಿಕ್ಷಾಟನೆಯಿಂದ ಕೇಂಬ್ರಿಡ್ಜ್ ವಿವಿವರೆಗೆ

Update: 2016-09-13 09:06 GMT

22 ವರ್ಷದ ಚೆನ್ನೈ ಯುವಕನಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಡ್ವಾನ್ಸ್‌ಡ್ ಅಟೊಮೊಬೈಲ್ ಎಂಜಿನಿಯರಿಂಗ್ ಕಲಿಯುವ ಅವಕಾಶ ಸಿಕ್ಕಿದೆ. ಇದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಈತನ ಯಶೋಗಾಥೆಗೆ ಎಲ್ಲರೂ ತಲೆದೂಗಲೇ ಬೇಕು. ಭಿಕ್ಷುಕ ಕುಟುಂಬದಿಂದ ಬಂದ ಜಯವೇಲು ಸಾಧನೆಯ ಹಾದಿ ಎಂಥವರಿಗೂ ಸ್ಫೂರ್ತಿಯ ಚಿಲುಮೆ.

ಬೆಳೆಹಾನಿಯಿಂದ ದಿಕ್ಕೆಟ್ಟ ನೆಲ್ಲೂರು ಮೂಲದ ಜಯವೇಲು ಕುಟುಂಬ 80ರ ದಶಕದಲ್ಲೇ ಚೆನ್ನೈಗೆ ಬಂದು ಭಿಕ್ಷಾಟನೆ ಆರಂಭಿಸಿತು. ಅವರ ಸ್ಥಿತಿಯನ್ನು ಅವರ ಮಾತಲ್ಲೇ ಕೇಳೋಣ: "ಫುಟ್‌ಪಾತ್‌ನಲ್ಲಿ ನಿದ್ದೆ. ಮಳೆ ಬಂದರೆ ಅಂಗಡಿ ಬದಿಯಲ್ಲಿ ಪೊಲೀಸರು ಬಂದು ಓಡಿಸುವವರೆಗೂ ಸುಖನಿದ್ದೆ. ಪೋಷಕರಿಂದಲೇ ಭಿಕ್ಷಾಟನೆ ವೃತ್ತಿಗೆ ತಳ್ಳಲ್ಪಟ್ಟ ಹತಭಾಗ್ಯ ಮಕ್ಕಳ ಪೈಕಿ ನಾನೂ ಒಬ್ಬ. ದಾರಿಹೋಕರ ದಯಾಭಿಕ್ಷೆಯೇ ಜೀವನಾಧಾರ. ದಿನದ ಆದಾಯದ ಬಹುತೇಕ ಪಾಲು ತಾಯಿಯ ಕುಡಿತಕ್ಕೆ ಮೀಸಲು. ಚಿಕ್ಕವಯಸ್ಸಿನಲ್ಲೇ ತಂದೆ ತೀರಿಕೊಂಡ ಬಳಿಕ ತಾಯಿ ಮದ್ಯವ್ಯಸನಿ. ಧರಿಸಲು ಒಂದೇ ಬಟ್ಟೆ. ಇವೆಲ್ಲವೂ ಭಿಕ್ಷೆ ಎತ್ತಲು ಕಾರಣವಾಯಿತು. ಉಮಾ ಮುತ್ತುರಾಮನ್ ಭೇಟಿವರೆಗೂ ನನಗೆ ಇದೇ ಜಗತ್ತು"

ಉಮಾ ತಮ್ಮ ಪತಿ ಜತೆ ಸೇರಿಕೊಂಡು ಬೀದಿಮಕ್ಕಳ ಬದುಕನ್ನು ಬಿಂಬಿಸುವ ಒಂದು ಯೋಜನೆಗೆ ಕೈಹಾಕಿದ್ದರು. ಈ ಬಗ್ಗೆ ಪೇವ್‌ಮೆಂಟ್ ಫ್ಲವರ್ ಎಂಬ ವೀಡಿಯೊ ಕಥೆಗೆ ಮುಂದಾಗಿದ್ದರು. ಬಾಲಕನ ಸ್ಥಿತಿ ಕಂಡು ಈ ಕುಟುಂಬಕ್ಕೆ ಸಹಾಯಹಸ್ತ ಚಾಚಲು ಈ ದಂಪತಿ ಮುಂದಾದರು. 1999ರಿಂದ ಬಾಲಕನನ್ನು ತಮ್ಮ ಸುಪರ್ದಿಗೆ ಪಡೆದರು. ಸುಯಮ್ ಚಾರಿಟೇಬಲ್ ಟ್ರಸ್ಟ್ ಮೂಲಕ ಆತನ ಶಿಕ್ಷಣಕ್ಕೆ ನೆರವಾದರು.

ಆರಂಭದಲ್ಲಿ ಕಲಿಕೆ ಆಸಕ್ತಿ ಇಲ್ಲದಿದ್ದರೂ, ಶಿಕ್ಷಣದ ಮಹತ್ವ ಕ್ರಮೇಣ ಈ ಬಾಲಕನಿಗೆ ಅರ್ಥವಾಯಿತು. 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಕ್ಕಿತು. ಆತನ ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತ ಸಾಲ ನೀಡಲು ಕೆಲ ದಾನಿಗಳು ಮುಂದಾದರು. ಕೇಂಬ್ರಿಡ್ಜ್ ವಿವಿಯ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಿ, ವೇಲ್ಸ್‌ನ ಕ್ಲೆಂಡೊ ವಿವಿಯಲ್ಲಿ ಅಧ್ಯಯನಕ್ಕೆ ಅವಕಾಶ ಸಿಕ್ಕಿತು. ಇದೀಗ ಉನ್ನತ ವ್ಯಾಸಂಗಕ್ಕಾಗಿ ಇಟೆಲಿಗೆ ಜಯವೇಲು ತೆರಳುತ್ತಿದ್ದಾರೆ.

ಟ್ರಸ್ಟ್ ಈಗಾಗಲೇ ಜಯವೇಲು ಶಿಕ್ಷಣಕ್ಕಾಗಿ 17 ಲಕ್ಷ ರೂಪಾಯಿ ಸಾಲ ಪಡೆದಿದೆ. ಇಟೆಲಿಗೆ ತೆರಳಲು ಮತ್ತೆ 8 ಲಕ್ಷ ಬೇಕು. ಜಯವೇಲು ತಾಯಿ ಇನ್ನೂ ಟಿ.ನಗರ ಬೀದಿಯಲ್ಲೇ ಚಿಂದಿ ಆಯುವ ಕೆಲಸ ಮಾಡುತ್ತಾ ಅಲ್ಲೇ ವಾಸವಿದ್ದಾರೆ. ತಿಂಗಳಿಗೊಮ್ಮೆ ತಾಯಿಯನ್ನು ಭೇಟಿಯಾಗುವ ಜಯವೇಲು, ಆಕೆಯ ಕುಡಿತದ ಚಟವನ್ನು ಇಷ್ಟಪಡುವುದಿಲ್ಲ. ಶಿಕ್ಷಣ ಮುಗಿಸಿದ ಬಳಿಕ, ಉಮಾ ಹಾಗೂ ಮುತ್ತುರಾಮನ್ ಅವರಿಗೆ ನೆರವಾಗುವ ಮೂಲಕ ಋಣ ತೀರಿಸುವ ಬಯಕೆ ಅವರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News