ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ -ಕಲ್ಲೆ ಶಿವೋತ್ತಮ ರಾವ್

Update: 2016-09-13 17:45 GMT

ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್ (87) ಹುಟ್ಟಿದ್ದು ಕಾರ್ಕಳದಲ್ಲಿ, ಮಾತೃಭಾಷೆ ತುಳು. ಸುಮಾರು ಐವತ್ತು ವರ್ಷಗಳ ಕಾಲ ರಾಜ್ಯದ ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ನಿರಂತರವಾಗಿ ಬರೆಯುತ್ತಲೇ ಬದುಕಿದವರು. ಜೆಪಿ, ಲೋಹಿಯಾರ ಸಮಾಜವಾದ; ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿ ವಿಸ್ತರಿಸಿದವರು. ಬ್ರಾಹ್ಮಣ್ಯದ ಹುನ್ನಾರಗಳನ್ನು ಬಯಲಿಗೆಳೆಯುತ್ತ, ವರ್ಗಶ್ರೇಣಿಯನ್ನು ಕಟುವಾಗಿ ಟೀಕಿಸುತ್ತ, ಇದ್ದುದನ್ನು ಇದ್ದಂಗೆ ಹೇಳಿ ಜಗಳಗಂಟನ ಪಟ್ಟ ಕಟ್ಟಿಸಿಕೊಂಡವರು. ಶಿವೋತ್ತಮರಾಯರು ಚಿಕ್ಕವರಿದ್ದಾಗ ಆಟದಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಆ ಆಟದ ಸಮಯದಲ್ಲಿ, ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿದ್ದ ಅಪ್ಪನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನೆಲ್ಲ ಪಾಠದಂತೆ ಓದಿದ್ದರು. ಮಹಾಭಾರತ, ರಾಮಾಯಣ, ಭಗವದ್ಗೀತೆಗಳನ್ನು ಬಾಯಿಪಾಠ ಮಾಡಿದ್ದರು. ಆದಕಾರಣ 14ನೆ ವಯಸ್ಸಿಗೇ ಮಂಗಳೂರಿನ ಕುಡ್ವರ ‘ನವಭಾರತ’ ಎಂಬ ದೈನಿಕಕ್ಕೆ ವರದಿಗಾರನಾಗಿ ಕೆಲಸಕ್ಕೆ ಸೇರಿದ್ದರು. ಆನಂತರ ಕಡೆಂಗೋಡ್ಲು ಶಂಕರಭಟ್ಟರ ‘ರಾಷ್ಟ್ರ ಬಂಧು’ ವಾರಪತ್ರಿಕೆಗೆ ಸೇರಿ, ‘ರಾಷ್ಟ್ರ ಮತ’ದಲ್ಲಿ ಸ್ವಲ್ಪ ದಿನವಿದ್ದು, ಅಲ್ಲಿಂದ ನೇರವಾಗಿ ಬೆಂಗಳೂರಿನ ಬಿ.ಎನ್.ಗುಪ್ತರ ‘ಜನಪ್ರಗತಿ’ ಪತ್ರಿಕೆಗೆ ಬಂದರು. ಅಲ್ಲಿ 14 ವರ್ಷಗಳ ಕಾಲ, ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಮೇಲೆ ಪ್ರಜಾವಾಣಿಯಲ್ಲಿ ಮೂರು ವರ್ಷ, ಸಂಯುಕ್ತ ಕರ್ನಾಟಕದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ, ಎನ್‌ಲೈಟ್ ಎಂಬ ಇಂಗ್ಲಿಷ್ ವಾರಪತ್ರಿಕೆಗೂ ಬರೆದರು. ಆಗ ಇದ್ದದ್ದು ಕೆಲವೇ ಕೆಲವು ಪತ್ರಿಕೆಗಳು ಮಾತ್ರ- ತಾಯಿನಾಡು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ದೈನಿಕಗಳು ಮತ್ತು ಜನಪ್ರಗತಿ, ಕಂಠೀರವ ಎಂಬ ವಾರಪತ್ರಿಕೆಗಳು. ಜನಪ್ರಗತಿ ವಾರಪತ್ರಿಕೆಯಲ್ಲಿ ಸರಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುವ, ಓದುಗರನ್ನು ಜಾಗೃತರನ್ನಾಗಿಸುವ ಅಗ್ರಲೇಖನಗಳು ಪ್ರಕಟವಾಗುತ್ತಿದ್ದು, ಪತ್ರಿಕೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಪತ್ರಿಕೆಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮರಾಯರು ಪ್ರಬುದ್ಧ, ಚಿಂತನಾರ್ಹ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದರು. ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಗೆ ಬದ್ಧರಾಗಿದ್ದ ಶಿವೋತ್ತಮರಾಯರು ಪತ್ರಿಕೋದ್ಯಮದ ವೌಲ್ಯವನ್ನು ಹೆಚ್ಚಿಸಿದವರಲ್ಲಿ ಪ್ರಮುಖರು. ಅಂದಿನ ದಿನಗಳ ಪತ್ರಿಕೋದ್ಯಮದಲ್ಲಿ ಶೂದ್ರ ಪತ್ರಕರ್ತ ಎಂದೇ ಗುರುತಿಸಲ್ಪಡುತ್ತಿದ್ದ ಶಿವೋತ್ತಮರಾಯರು ಅಕಾರಸ್ಥರಿಂದ ಸಮಾನ ಅಂತರವನ್ನು ಕಾಯ್ದುಕೊಂಡು, ಪತ್ರಿಕೋದ್ಯಮಕ್ಕೆ ಬೆಲೆ ತಂದವರು.
10 ಪುಸ್ತಕಗಳನ್ನು ಬರೆದಿರುವ ಶಿವೋತ್ತಮರಾಯರು, ಐದು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿದ್ದು, ಹಲವಾರು ಮುಖ್ಯಮಂತ್ರಿಗಳ ಆಡಳಿತವನ್ನು ಹತ್ತಿರದಿಂದ ಕಂಡವರು. ದೇವರಾಜ ಅರಸು ಮತ್ತವರ ಸರಕಾರದ ಕಾರ್ಯವೈಖರಿಯನ್ನು ಹತ್ತಿರದಿಂದ ಬಲ್ಲವರು. ಹಲವಾರು ವಿಚಾರಗಳನ್ನು ಅವರೊಂದಿಗೆ ಕೂತು ಚರ್ಚಿಸುವಷ್ಟು ಆತ್ಮೀಯರಾಗಿದ್ದ ಹಿರಿಯ ಪತ್ರಕರ್ತರು. ಅವರು ಕಂಡ ಅರಸು ಇಲ್ಲಿದ್ದಾರೆ...

ರೈತರಿಗೆ ಸಹಾಯ ಮಾಡಬೇಕು..

ದೇವರಾಜ ಅರಸು ಶಾಸಕರಾಗಿದ್ದಾಗ, ಮಲ್ಲೇಶ್ವರಂ 11ನೆ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆಗ ನಾನು 8ನೆ ಕ್ರಾಸ್‌ನಲ್ಲಿದ್ದೆ. ಒಂದು ದಿನ ನಾನೇ ಅವರನ್ನು ಹುಡುಕಿಕೊಂಡು ಅವರ ಮನೆಗೆ ಹೋಗಿದ್ದೆ. ಅರಸರೇ ಖುದ್ದು ಕಾಫಿ ಮಾಡಿಕೊಟ್ಟಿದ್ದರು. ಆಮೇಲೆ ಒಂದು ದಿನ ನಮ್ಮ ಮನೆಯ ಮುಂದೆ ಅವರ ಫಿಯಟ್ ಕಾರು ನಿಲ್ಲಿಸಿ, ಒಬ್ಬ ಹುಡುಗನಿಂದ ಹೇಳಿಕಳುಹಿಸಿದ್ದರು. ನನ್ನ ಮನೆ ಮಹಡಿಯಲ್ಲಿತ್ತು. ಕೆಳಗಿಳಿದು ಹೋಗಿ ನೋಡಿದರೆ ಅರಸು, ಬನ್ನಿ ಎಂದೆ, ಇಲ್ಲ ಕಾರಿನಲ್ಲಿಯೇ ಕೂತು ಮಾತನಾಡೋಣ ಎಂದರು. ಅಂದು ಅವರು ಕೇವಲ ಶಾಸಕರು. ಆದರೆ ಅವರ ಮಾತು ಇಡೀ ರಾಜ್ಯದ, ಜನತೆಯ, ಭವಿಷ್ಯದ ಬಗೆಗಿತ್ತು. ಅವರ ಮಾತಿನಲ್ಲಿ ಬಡವರು ಬಂದುಹೋಗುತ್ತಿದ್ದರು. ಕೃಷಿಕರ ಬಗ್ಗೆ ಕಾಳಜಿ, ಕಳಕಳಿ ವ್ಯಕ್ತವಾಗುತ್ತಿತ್ತು. ‘‘ರೈತರು ಶ್ರಮಜೀವಿಗಳು, ಮುಗ್ಧರು. ಅವರಿಗೆ ಸಹಾಯ ಮಾಡಬೇಕು.

ಇಂದು ದೇಶ ಎದುರಿಸುತ್ತಿರುವ ಪುಡ್ ಕ್ರೈಸಿಸ್ಸನ್ನು ಸಾಲ್ವ್ ಮಾಡಬೇಕಾದವರೂ ಅವರೆ. ಒಳ್ಳೆಯ ಬೆಳೆ ಬಂದಾಗ, ಅವರಾಗಿಯೇ ಭೂ ಮಾಲಕರಿಗೆ ಧಾರಾಳವಾಗಿ ಕೊಡುತ್ತಾರೆ. ಬೆಳೆ ಇಲ್ಲದಾಗ ಎಲ್ಲಿಂದ ತರುತ್ತಾರೆ? ಆಗ ಅವರನ್ನು ಮನೆಯಿಂದ ಹೊರಹಾಕುವುದು, ಹರಾಜು ಹಾಕ್ತೀನಿ ಅನ್ನುವುದು, ಬೀದಿ ಪಾಲು ಮಾಡುವುದು ಸರಿಯಲ್ಲ’’ ಎಂದು ಬಹಳ ನೊಂದುಕೊಳ್ಳುತ್ತಿದ್ದರು. ಅಂದಿನ ದೇಶದ ಸ್ಥಿತಿಯೂ ಹಾಗೇ ಇತ್ತು. ಆಹಾರದ ಕೊರತೆ, ಬಡತನ, ಜನಸಂಖ್ಯಾ ಸಮಸ್ಯೆಗಳೇ ಮುಖ್ಯವಾಗಿದ್ದವು. ನಾನು ಅವರಿಗೆ, ‘‘ನಿಮ್ಮ ಮೊದಲ ಆದ್ಯತೆ ನಮ್ಮ ರೈತರ ಬದುಕನ್ನು ಹಸನು ಮಾಡುವುದು, ನಂತರ ಬೃಹನ್ಮೆಸೂರು ತೆಗೆದು ಕರ್ನಾಟಕ ಅಂತ ಹೆಸರಿನ್ನಿಡುವುದು, ಅದಾದ ಮೇಲೆ ಉಳುವವನೆ ಹೊಲದೊಡೆಯನನ್ನಾಗಿ ಮಾಡುವುದು’’ ಎಂದು, ಮೂರು ಮುಖ್ಯವಾದ ಸಂಗತಿಗಳನ್ನು ಹೇಳಿದೆ. ಅವತ್ತು ಆ ಮೂರು ವಿಷಯಗಳ ಸುತ್ತಲೇ ಮಾತನಾಡಿದೆವು. ಅದಾಗಿ ಮೂರ್ನಾಲ್ಕು ವರ್ಷಕ್ಕೆ, ದೇವರಾಜ ಅರಸು ಮುಖ್ಯಮಂತ್ರಿಯಾದರು. ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದರು, ಜೀತ ಪದ್ಧತಿ ನಿರ್ಮೂಲನೆ ಹಾಗೂ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು. ಆಗ ನನಗೆ ಈ ವ್ಯಕ್ತಿ ಎಲ್ಲರಂತಲ್ಲ ಅನ್ನಿಸಿತು.

ದಲಿತರಿಗೆ ಅಕಾರ
  ನಿಜಲಿಂಗಪ್ಪನವರ ಕಾಲದಲ್ಲಿ ಒಬ್ಬ ದಲಿತನನ್ನು ಮಂತ್ರಿ ಮಾಡಲಾಗಿತ್ತು. ಅದು ಬಿಟ್ಟರೆ ಚೆನ್ನಿಗರಾಯ ಅಂತ ಇನ್ನೊಬ್ಬರು ಸ್ಪೀಕರ್ ಆಗಿದ್ದ ನೆನಪು. ಇಷ್ಟು ಬಿಟ್ಟರೆ, ಕರ್ನಾಟಕದ ರಾಜಕಾರಣ ದಲ್ಲಿ ದಲಿತರಿಗೆ ಸ್ಥಾನಮಾನವನ್ನು, ಅಕಾರ ಅನುಭವಿಸುವ ಅವಕಾಶವನ್ನು ಯಾವ ಸರಕಾರಗಳೂ ಮಾಡಿಕೊಟ್ಟಿದ್ದಿಲ್ಲ. ಆದರೆ ದೇವರಾಜ ಅರಸು ಅವರ ಕಾಲದಲ್ಲಿ ಐವರು ದಲಿತ ನಾಯಕರನ್ನು ಮಂತ್ರಿ ಮಾಡಿದರು. ನನಗೆ ಈಗ ಅವರ ಹೆಸರುಗಳು... ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಆರ್.ಡಿ.ಕಿತ್ತೂರ್, ರಾಮಸ್ವಾಮಿ, ಶಿವಣ್ಣ ಇರಬಹುದು, ಚೆಕ್ ಮಾಡಿ. ಇದು ಸಾಮಾನ್ಯ ಸಂಗತಿಯಲ್ಲ. ಕರ್ನಾಟಕದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಲಿಂಗಾಯತರು, ಒಕ್ಕಲಿಗರೆಂಬ ಪ್ಯೂಡಲ್ ಗಳದ್ದೇ ದರ್ಬಾರು. ಅವರಿಗೆ ದಲಿತರು ಎಂದರೆ ಅಷ್ಟಕ್ಕಷ್ಟೆ. ಆದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ, ಅಕಾರವನ್ನೂ ಕೊಟ್ಟಿರಲಿಲ್ಲ. ಇದನ್ನು ಖುದ್ದು ಕಂಡಿದ್ದ ದೇವರಾಜ ಅರಸು, 1972ರಲ್ಲಿ ವಿದ್ಯಾವಂತ ದಲಿತರನ್ನು ಹುಡುಕಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ, ಮಂತ್ರಿ ಮಾಡಿದ್ದರು. ಹೀಗೆ ಮಂತ್ರಿ ಮಾಡುವುದರಿಂದ ಆ ಸಮುದಾಯ ಸಾಮಾಜಿಕವಾಗಿ ಎದೆಯುಬ್ಬಿಸಿ ನಡೆಯುವಂತಾಗಿತ್ತು.

ಆದರೆ, ಈ ಬಸವಲಿಂಗಪ್ಪ ಇದ್ದನಲ್ಲ, ಸ್ವಲ್ಪ ಚೇಷ್ಟೆ. ಬಾಯಿ ಬಡುಕ. ಬ್ರಾಹ್ಮಣರ ವಿರುದ್ಧ ಬಹಿರಂಗವಾಗಿಯೇ ಟೀಕೆಗಿಳಿದು ಬಿಡುತ್ತಿದ್ದ. ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಬುದ್ಧಿವಂತ ಕೂಡ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಹೋಗುತ್ತಿದ್ದರೆ, ಈತ ನಮ್ಮತ್ತ ತಿರುಗಿ ಪ್ಯಾಟಿ ಪ್ಯಾಟಿ’ ಅಂತ ಗೇಲಿ ಮಾಡುತ್ತಿದ್ದ. ಅದು ಅರಸುಗೆ ಗೊತ್ತಿತ್ತೋ ಇಲ್ಲವೋ, ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅರಸರಿಗೆ ತಲೆನೋವಾಗಿದ್ದು ಬಸವಲಿಂಗಪ್ಪನ ಬಾಯಿ. ಕನ್ನಡ ಸಾಹಿತ್ಯ ಬೂಸಾ ಎಂದಾಗ ಗಲಾಟೆ ಜೋರಾಯಿತು. ವಿದ್ಯಾರ್ಥಿಗಳು, ಸಾಹಿತಿಗಳು ಬೀದಿ ಗಿಳಿದು ಪ್ರತಿಭಟಿಸಿದರು. ಕೊನೆಗೆ ಬಸವಲಿಂಗಪ್ಪ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಆಗ ಅರಸು, ‘‘ನನ್ನತ್ರ ಇರೋದೆ 32 ಸಾವಿರ ಪೊಲೀಸ್. ಈತ ಬಾಯಿಗೆ ಬಂದಂಗೆ ಮಾತಾಡ್ತಿದ್ರೆ, ಹೋದ ಕಡೇಲೆಲ್ಲ ದೊಂಬಿ, ಗಲಾಟೆ ಮಾಡಿಕೊಂಡು ಬಂದ್ರೆ, ಏನು ಮಾಡೋದು, ಸರಕಾರ ನಡೆಸುವುದು ಹೇಗೆ’’ ಎಂದು ತುಂಬಾನೆ ಪೇಚಾಡಿಕೊಳ್ಳುತ್ತಿದ್ದರು. ಒಂದು ಕಡೆ ಆತನನ್ನು ಸಮರ್ಥಿಸಿಕೊಳ್ಳುವಂತೆಯೂ ಇಲ್ಲ, ಬಿಟ್ಟುಕೊಡುವಂತೆಯೂ ಇಲ್ಲ. ಆದರೂ ಐವರು ದಲಿತರನ್ನು ಮಂತ್ರಿ ಮಾಡಿದ್ದು ಮಾತ್ರ ಅರಸು. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದಾಖಲಾಗಲೇಬೇಕಾದ ಸಂಗತಿ.

ಜಾಲಿ ಮನುಷ್ಯ

ಪ್ಯಾಲೆಸ್ ಗ್ರೌಂಡ್‌ನಲ್ಲೊಂದು ಗೆಸ್ಟ್ ಹೌಸ್ ಇತ್ತು. ಅಲ್ಲಿ ಅರಸರು, ಅವರ ಆಪ್ತರೊಂದಿಗೆ ಕೂತು ಪಟ್ಟಾಂಗ ಹೊಡೆಯು ತ್ತಿದ್ದುದು ಸಾಮಾನ್ಯವಾಗಿತ್ತು. ಅಲ್ಲಿಗೆ ನಾನೂ ಹೋಗಿದ್ದೇನೆ, ಕೂತು ಮಾತನಾಡಿದ್ದೇನೆ. ಪ್ಯಾಲೆಸ್ ಗ್ರೌಂಡ್‌ನಲ್ಲಿಯೇ ಅವರು ಪ್ರತಿದಿನ ವಾಕ್ ಮಾಡುತ್ತಿದ್ದರು. ಕೆಲವು ಸಲ ನನಗೂ ಆ ವಾಕ್‌ಗೆ ಆಮಂತ್ರಣವಿರುತ್ತಿತ್ತು. ಆಗ ಬಿಡಿಎ ಚೇರ್ಮನ್ ಆಗಿದ್ದ ಸೋಮಣ್ಣ ಮತ್ತು ಅರಸರೊಂದಿಗೆ ಒಂದು ದಿನ, ಬೆಳಗಿನ ಜಾವ 4.30ಕ್ಕೆ ನಾನೂ ವಾಕ್ ಮಾಡಲು ಹೋಗಿದ್ದೆ. ಅರಸು ಅಕ್ಕಪಕ್ಕದವರ ಜೊತೆ ಮಾತನಾಡುತ್ತ, ಕೆಲವು ಸಲ ಸುಮ್ಮನೆ ನಡೆಯುತ್ತ ವಾಕ್ ಮಾಡುತ್ತಿದ್ದರು. ವಾಕ್ ಮಾಡುತ್ತಿದ್ದ ದಿನ, ಆ ಪ್ಯಾಲೆಸ್ ಗ್ರೌಂಡ್‌ನಲ್ಲಿ ಹುಲ್ಲು ಕೊಯ್ತಿದ್ದ ಒಕ್ಕಲಿಗರ ಪೈಕಿಯ ಕೆಲವು ಜನ ಅರಸರ ಬಗ್ಗೆ ಕೆಟ್ಟ ಕಾಮೆಂಟ್ ಪಾಸ್ ಮಾಡಿದರು. ಅರಸರು ಕೇಳಿಸಿದರೂ ಕೇಳಿಸದ ಹಾಗೆ, ತಮ್ಮ ಪಾಡಿಗೆ ತಾವು, ಆನೆಯಂತೆ ಸುಮ್ಮನೆ ಹೋಗುತ್ತಿದ್ದರು. ನಾನಾಗಿದ್ದರೆ ಅಲ್ಲೇ ಜಗಳಕ್ಕೆ ನಿಂತುಬಿಡುತ್ತಿದ್ದೇನೇನೋ. ಅರಸು ಮೈಸೂರು ಪೈಲ್ವಾನ್, ಕುಸ್ತಿ ಪಟು. ಅವರಿಗೆ ಆಟದಷ್ಟೇ ಊಟವೂ ಮುಖ್ಯವಾಗಿತ್ತು. ಒಳ್ಳೆ ಊಟ ಮಾಡೋರು. ನಾನ್ ವೆಜ್ ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು.

ಒಂದು ಸಲ ಯಾರದೋ ಮನೆಯಲ್ಲಿ ನಾನ್ ವೆಜ್ ಊಟ. ಅವರನ್ನು ಊಟಕ್ಕೆ ಕೂರಿಸಿ ಮಾಂಸದ ತುಣುಕುಗಳನ್ನು ಹೆಕ್ಕಲು ಸೌಟಿನಲ್ಲಿ ತಿರುಗಿಸುತ್ತಲೇ ಇದ್ದರು. ಅರಸರ ಸಹನೆಯ ಕಟ್ಟೆಯೊಡೆಯಿತು, ‘‘ಅದೇನ್ ಸೌಟ್ನ ಲೊಡ ಲೊಡ ಅಂತ ಸದ್ದು ಮಾಡ್ತಿದೀಯ..ಕೊಡಿಲ್ಲಿ’’ ಎಂದು ಪಾತ್ರೆಯನ್ನೇ ತೆಗೆದು ಸುರಿದುಕೊಂಡಿದ್ದರು. ಅರಸು ಒಳ್ಳೆಯ ಪುಟ್‌ಬಾಲ್ ಪ್ಲೇಯರ್. ಎಡಗಾಲಿನ ಮೂಳೆ ಮುರಿದಿತ್ತು. ಆದರೂ ಬಿಡದೆ ಆಡುತ್ತಿದ್ದರು. ಅರಸರಿಗೆ ಓದುವ ಹ್ಯಾಬಿಟ್ ಇತ್ತು. ಮನೆಯಲ್ಲಿ ಪುಟ್ಟ ಲೈಬ್ರರಿ ಇಟ್ಟುಕೊಂಡಿದ್ದರು. ನಾಡಿನ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳ ಅರಿವಿತ್ತು. ಯಾರಾದರೂ ಬಂದು ಆ ಪುಸ್ತಕ ಚೆನ್ನಾಗಿದೆ ಎಂದರೆ, ಜಗತ್ತಿನ ಯಾವ ಮೂಲೆ ಯಲ್ಲಿದ್ದರೂ ಸರಿ, ತರಿಸಿ ಓದುತ್ತಿದ್ದರು. ಒಳ್ಳೆಯದು ಎಲ್ಲಿಂದ ಬಂದರೂ ಬರಲಿ ಎನ್ನುವ ಸ್ವಭಾವ. ಅವರು ಯಾವಾಗಲೂ ಒಂದು ಜೋಕ್ ಹೇಳುತ್ತಿದ್ದರು, ‘‘ರಾಗಿ ಅಂಬ್ಲಿ ಕುಡಿಯೋನೂ ಅರಸು; ಸುಖದ ಸುಪ್ಪತ್ತಿಗೆಯಲ್ಲಿ ಇರೋನೂ ಅರಸು’’. ಇದು ಆ ಕ್ಷಣಕ್ಕೆ ಸುತ್ತಲಿದ್ದವರಿಗೆ ಜೋಕ್ ಥರ ಕೇಳಿಸಿದರೂ, ಬಹಳ ದೊಡ್ಡದನ್ನು ಅರ್ಥೈಸುತ್ತಿತ್ತು. ಮೈಸೂರು ಮಹಾರಾಜರು, ಕಲ್ಲಳ್ಳಿಯ ಕೃಷಿಕ, ಮುಖ್ಯಮಂತ್ರಿ... ಎಲ್ಲವನ್ನೂ ಒಳಗೊಂಡ, ಎಲ್ಲವನ್ನೂ ಅನುಭವಿಸಿದವನ ಅರ್ಥಗರ್ಭಿತ ಮಾತು.

ಕಂಡಿದೀನಿ ಕೂತ್ಕೊಳ್ರಿ...

ದೇವರಾಜ ಅರಸರು ಸದನದಲ್ಲಿದ್ದಾರೆಂದರೆ, ಅದಕ್ಕೊಂದು ಕಳೆ. ಆ ವ್ಯಕ್ತಿತ್ವವೇ ಅಂಥಾದ್ದು. ನನಗಿನ್ನೂ ನೆನಪಿದೆ... ಅವರು ಭೂ ಸುಧಾರಣೆ ಕಾಯ್ದೆಯನ್ನು ಪರಿಷತ್ತಿನಲ್ಲಿ ಮಂಡಿಸಿ, ಜಾರಿ ಗೊಳಿಸುವ ದಿನ, ಸದನದ ಹೊರಗೆ ಕೈಯಲ್ಲೊಂದು ರೂಲರ್ ಹಿಡಿದು ಅತ್ತಿಂದಿತ್ತ, ಇತ್ತಿಂದತ್ತ, ಬೋನಿನಲ್ಲಿ ಸಿಂಹ ಸುತ್ತುವ ಹಾಗೆ ಸುತ್ತಾಕುತ್ತಿದ್ದರು. ಅವರನ್ನು ಆ ಸಂದರ್ಭದಲ್ಲಿ ಮಾತನಾಡಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅಂದರೆ, ನನ್ನ ಕನಸಿನ ಕಾಯ್ದೆ, ಜಾರಿಯಾಗುವ ಕ್ಷಣದಲ್ಲಿ ಏನಾದರೂ ಅಡೆ-ತಡೆಗಳು ಎದುರಾಗಬಹುದೆ, ಎನ್ನುವ ಆತಂಕದಲ್ಲಿದ್ದರು. ಆದರೆ ಅಂಥಾದ್ದು ಏನು ಆಗಲಿಲ್ಲ. ಸದನದಲ್ಲಿ ಯಾರ ಮಾತಿಗೂ, ಪ್ರಶ್ನೆಗೂ, ಕಟಕಿಗೂ ಕೇರ್ ಮಾಡುತ್ತಿರಲಿಲ್ಲ. ಎಲ್ಲದಕ್ಕೂ ಒಂದೇ ಉತ್ತರ, ‘‘ಕೂತ್ಕೊಳ್ರಿ ಗೊತ್ತು... ಎಲ್ಲಾ ಕಂಡಿದೀನಿ, ಕೂತ್ಕೊಳ್ರಿ’’ ಎಂದರೆ, ಎದುರಿಗಿದ್ದವರು ಬೆಪ್ಪಾಗಿ ಬಿಡುತ್ತಿದ್ದರು.

ಲಿಂಗಾಯತರು-ಬ್ರಾಹ್ಮಣರನ್ನು ಕಂಡರೆ ಅರಸರಿಗೆ ಅಷ್ಟಕ್ಕಷ್ಟೆ. ಲಿಂಗಾಯತರು ಸ್ವಲ್ಪ ಕಾಟ ಕೊಟ್ಟಿದ್ದರು. ಅದಕ್ಕಾಗಿ ಅವರಿಗೆ ಎಲ್ಲಿ ಕೊಡಬೇಕೋ ಅಲ್ಲಿ ಏಟು ಕೊಡುತ್ತಿದ್ದರು. ಮಾತುಕತೆ ಚೆನ್ನಾಗಿಲ್ಲದಿದ್ದರೆ ಚೆನ್ನಾಗಿರದು, ಒರಟಾದ್ರೆ ಅವರೂ ಒರಟು. ಇನ್ನು ಒಕ್ಕಲಿಗರು ಅರಸರೊಂದಿಗೆ ರಾಜಕೀಯವಾಗಿ ಜಿದ್ದಾಜಿದ್ದಿಗೆ ಬೀಳಲಿಲ್ಲ, ಹೊಂದಾಣಿಕೆ ಮಾಡಿಕೊಂಡಿದ್ದೇ ಹೆಚ್ಚು.
 ರಾಜಕೀಯವಾಗಿ ಅಕಾರದಲ್ಲಿ ಉಳಿದುಕೊಳ್ಳಲು ಏನೆಲ್ಲ ತಂತ್ರಗಳನ್ನು ಮಾಡುತ್ತಿದ್ದರೂ, ಭೂ ಸುಧಾರಣೆ, ಮೀಸಲಾತಿ, ಕರ್ನಾಟಕ ನಾಮಕರಣ, ಜೀತಮುಕ್ತದಂತಹ ಕಾಯ್ದೆಗಳನ್ನು ಜಾರಿಗೆ ತರುವಾಗ, ‘ಜನಕ್ಕೆ ಬೇಕಾದ್ದು ಮಾಡುವಾಗ ಯಾಕೆ ಹಿಂಜರಿಕೆ’ ಎನ್ನುತ್ತಿದ್ದರು. ನನ್ನ ಪ್ರಕಾರ ಅದೇ ಅರಸರ ದಿಟ್ಟತೆ ಮತ್ತು ೀಮಂತಿಕೆ.

ಹೇಳಿದಷ್ಟು ಮಾಡ್ರಿ...

ವಿಧಾನ ಸೌಧದ ಪತ್ರಿಕಾಗೋಷ್ಠಿಗಳಲ್ಲಿ ದೇವರಾಜ ಅರಸು, ಡಿಗ್ನಿೈಡ್ ಆಗಿ ನಡೆದುಕೊಳ್ಳುತ್ತಿದ್ದರು. ಶ್ರೀನಿವಾಸನ್ ಎಂಬ ಕೇರಳ ಮೂಲದ ಹಿಂದುಳಿದ ಜಾತಿಗೆ ಸೇರಿದವರನ್ನು ಪ್ರೆಸ್ ಸೆಕ್ರೆಟರಿಯನ್ನಾಗಿಸಿಕೊಂಡಿದ್ದರು. ಯಾವ ಪತ್ರಿಕೆಯ ಪತ್ರಕರ್ತರಿಗೂ ಹೆದರುತ್ತಿರಲಿಲ್ಲ. ಯಾರನ್ನೂ ಹಚ್ಚಿಕೊಂಡಿದ್ದಿಲ್ಲ, ಓಲೈಸುತ್ತಲೂ ಇರಲಿಲ್ಲ. ಒಂದು ಸಲ ಪ್ರಜಾವಾಣಿಯ ಟಿ.ಎಸ್.ರಾಮಚಂದ್ರರಾಯರು ಯಾವುದೋ ವಿಷಯಕ್ಕೆ, ‘‘ಅದು ಹಾಗಲ್ಲ’’ ಎಂದರು. ಅದಕ್ಕೆ ಅರಸರು ತಣ್ಣಗೆ, ‘‘ನೀವು ನಿಮ್ಮ ಕೆಲಸ ಸರಿಯಾಗಿ ಮಾಡಿ’’ ಎಂದು ಒಂದೇ ಮಾತಿನಲ್ಲಿ ಉತ್ತರಿಸಿ ಅವರ ಬಾಯಿ ಮುಚ್ಚಿಸಿದ್ದರು. ಟಿಎಸ್ಸಾರ್‌ಗಷ್ಟೇ ಅಲ್ಲ, ಯಾವ ಪತ್ರಕರ್ತರ ಮುಲಾಜಿಗೂ ಒಳಗಾಗಿದ್ದಿಲ್ಲ. ಪತ್ರಿಕಾಗೋಷ್ಠಿಗಳಲ್ಲೂ ಅಷ್ಟೆ... ಯಾರಾದರೂ ಕೊಂಕು ಮಾತನಾಡಿದರೆ, ಬೇಡದ ಪ್ರಶ್ನೆ ಕೇಳಿದರೆ, ‘‘ಹೇಳಿದಷ್ಟು ಮಾಡ್ರಿ, ನಾನ್ಯಾಕೆ ಸಿಎಂ ಆಗಿರೋದು..’’ ಎಂದುಬಿಡುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ದೇವರಾಜ ಅರಸು ಯಾರಿಗಾದರೂ ತಗ್ಗಿ-ಬಗ್ಗಿ ನಡೆದುಕೊಂಡಿದ್ದಾರೆಂದರೆ ಅದು, ಇಂದಿರಾಗಾಂಗೆ ಮಾತ್ರ. ಅವರನ್ನು ಕಂಡರೆ ಅರಸರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ.

ಅವರ ವೆಲ್‌ಕಮ್ ಸ್ಪೀಚ್‌ನಲ್ಲಿ ಕಮಾ,ಪುಲ್‌ಸ್ಟಾಪ್‌ಗಳನ್ನೂ ಬಿಡದೆ ಹೇಳುತ್ತಿದ್ದರು. ಅಷ್ಟು ವಿನಯತೆ. ಇಂದಿರಾಗಾಂ ಬೆಂಗಳೂರಿಗೆ ಬಂದರೆ, ಅದೇ ಅರಸರ ಫಿಯೆಟ್ ಕಾರಿನಲ್ಲಿಯೇ ಓಡಾಡಬೇಕಿತ್ತು. ಅದು ಚಿಕ್ಕದು. ಆದರೂ ಬೇಸರಿಸಿಕೊಳ್ಳದೆ ಓಡಾಡುತ್ತಿದ್ದರು. ಚಿಕ್ಕಮಗಳೂರು ಎಲೆಕ್ಷನ್ ಗೆದ್ದಮೇಲೆ, ಅರಸರನ್ನು ದಿಲ್ಲಿಗೆ ಕರೆಸಿಕೊಂಡ ಇಂದಿರಾಗಾಂ ಬೆನ್ಝ್ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಅಂದರೆ ಅವರಿಗೂ ಅರಸು ಕಂಡರೆ ಅಷ್ಟೇ ಅಕ್ಕರೆ. ಇಷ್ಟಿದ್ದರೂ ಅವರ ನಡುವೆ ಬಿರುಕುಂಟಾಯಿತು. ಅವರವರ ಅನುಕೂಲಕ್ಕೆ ಸರಿ ಬರಲಿಲ್ಲ ಎಂದಾಗ, ಇಬ್ಬರೂ ಬೇರೆ ಬೇರೆಯಾದರು.

ನಾನು ಗಟ್ಟಿಗ

ಕರ್ನಾಟಕದ ರಾಜಕಾರಣ ಅಂದರೆ ಲಿಂಗಾಯತರು ಮತ್ತು ಒಕ್ಕಲಿಗರದೇ ಪ್ರಾಬಲ್ಯ. ಅವರೇ ಮುಖ್ಯಮಂತ್ರಿಗಳು, ಮಂತ್ರಿಗಳು. ಆದರೆ ದೇವರಾಜ ಅರಸು ಬಂದ ನಂತರ ರಾಜಕೀಯ ಕ್ಷೇತ್ರವಷ್ಟೇ ಅಲ್ಲ, ರಾಜ್ಯದ ಸಾಮಾಜಿಕ ಚಿತ್ರಣವೂ ಬದಲಾಯಿತು. ಎಲ್.ಜಿ. ಹಾವನೂರ್ ತುಂಬಾ ಒಳ್ಳೆಯ ಲಾಯರ್. ಹಿಂದುಳಿದ ಜಾತಿಗಳ ಅವರ ಸರ್ವೇ ಅವತ್ತಿಗೆ ತೀರಾ ಅಗತ್ಯವಾಗಿತ್ತು. ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದ್ದು ಆ ಸಮುದಾಯಗಳ ಏಳಿಗೆಗೆ ಕಾರಣವಾಯಿತು. ಹಾವನೂರರ ವರದಿಯನ್ನು ಒಂದೊಂದಾಗಿ ಜಾರಿಗೆ ತರುವ ನಿಟ್ಟಿನಲ್ಲಿ, ಮೂರೂವರೆ ಪರ್ಸೆಂಟ್ ಇದ್ದ ಬ್ರಾಹ್ಮಣರು ಕೊಂಚ ತೊಡಕಾಗಿದ್ದುಂಟು. ಅದರಲ್ಲೂ ಅರಸರ ಕ್ಯಾಬಿನೆಟ್‌ನಲ್ಲಿ ಶಿಕ್ಷಣ ಸಚಿವರಾಗಿದ್ದ ಬದರಿ ನಾರಾಯಣ, ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ತರಲು ಅಡ್ಡಿಪಡಿಸುತ್ತಿದ್ದರು. ಸುಮ್ಮಸುಮ್ಮನೆ ಕ್ವಯರಿ ಹಾಕುತ್ತಿದ್ದರು. ಅದೇ ರೀತಿ ಹೊಸ ಹೊಸ ಕಾಯ್ದೆಗಳನ್ನು ತಂದಾಗ ಸುದ್ದಿ ಮಾಧ್ಯಮಗಳು ದೇವರಾಜ ಅರಸರ ಪರವಿರಲಿಲ್ಲ. ಆ ಕಾಯ್ದೆಗಳು ಜನಪರವಾಗಿದ್ದರೂ, ಅವುಗಳನ್ನು ಜಾರಿಗೆ ತರಬೇಕಾದರೆ ಬಹಳ ಕಷ್ಟ ಅಂತ ಗೊತ್ತಿದ್ದರೂ, ಅರಸರ ಸರಕಾರವನ್ನು, ಮುಖ್ಯಮಂತ್ರಿ ಅರಸರನ್ನು ವೀಕ್ ಅಂತ ತೋರಿಸಲಿಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು.

  ಆಗ ನಾನು ಅರಸರಿಗೆ, ‘ಲೀಗಲ್ ಸೈಡ್‌ನಿಂದ ಹಾವನೂರು ಇದ್ದಾರೆ, ಬಡವರ ಪರ ನೀವಿದ್ದೀರಿ, ಮುನ್ನುಗ್ಗಿ’ ಎಂದು ಹೇಳಿದ್ದೆ. ಹೀಗೆಯೇ ನನ್ನ-ಅವರ ಮೀಟಿಂಗ್‌ನಲ್ಲಿ, ಅವರು ಒಂದು ಮಾತು ಹೇಳಿದ್ದರು. ‘ನಾನು ಸಣ್ಣ ಸಮುದಾಯದಿಂದ ಬಂದವನು, ಇಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕಾದರೆ, ನಾನು ಗಟ್ಟಿಗನಿದ್ದೇನೆ, ಇಲ್ಲದೆ ಇರ್ತಿದ್ರೆ ಆಗ್ತಿರಲಿಲ್ಲ. ನಾನು ಗಟ್ಟಿಗನಿದ್ದೇನೆ.’ ಎಂದು ಭುಜ ಕುಣಿಸಿ ಹೇಳಿದ್ದರು. ಅದು ಸುಮ್ಮನೆ ಆಡಿದ ಮಾತಲ್ಲ. ಆ ಮಾತಿನ ಹಿಂದೆ, ಕರ್ನಾಟಕದ ಜಾತಿ ರಾಜಕಾರಣ, ಬಹುಸಂಖ್ಯಾತರ ಅಟ್ಟಹಾಸ, ಶ್ರೀಮಂತರ ದಬ್ಬಾಳಿಕೆ ಎಲ್ಲವೂ ಅಡಗಿದೆ. ಅದೆಲ್ಲವನ್ನೂ ಮೆಟ್ಟಿ ನಿಂತ ಅರಸು, ಒಂದು ಅರ್ಥದಲ್ಲಿ ಸ್ಟ್ರೀಮ್ ರೋಲರ್ ಥರ ಇದ್ದರು. ಹಾಗಿದ್ದರಿಂದಲೇ ನಿಜವಾದ ಹಿಂದುಳಿದ ನಾಯಕನಾಗಿ ಉಳಿದರು.

ನಾಲ್ಕು ಲಕ್ಷ ಇದ್ದಿದ್ದರೆ...
ಅರಸು ಅಕಾರ ಕಳೆದುಕೊಂಡು ಮನೆಯಲ್ಲಿ ಒಬ್ಬರೇ ಇದ್ದಾಗೊಮ್ಮೆ ನಾನವರನ್ನು ನೋಡಲು ಹೋಗಿದ್ದೆ. ಅದೂ ಇದೂ ಮಾತಾಡಿದ ಅರಸು, ‘‘ನಾಲ್ಕು ಲಕ್ಷ ನನ್ನ ಹತ್ರ ಇದ್ದಿದ್ರೆ, ನಾನೇ ಮತ್ತೊಮ್ಮೆ ಸಿಎಂ...’’ ಎಂದರು. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆದರೆ ಮಾಧ್ಯಮಗಳು ಅವರಿಗೆ ಭ್ರಷ್ಟನ ಪಟ್ಟ ಕಟ್ಟಿದ್ದವು. ಭ್ರಷ್ಟಾಚಾರದ ಗಂಗೋತ್ರಿ ಎಂದು ವಿರೋಧ ಪಕ್ಷಗಳು ಸಿಬಿಐ ತನಿಖೆ ಮಾಡಿಸಿದ್ದವು. ಅವರಿಂದ ಅಕಾರ ಮತ್ತು ಅನುಕೂಲ ಪಡೆದವರು ದೂರಾಗಿದ್ದರು.
ಇಂತಹ ದೇವರಾಜ ಅರಸು ಕರ್ನಾಟಕಕ್ಕೆ ಒಬ್ಬರೆ. ಮತ್ತೊಬ್ಬ ಅರಸು ಹುಟ್ಟಿ ಬರಲು ಸಾಧ್ಯವೇ ಇಲ್ಲ.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News