ದಲಿತ ದೌರ್ಜನ್ಯ ಕಾಯ್ದೆಯಡಿ ಶಾಲಾ ಗುಮಾಸ್ತನಿಗೆ ಒಂದು ದಿನದ ಜೈಲುಶಿಕ್ಷೆ
ಥಾಣೆ,ಸೆ.14: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿದ 2010ರ ಪ್ರಕರಣದಲ್ಲಿ ಖಾಸಗಿ ಶಾಲೆಯ ಉದ್ಯೋಗಿಯೋರ್ವನಿಗೆ ಇಲ್ಲಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಂದು ದಿನದ ಜೈಲುಶಿಕ್ಷೆಯನ್ನು ವಿಧಿಸಿದೆ.
ನ್ಯಾ.ವಿ.ವಿ.ಬಂಬಾರ್ಡೆ ಅವರು ದೋಷಿ, ಕಲ್ವಾದ ಪಾಂಡುರಂಗ ವಿದ್ಯಾಲಯದಲ್ಲಿ ಗುಮಾಸ್ತೆಯಾಗಿರುವ ಲಾಲಚಂದ್ರ ಚೌಬೆ (28)ಗೆ ಒಂದು ದಿನದ ಜೈಲುಶಿಕ್ಷೆಯನ್ನು ವಿಧಿಸಿದರಾದರೂ ಬಳಿಕ ಸಂಜೆಯವರೆಗೂ ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದರು. ಚೌಬೆಗೆ 5,000 ರೂ. ದಂಡವನ್ನೂ ನ್ಯಾಯಾಲಯವು ವಿಧಿಸಿದೆ.
2010,ಜೂ.23ರಂದು ಚೌಬೆ ಶಾಲೆಯಲ್ಲಿ ಸಂಬಳ ವಿತರಿಸುತ್ತಿದ್ದಾಗ ಕೆಲವು ಶಿಕ್ಷಕರು ತಮ್ಮ ಬಾಕಿ ಸಂಬಳದ ಬಗ್ಗೆ ಕೇಳಿದ್ದರು. ಇದರಿಂದ ಸಹನೆ ಕಳೆದುಕೊಂಡ ಚೌಬೆ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು,ಜಾತಿ ನಿಂದನೆಯನ್ನು ಮಾಡಿದ್ದ.
ಆರೋಪಿಯು ಶಾಲಾಡಳಿತಕ್ಕೆ ಸಂಬಂಧಿಸಿ ದವನಾಗಿದ್ದು, ಶಿಕ್ಷಕರೊಂದಿಗೆ ಸೌಹಾರ್ದತೆ ಯಿಂದ ಇರುವುದಾಗಿ ಭರವಸೆ ನೀಡಿದ್ದಾನೆ. ಆತನಿಗೆ ಕುಟುಂಬದ ಹೊಣೆಗಾರಿಕೆ ಇರುವುದನ್ನೂ ನ್ಯಾಯಾಲಯವು ಗಮನಿಸಿದೆ. ಈ ಹಿನ್ನಲೆಯಲ್ಲಿ ಲಘು ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ ಎಂದು ನ್ಯಾ.ಬಂಬಾರ್ಡೆ ತಿಳಿಸಿದರು.