×
Ad

ಕಾವೇರಿ ವಿವಾದ: ತಮಿಳುನಾಡು ಬಂದ್; ಡಿಎಂಕೆ ನಾಯಕರು ಪೊಲೀಸರ ವಶಕ್ಕೆ

Update: 2016-09-16 23:59 IST

ಚೆನ್ನೈ,ಸೆ.16: ಕಾವೇರಿ ವಿವಾದಕ್ಕೆ ಸಂಬಂಧಿಸಿ ರೈತರು ಮತ್ತು ವ್ಯಾಪಾರಿಗಳು ಶುಕ್ರವಾರ ಕರೆ ನೀಡಿದ್ದ 12 ಗಂಟೆಗಳ ತಮಿಳುನಾಡು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಪಕ್ಷಗಳು ಬಂದನ್ನು ಬೆಂಬಲಿಸಿದ್ದು, ಪ್ರತಿಭಟನೆಗಳನ್ನು ನಡೆಸುತ್ತಿದ್ದ ಡಿಎಂಕೆಯ ಎಂ.ಕೆ.ಸ್ಟಾಲಿನ್ ಮತ್ತು ಕನಿಮೋಳಿ ಸೇರಿದಂತೆ ಹಲವಾರು ನಾಯಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತನ್ಮಧ್ಯೆ, ನಿನ್ನೆ ಕಾವೇರಿ ವಿವಾದದ ಹಿನ್ನೆಲೆೆಯಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದ ನಾಮ್ ತಮಿಳರ್ ಕಚ್ಚಿ ಕಾರ್ಯಕರ್ತನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಬಂದ್ ಕರೆಗೆ ಸ್ಪಂದಿಸಿ ಕೊಯಮತ್ತೂರು, ತಿರುಪುರ ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಹಲವು ಅಂಗಡಿ-ಮುಂಗಟ್ಟುಗಳು, ಉದ್ಯಮ ಕಚೇರಿಗಳು ಮುಚ್ಚಿದ್ದು ಸಾಮಾನ್ಯ ಜನಜೀವನ ವ್ಯತ್ಯಯಗೊಂಡಿತ್ತು.

ಚೆನ್ನೈ ಮತ್ತು ಸುತ್ತಲಿನ ಸುಮಾರು 20,000 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿದ್ದು, ಸಿದ್ಧಉಡುಪುಗಳ ಕೇಂದ್ರ ತಿರುಪುರದಲ್ಲಿ 30,000ಕ್ಕೂ ಅಧಿಕ ಗಾರ್ಮೆಂಟ್ ಫ್ಯಾಕ್ಟರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಬಾಗಿಲೆಳೆದಿದ್ದವು.

ಚೆನ್ನೈನಲ್ಲಿ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಡಿಎಂಕೆ ಖಜಾಂಚಿ ಸ್ಟಾಲಿನ್, ಎಗ್ಮೋರ್ ರೈಲು ನಿಲ್ದಾಣದಲ್ಲಿ ರೈಲು ತಡೆಗೆ ವಿಫಲ ಯತ್ನ ನಡೆಸಿದ ಬಳಿಕ ನಿಲ್ದಾಣದ ಎದುರು ಧರಣಿ ಕುಳಿತಿದ್ದರು. ಪೊಲೀಸರು ಸ್ಟಾಲಿನ್ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು.

ನಗರದ ಅಣ್ಣಾ ಸಲೈನಲ್ಲಿ ರಸ್ತೆ ತಡೆಯನ್ನು ನಡೆಸಿದ ಬಳಿಕ ಕಾವೇರಿ ವಿವಾದ ಕುರಿತಂತೆ ಮದುವೆ ಸಭಾಂಗಣವೊಂದರಲ್ಲಿ ಸರ್ವಪಕ್ಷ ಸಭೆಯನ್ನು ನಡೆಸಲು ಮುಂದಾಗಿದ್ದ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಮತ್ತು ಪಕ್ಷದ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಕೊಯಮತ್ತೂರಿನಲ್ಲಿ ರೈಲು ತಡೆ ಮತ್ತು ರಸ್ತೆ ತಡೆ ನಡೆಸಲು ಮುಂದಾಗಿದ್ದ ಡಿಎಂಕೆ,ಎಂಡಿಎಂಕೆ ಮತ್ತು ರೈತರ ಸಂಘಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಿರಿಯ ನಾಯಕರನ್ನು ಪೊಲೀಸರು ಬಂಧಿಸಿದರು.

ಬಂದ್ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳ ಕಾರ್ಯ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ವನ್ನು ಬೀರಲಿಲ್ಲ. ಸರಕಾರಿ ಬಸ್‌ಗಳು ಮತ್ತು ರೈಲುಗಳ ಸಂಚಾರ ಎಂದಿನಂತೆ ಇತ್ತು. ಆಟೊರಿಕ್ಷಾಗಳು, ಟ್ಯಾಕ್ಸಿಗಳು ಮತ್ತು ಸರಕು ಸಾಗಣೆ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News