ತಣ್ಣಗಾದ ಅಖಿಲೇಶ್, ಎಸ್ಪಿ ಪರಿ‘ವಾರ್’ ಗೆ ತಾತ್ಕಾಲಿಕ ತೇಪೆ
ಹೊಸದಿಲ್ಲಿ,ಸೆಪ್ಟಂಬರ್ 17: ಸಮಾಜವಾದಿ ಪಾರ್ಟಿಯಲ್ಲಿ ಭುಗಿಲೆದ್ದಿದ್ದ ಕುಟುಂಬ ಕಲಹ ತಾತ್ಕಾಲಿಕ ಸುಖಾಂತ್ಯಕಂಡಿದೆ ಎಂದು ವರದಿಯಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್‌ರ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರಿಬ್ಬರ ನಡುವೆ ರಾಜಿ ಏರ್ಪಡಿಸಿದ್ದಾರೆ.ಪಾರ್ಟಿಯ ಸಂಸದರ ಸಭೆಯಲ್ಲಿ ಮುಲಾಯಂ ಸಿಂಗ್ ತಾನು ತಮ್ಮ ಶಿವಪಾಲ್ ಯಾದವ್‌ರನ್ನು ಬೆಂಬಲಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಅಖಿಲೇಶ್ ಸುಮ್ಮನಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತೆಂದು ವರದಿ ತಿಳಿಸಿದೆ.
ತನ್ನ ವಿಶ್ವಸ್ಥ ಅಧಿಕಾರಿಗಳನ್ನು ವರ್ಗಾಯಿಸಿದ್ದು ಮತ್ತು ಮಂತ್ರಿಮಂಡಲದಲ್ಲಿ ತಾನು ಹೊಂದಿದ್ದ ಕೆಲವು ಪ್ರಮುಖ ಸಚಿವಸ್ಥಾನಗಳನ್ನು ಅಖಿಲೇಶ್ ಕಿತ್ತುಹಾಕಿದ ನಂತರ ಶಿವಪಾಲ್ ಅಖಿಲೇಶ್ ವಿರುದ್ಧ ಪ್ರತಿಭಟಿಸಿ ಸಚಿವಸ್ಥಾನ ಮತ್ತು ಪಾರ್ಟಿಯ ರಾಜ್ಯಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಆದರೆ,ಕಿತ್ತುಕೊಂಡ ಸಚಿವ ಸ್ಥಾನಗಳನ್ನು ಮರಳಿ ಕೊಡಬೇಕು.ಸಚಿವಸಂಪುಟದಿಂದ ವಜಾಗೊಳಿಸಿದ ಗಾಯತ್ರಿ ಪ್ರಸಾದ್ ಪ್ರಜಾಪತಿಯನ್ನು ಖಾತೆ ಬದಲಾಯಿಸಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮುಲಾಯಂ ಸೂಚಿಸಿದ್ದು ಇದಕ್ಕೆ ಅಖಿಲೇಶ್ ಸಮ್ಮತಿಸಿದ್ದಾರೆ. ಇದರೊಂದಿಗೆ ಶಿವಪಾಲ್ ಯಾದವ್ ತನ್ನ ರಾಜೀನಾಮೆಯನ್ನು ವಾಪಸು ಪಡೆದಿರುವುದಾಗಿ ಘೋಷಿಸಿದರು ಎಂದು ವರದಿ ವಿವರಿಸಿದೆ.