"ಅತ್ತೆಗೊಂದು ಕಾಲ" ಇಲ್ಲ ಎಂದ ಕೇಂದ್ರ ಸರಕಾರ !
ನವದೆಹಲಿ, ಸೆ.17: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಕಾಯಿದೆ 2005 ಅನ್ವಯ ಮಹಿಳೆ (ತಾಯಿ) ಅಥವಾ ಆಕೆಯ ಪುತ್ರಿ ತನ್ನ ಪುತ್ರ ಅಥವಾ ಸಹೋದರನ ವಿರುದ್ಧ ಪ್ರಕರಣ ದಾಖಲಿಸಬಹುದೇ ಹೊರತು ಆಕೆಯ ಸೊಸೆ ಅಥವಾ ನಾದಿನಿಯ ವಿರುದ್ಧ ದಾಖಲಿಸುವ ಹಾಗಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಶುಕ್ರವಾರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಿದೆ. ಒಂದು ಮಹಿಳೆಯ ಹಕ್ಕನ್ನು ಇನ್ನೊಬ್ಬಳು ಹತ್ತಿಕ್ಕದಂತೆ ಮಾಡುವ ಉದ್ದೇಶ ಇದರ ಹಿಂದಿದೆಯೆಂದು ಹೇಳಲಾಗಿದೆ.
ಇದರರ್ಥಈ ಕಾಯಿದೆಯನ್ವಯ ಪುರುಷನೊಬ್ಬನ ಮೇಲೆ ಆತನ ಪತ್ನಿ ಅಥವಾ ಸಂಗಾತಿಯಲ್ಲದೆ ಆತನ ತಾಯಿ ಅಥವಾ ಸಹೋದರಿ ಕೂಡ ಪ್ರಕರಣ ದಾಖಲಿಸಬಹುದಾಗಿದೆ.
ಈ ಕಾಯಿದೆಯನ್ವಯ ಸಾಮಾನ್ಯವಾಗಿಕೌಟುಂಬಿಕ ಹಿಂಸೆ ಹಾಗೂ ವರದಕ್ಷಿಣೆ ಹಿಂಸೆ ಅನುಭವಿಸುವ ಮಹಿಳೆಯರು ತಮ್ಮ ಗಂಡಂದಿರು ಹಾಗೂ ಅತ್ತೆ ಮಾವಂದಿರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು.
ಅತ್ತೆಯೊಬ್ಬಳು ತನ್ನ ಸೊಸೆಯ ವಿರುದ್ಧ ಮೇಲಿನ ಕಾಯಿದೆಂಯನ್ವಯ ಕ್ರಮ ಕೈಗೊಳ್ಳುವಂತೆ ಕೋರಬಹುದೇ ಎಂಬ ವಿಚಾರದಲ್ಲಿ ಸ್ಪಷ್ಟೀಕರಣ ನೀಡುವಂತೆ ಜಸ್ಟಿಸ್ ರಂಜನ್ ಗೋಗೊಯಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಕಳೆದ ಡಿಸಂಬರ್ ತಿಂಗಳಲ್ಲಿ ಕೇಂದ್ರಕ್ಕೆ ನೊಟೀಸ್ ಜಾರಿಗೊಳಿಸಿತ್ತು. ಮುಂಬೈನ ಮಹಿಳೆಯೊಬ್ಬಳು ತನ್ನ ವಿರುದ್ಧ ಕಾನೂನು ಕ್ರಮದಿಂದ ರಕ್ಷಿಸಬೇಕೆಂದು ಕೋರಿ ನ್ಯಾಯಾಲಯದ ಕದವನ್ನು ಕಳೆದ ವರ್ಷ ತಟ್ಟಿದ್ದಳು. ಇದಕ್ಕೂ ಮುಂಚೆ ಸೆಪ್ಟೆಂಬರ್ 2015 ರಲ್ಲಿ ಬಾಂಬೆ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಆಕೆಯ ವಿರುದ್ಧ ಆಕೆಯ ಅತ್ತೆಯ ದೂರಿನನ್ವಯ ಈ ಕಾಯಿದೆಯನ್ವಯ ಕ್ರಮ ಕೈಗೊಳ್ಳಬಹುದೆಂದು ಹೇಳಿತ್ತು. ವಿವಾಹಿತ ಮಹಿಳೆಯರನ್ನು ರಕ್ಷಿಸಲಷ್ಟೇ ಈ ಕಾನೂನು ಸೀಮಿತವಾಗಿಲ್ಲ ಎಂದು ನ್ಯಾಯಾಲಯ ಹೇಳಿತ್ತು.