ಸಚಿವ ನಡ್ಡಾಗೆ ಮಸಿ ಎರಚಿದ ವಿದ್ಯಾರ್ಥಿಗಳು
ಭೋಪಾಲ,ಸೆ.17: ಇಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್ ಭೋಪಾಲ)ಯಲ್ಲಿ ಸೌಲಭ್ಯಗಳ ಕೊರತೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಶನಿವಾರ ಸಂಸ್ಥೆಗೆ ಭೇಟಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರ ಮೇಲೆ ಕಪ್ಪುಮಸಿಯನ್ನು ಎರಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ ಸಚಿವರು ಏಮ್ಸ್ ಕ್ಯಾಂಪಸ್‌ನಿಂದ ಕಾರಿನಲ್ಲಿ ನಿರ್ಗಮಿಸುತ್ತಿದ್ದಾಗ ಮಾರ್ಕ್‌ರ್ ಶಾಯಿಯನ್ನು ಎರಚಲಾಗಿತ್ತು. ಘಟನೆಯ ಬಳಿಕ ಸಚಿವರ ಕಾರುಗಳ ಸಾಲು ನಿಲ್ಲದೆ ಮುಂದಕ್ಕೆ ಸಾಗಿತು.
ಏಮ್ಸ್ ಆರಂಭಗೊಂಡು 13 ವರ್ಷಗಳಾಗಿದ್ದರೂ ಅರ್ಧದಷ್ಟು ವಿಭಾಗಗಳು ಇನ್ನೂ ಆರಂಭಗೊಂಡಿಲ್ಲ. ನಾವು ಪ್ರತಿಭಟನೆ ನಡೆಸಿ ನಮ್ಮ ನ್ಯಾಯೋಚಿತ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿದಾಗೆಲ್ಲ ನಮ್ಮ ಧ್ವನಿಯನ್ನು ಅಡಗಿಸಲಾಗುತ್ತದೆ ಎಂದು ಮೂರನೆ ವರ್ಷದ ವಿದ್ಯಾರ್ಥಿಯೋರ್ವ ಸುದ್ದಿಗಾರರಿಗೆ ತಿಳಿಸಿದ.
ಸುಮಾರು 50 ರಷ್ಟಿದ್ದ ವಿದ್ಯಾರ್ಥಿಗಳು ಸಚಿವರ ಕಾರನ್ನು ತಡೆಯಲು ಯತ್ನಿಸಿದಾಗ ಅವರನ್ನು ಚದುರಿಸಲು ಪೊಲೀಸರು ಬಲ ಪ್ರಯೋಗಿಸಿದ್ದರು. ಈ ಸಂದರ್ಭ ಸಂಭವಿಸಿದ ನೂಕಾಟದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಬಿದ್ದು ಗಾಯಗೊಂಡರು.
ನಡ್ಡಾ ಕಳೆದ 13 ವರ್ಷಗಳಲ್ಲಿ ಏಮ್ಸ್‌ಗೆ ಭೇಟಿ ನಿಡಿದ ನಾಲ್ಕನೆ ಕೇಂದ್ರ ಆರೋಗ್ಯ ಸಚಿವರಾಗಿದ್ದಾರೆ. ನೂತನ ವಾರ್ಡ್‌ಗಳು, ಫಾರ್ಮಸಿ ಸೇರಿದಂತೆ ಸೌಲಭ್ಯಗಳನ್ನು ಅವರು ಉದ್ಘಾಟಿಸಿದರು.