×
Ad

ಭಾರತ-ಇಸ್ರೇಲ್ ಜಂಟಿ ನಿರ್ಮಾಣದ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2016-09-20 19:27 IST

ಬಾಲಾಸೋರ,ಸೆ.20: ತನ್ನ ವಾಯು ರಕ್ಷಣಾ ಸಾಮರ್ಥ್ಯಗಳಿಗೆ ಇನ್ನಷ್ಟು ಬಲ ತುಂಬುವ ಪ್ರಯತ್ನವಾಗಿ ಭಾರತವಿಂದು ಇಸ್ರೇಲ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಿದ ನೂತನ,ಭೂಮಿಯಿಂದ ಆಗಸಕ್ಕೆ ಚಿಮ್ಮುವ ದೂರವ್ಯಾಪ್ತಿಯ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಒಡಿಶಾ ಕರಾವಳಿಯಾಚೆಯ ರಕ್ಷಣಾ ನೆಲೆಯಿಂದ ಯಶಸ್ವಿಯಾಗಿ ನಡೆಸಿತು. ಬಾಲಾಸೋರ ಬಳಿಯ ಚಾಂದೀಪುರದ ಸಮಗ್ರ ಪರೀಕ್ಷಾ ವಲಯ(ಐಟಿಆರ್)ದಿಂದ ಬೆಳಿಗ್ಗೆ 10:30ಕ್ಕೆ ಯಶಸ್ವಿಯಾಗಿ ಈ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಯಿತು ಎಂದು ಡಿಆರ್‌ಡಿಒ ಅಧಿಕಾರಿಯೋರ್ವರು ತಿಳಿಸಿದರು.

ಕ್ಷಿಪಣಿಯ ಜೊತೆಗೆ ಈ ವ್ಯವಸ್ಥೆಯು ಬಹು ಕಾರ್ಯನಿರ್ವಹಣೆಯ ಸರ್ವೇಕ್ಷಣೆ ಮತ್ತು ಬೆದರಿಕೆ ಎಚ್ಚರಿಕೆ ರಾಡಾರ್(ಎಂಎಫ್-ಎಸ್‌ಟಿಎಆರ್)ನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.

ಈ ಹಿಂದೆ 2016,ಜೂ.30 ಮತ್ತು ಜುಲೈ 1ರ ನಡುವೆ ಇದೇ ಚಾಂದೀಪುರದಿಂದ ಭಾರತ-ಇಸ್ರೇಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದ ಮೂರು ಮಧ್ಯಮ ವ್ಯಾಪ್ತಿಯ, ಭೂಮಿಯಿಂದ ಆಗಸಕ್ಕೆ ಚಿಮ್ಮುವ ಮೂರು ಕ್ಷಿಪಣಿಗಳ ಸರಣಿ ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು.

ಮಂಗಳವಾರದ ಪರೀಕ್ಷಾರ್ಥ ಪ್ರಯೋಗದ ಮುನ್ನ ಸುರಕ್ಷಿತ ಕ್ರಮವಾಗಿ ಬಾಲಾಸೋರ ಜಿಲ್ಲಾಡಳಿತವು ಉಡಾವಣಾ ತಾಣದ 2.5 ಕಿ.ಮೀ.ಪರಿಧಿಯಲ್ಲಿನ 3,652 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿತ್ತು. ಕರಾವಳಿಯಲ್ಲಿನ ಬಾಲಾಸೋರ,ಭದ್ರಕ್ ಮತ್ತು ಕೇಂದ್ರಪಾರಾ ಜಿಲ್ಲೆಗಳ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News