×
Ad

ಇಶಾಂತ್‌ಗೆ ಚಿಕುನ್‌ಗುನ್ಯಾ, ಮೊದಲ ಟೆಸ್ಟ್‌ಗೆ ಗೈರು

Update: 2016-09-20 23:54 IST

 ಹೊಸದಿಲ್ಲಿ, ಸೆ.20: ಭಾರತೀಯ ಕ್ರಿಕೆಟ್ ತಂಡ ಕಾನ್ಪುರದಲ್ಲಿ ಗುರುವಾರ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಹಾಗೂ ತನ್ನ ಐತಿಹಾಸಿಕ 500ನೆ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಇಶಾಂತ್ ಶರ್ಮ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಬೇಕಾಗಿದೆ. ದಿಲ್ಲಿಯ ವೇಗದ ಬೌಲರ್ ಇಶಾಂತ್ ಚಿಕುನ್‌ಗುನ್ಯಾ ಜ್ವರದಿಂದ ಬಳಲುತ್ತಿರುವುದೇ ಇದಕ್ಕೆ ಕಾರಣ.

 ಮೊದಲ ಟೆಸ್ಟ್‌ನಲ್ಲಿ ಇಶಾಂತ್ ಆಡುವುದಿಲ್ಲ ಎಂದು ದೃಢಪಡಿಸಿದ ಭಾರತದ ಕೋಚ್ ಅನಿಲ್ ಕುಂಬ್ಳೆ, ಇಶಾಂತ್ ಬದಲಿ ಆಟಗಾರನನ್ನು ಆಯ್ಕೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇಶಾಂತ್ ಅನುಪಸ್ಥಿತಿಯಲ್ಲಿ ಭಾರತದ ಮೂವರು ವೇಗಿಗಳಾದ ಉಮೇಶ್ ಯಾದವ್, ಮುಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್‌ರನ್ನು ಕಣಕ್ಕಿಳಿಸಬೇಕಾಗಿದೆ.

ರಾಜಸ್ಥಾನ, ದಿಲ್ಲಿ ಹಾಗೂ ಆಂಧ್ರಪ್ರದೇಶ ಸಹಿತ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಹಕ್ಕಿ ಜ್ವರ, ಡೆಂಘ್ ಹಾಗೂ ಚಿಕುನ್‌ಗುನ್ಯಾ ಹಾಗೂ ಇತರ ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ.

 28ರ ಪ್ರಾಯದ ಇಶಾಂತ್ ಶರ್ಮ ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದ ಅತ್ಯಂತ ಅನುಭವಿ ಬೌಲರ್ ಆಗಿದ್ದಾರೆ. 72 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 209 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ ಎಲ್ಲ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಇಶಾಂತ್ 8 ವಿಕೆಟ್‌ಗಳನ್ನು ಉರುಳಿಸಿದ್ದರು.

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನ ಪಿಚ್ ಕ್ಯುರೇಟರ್ ಹೇಳುವ ಪ್ರಕಾರ ಪಿಚ್‌ನಲ್ಲಿ ಹೆಚ್ಚು ತಿರುವು ಸಿಗದು. ಈ ಹಿನ್ನೆಲೆಯಲ್ಲಿ ಭಾರತದ ಮೂವರು ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಅಂತಿಮ 11ರ ಬಳಗದಲ್ಲಿ ಶಮಿ ಹಾಗೂ ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ವಿಭಾಗಕ್ಕೆ ಆಯ್ಕೆಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News