ಪೆಲೆಟ್ ಗನ್ ನಿಷೇಧಕ್ಕೆ ಹೈಕೋರ್ಟ್ ನಕಾರ
ಶ್ರೀನಗರ,ಸೆ.22: ಬೀದಿ ಪ್ರತಿಭಟನೆಗಳನ್ನು ನಿಯಂತ್ರಿಸಲು ಪೆಲೆಟ್ ಗನ್‌ಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ರಾಜ್ಯದಲ್ಲಿಯ ವಾಸ್ತವ ಸ್ಥಿತಿಯನ್ನು ಉಲ್ಲೇಖಿಸಿದ ಅದು, ಅನಿಯಂತ್ರಿತ ಗುಂಪಿನಿಂದ ಹಿಂಸಾಚಾರ ನಡೆಯುತ್ತಿರುವವರೆಗೂ ಬಲ ಪ್ರಯೋಗ ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪೆಲೆಟ್ ಗನ್‌ಗಳ ಬಳಕೆಗೆ ಆದೇಶಿಸಿದ ಅಥವಾ ಅದನ್ನು ಬಳಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬ ಕೋರಿಕೆಯನ್ನೂ ನಿರಾಕರಿಸಿದ ಮುಖ್ಯ ನ್ಯಾಯಾಧೀಶ ಎನ್.ಪಾಲ್ ವಸಂತಕುಮಾರ ಮತ್ತು ನ್ಯಾ.ಅಲಿ ಮೊಹಮ್ಮದ್ ಮ್ಯಾಗ್ರೆ ಅವರ ಪೀಠವು, ಗಾಯಾಳುಗಳಿಗೆ ರಾಜ್ಯದ ಅಥವಾ ರಾಜ್ಯದ ಹೊರಗಿನ ತಜ್ಞವೈದ್ಯರಿಂದ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ರಾಜ್ಯದಲ್ಲಿಯ ಸದ್ಯದ ಸ್ಥಿತಿಯನ್ನು ಪರಿಗಣಿಸಿ ಮತ್ತು ಪೆಲೆಟ್ ಗನ್‌ಗಳಿಗೆ ಪರ್ಯಾಯವೊಂದನ್ನು ಕಂಡುಕೊಳ್ಳಲು ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ರಚಿಸಿರುವ ತಜ್ಞರ ಸಮಿತಿಯು ಸಲ್ಲಿಸಲಿರುವ ವರದಿಯ ಕುರಿತು ಸರಕಾರವು ನಿರ್ಧಾರವೊಂದನ್ನು ಕೈಗೊಳ್ಳುವ ಮುನ್ನ ಅಪರೂಪದ ಮತ್ತು ಅತ್ಯಂತ ಗಂಭೀರ ಪರಿಸ್ಥಿತಿಗಳಲ್ಲಿ ಪೆಲೆಟ್ ಗನ್‌ಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ನಾವು ಒಲವು ಹೊಂದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ವಕೀಲರ ಸಂಘವು ಈ ಅರ್ಜಿಯನ್ನು ಸಲ್ಲಿಸಿತ್ತು.