ವಿಮಾನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿಗೆ ಬೆಂಕಿ
ಚೆನ್ನೈ,ಸೆ.23: ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 2ರಲ್ಲಿ ಬೆಂಕಿ ಕಾಣಿಸಿಕೊಂಡ ದೇಶದ ಲ್ಲಿಯ ಪ್ರಪ್ರಥಮ ಘಟನೆ ಶುಕ್ರವಾರ ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವಿಮಾನದಲ್ಲಿ ಸಂಭವಿಸಿದೆ. ಈ ಘಟನೆಯ ಬೆನ್ನಲ್ಲೇ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಸೆ.26ರಂದು ತನ್ನನ್ನು ಖುದ್ದಾಗಿ ಭೇಟಿಯಾಗುವಂತೆ ಸ್ಯಾಮ್ಸಂಗ್ ಕಂಪನಿಯ ಅಧಿಕಾರಿಗಳಿಗೆ ನಿರ್ದೇಶ ನೀಡಿದೆಯಲ್ಲದೆ,ವಿಮಾನಗಳಲ್ಲಿ ಸ್ಯಾಮ್ಸಂಗ್‌ನ ಈ ಸರಣಿಯ ಮೊಬೈಲ್ ಫೋನ್‌ಗಳ ಬಳಕೆಯನ್ನು ನಿಷೇಧಿಸಿದೆ.
ಇಂಡಿಗೋ ವಿಮಾನದಲ್ಲಿ ಘಟನೆ ಸಂಭವಿಸಿದೆ.
ಈ ಆತಂಕಕಾರಿ ಘಟನೆಯ ಬಳಿಕ ಡಿಜಿಸಿಎ ವಿಮಾನದೊಳಗೆ ತಮ್ಮ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಲು ಪ್ರಯಾಣಿಕರಿಗೆ ತಿಳಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ.
ವಿವಿಧ ರಾಷ್ಟ್ರಗಳಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 7 ಬ್ಯಾಟರಿಗಳು ಸ್ಫೋಟಿಸಿದ ಸರಣಿ ಘಟನೆಗಳ ಹಿನ್ನೆಲೆಯಲ್ಲಿ ಡಿಜಿಸಿಎ ವಿಮಾನಗಳಲ್ಲಿ ಅದರ ಬಳಕೆಯನ್ನು ನಿಷೇಧಿಸಿ ವಾರದ ಹಿಂದೆ ಆದೇಶಿಸಿತ್ತು. ಭಾರತದಲ್ಲಿ ವಿಮಾನದಲ್ಲಿ ಸ್ಯಾಮ್ಸಂಗ್ ಸಾಧನಕ್ಕೆ ಬೆಂಕಿ ಹತ್ತಿಕೊಂಡಿದ್ದು ಇದೇ ಮೊದಲ ಘಟನೆಯಾಗಿದೆ.
ಸ್ಮಾರ್ಟ್‌ಫೋನ್‌ನ ಬೆಂಕಿಯಿಂದ ವಿಮಾನದಲ್ಲಿ ಹೊಗೆ ಆವರಿಸಿದ್ದು,ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕವನ್ನು ಬಳಸಿ ಹೆಚ್ಚಿನ ಅಪಾಯವನ್ನು ನಿವಾರಿಸಿದರು.